ಬೆಂಗಳೂರು(ಜ.05): ರಾಜ್ಯದ ಶಾಲಾ- ಕಾಲೇಜುಗಳಲ್ಲಿ ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳವಾಗುತ್ತಿದೆ. ಶಾಲೆಗಳಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳ ಪರಿಣಾಮ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದು, ಸೋಮವಾರ 10ನೇ ತರಗತಿಯ ಶೇ.51.95 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯ ಶೇ.55.18 ರಷ್ಟುವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ.

ಜ.1ರಂದು ಆರಂಭವಾಗಿದ್ದ ಮೊದಲ ದಿನ ಶೇ.41ರಷ್ಟುಎಸ್‌ಎಸ್‌ಎಲ್‌ಸಿ ಹಾಗೂ ಶೇ.32.56ರಷ್ಟುಪಿಯುಸಿ ವಿದ್ಯಾರ್ಥಿಗಳು ಹಾಜರಾಗಿದ್ದರೆ, ಎರಡನೇ ದಿನ ಶೇ.45ರಷ್ಟುಎಸ್‌ಎಸ್‌ಎಲ್‌ಸಿ ಹಾಗೂ ಶೇ.33ರಷ್ಟುದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದೀಗ ಮೂರನೇ ದಿನ 4,81,728 (ಶೇ. 51.95) ಎಸ್‌ಎಸ್‌ಎಲ್‌ಸಿ ಹಾಗೂ 1,99,553 (ಶೇ.55.18) ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ: 3 ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್

ಈ ಕುರಿತು ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, ಪ್ರಸ್ತುತ ವರ್ಷದ ಶಾಲಾರಂಭದ ನಾಲ್ಕನೇ ದಿನವಾದ ಸೋಮವಾರ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದು ಶಾಲಾ-ಕಾಲೇಜುಗಳನ್ನು ಆರಂಭಿಸಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಜೊತೆಗೆ 6ರಿಂದ 9ನೇ ತರಗತಿಗಳಿಗೆ ನಡೆಯುತ್ತಿರುವ ವಿದ್ಯಾಗಮ ತರಗತಿಗಳಿಗೂ ಸೋಮವಾರ 4,71,823 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.

ವಿದ್ಯಾಗಮ ತರಗತಿಗಳೂ ಸಹ ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಹೆಚ್ಚಿನ ಮಕ್ಕಳು ಹಾಜರಾಗುತ್ತಿದ್ದಾರೆ. ಈ ಬಗ್ಗೆ ಪೋಷಕರು ಮತ್ತು ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ. ಹತ್ತು ತಿಂಗಳ ಕಾಲ ಶಾಲೆಗಳು ಆರಂಭವಾಗದಿದ್ದರಿಂದ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಲ್ಲಿದ್ದ ಆತಂಕವನ್ನು ದೂರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಾಣೆಬೆನ್ನೂರು, ಮೂಡಿಗೆರೆಯಲ್ಲಿ 11ಕ್ಕೆ ಶಾಲೆ ಆರಂಭ

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಿಕ್ಕ ಕುರುವತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಒಂದು ಖಾಸಗಿ ಶಾಲೆಯ ಒಬ್ಬೊಬ್ಬ ಶಿಕ್ಷಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕರು ಮತ್ತು ಕಳಸಾ ತಾಲೂಕಿನ ಖಾಸಗಿ ಶಾಲೆಯ ಇಬ್ಬರು ಶಿಕ್ಷಕರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಶಾಲೆಗಳನ್ನು ಮುಂದಿನ ಸೋಮವಾರ (ಜ.11) ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.