ಬೆಂಗಳೂರು(ಮಾ.20): ‘ಖಾಸಗಿ ಶಾಲೆಗಳು ಶುಲ್ಕ ವಿಚಾರಕ್ಕಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಡುವುದು, ಆನ್‌ಲೈನ್‌ ತರಗತಿ ಬಂದ್‌ ಮಾಡುವುದನ್ನು ಮಾಡಿದರೆ ಶಿಕ್ಷಣ ಇಲಾಖೆ ತನ್ನ ಪರಮಾಧಿಕಾರ ಚಲಾಯಿಸಬೇಕಾಗುತ್ತದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಎಚ್ಚರಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಸಚಿವರು, ‘ಪದೇ ಪದೇ ಎಚ್ಚರಿಕೆ ನೀಡಿದರೂ ಖಾಸಗಿ ಶಾಲೆಗಳು ಈ ವಿಚಾರದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಪರಮಾಧಿಕಾರ (ಶಾಲೆಗಳ ಮಾನ್ಯತೆ ರದ್ದುಪಡಿಸುವುದು) ಬಳಸಬೇಕಾದೀತು’ ಎಂದಿದ್ದಾರೆ.

ಬೆಂಗಳೂರಿನ ರಾಯಲ್‌ ಕಾನ್‌ಕಾರ್ಡ್‌ ಶಾಲೆಯಲ್ಲಿ ಶುಲ್ಕ ವಿಚಾರಕ್ಕಾಗಿ ಕೆಲ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟಪ್ರಕರಣ, ಕೋರಮಂಗಲದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ಇದೇ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ, ಶ್ರೀರಂಗಪಟ್ಟಣ ತಾಲೂಕಿನ ಕೇಂಬ್ರಿಡ್ಜ್‌ ಪಬ್ಲಿಕ್‌ ಶಾಲೆಯಲ್ಲಿ 1ರಿಂದ 5ನೇ ತರಗತಿ ಆರಂಭಿಸಿ ಪೂರ್ಣ ಶುಲ್ಕಕ್ಕೆ ಒತ್ತಾಯಿಸಿರುವ ಪ್ರಕರಣಗಳನ್ನು ಉಲ್ಲೇಖಿಸಿರುವ ಸಚಿವರು, ‘ಸಾಮಾಜಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಇಂತಹ ದುರದೃಷ್ಟಪ್ರಕರಣಗಳು ನಡೆಯುತ್ತಿರುವುದು ವಿದ್ಯಾರ್ಥಿಗಳ ಆತ್ಮವಿಶ್ವಾಸ ಕುಂದಿಸುವುದಲ್ಲದೆ ದೇಶದ ಭವಿಷ್ಯದ ಹಿತದೃಷ್ಟಿಯಿಂದಲೂ ಒಳ್ಳೆಯ ಬೆಳವಣಿಗೆಯಲ್ಲ’ ಎಂದಿದ್ದಾರೆ.

‘ಶಾಲಾಡಳಿತ ಮಂಡಳಿಗಳು ಮತ್ತು ಪೋಷಕರ ನಡುವಿನ ಇಂತಹ ಸಂಘರ್ಷಗಳು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಹಾಗಾಗಿ ಇಂತಹ ಪ್ರಕರಣಗಳಿಗೆ ಎಡೆಮಾಡಿಕೊಡದಂತೆ ಪದೇ ಪದೇ ಹೇಳಿದ್ದೇನೆ. ಹೈಕೋರ್ಟ್‌ ಕೂಡ ಈ ಅತಿಸೂಕ್ಷ್ಮ ವಿಷಯವನ್ನು ಬಹಳ ನಾಜೂಕಿನಿಂದ ನಿರ್ವಹಿಸಬೇಕೆಂದು ಒತ್ತಿ ಹೇಳಿದೆ. ಆದರೂ ಮರುಕಳಿಸುತ್ತಿವೆ. ಮಕ್ಕಳ ಹಿತ ಗಮನದಲ್ಲಿಟ್ಟುಕೊಂಡು ಆಡಳಿತ ಮಂಡಳಿಗಳು ಇನ್ನಾದರೂ ಸಂವೇದನೆಯಿಂದ, ಜವಾಬ್ದಾರಿಯಿಂದ ನಡೆಯಬೇಕು. ಮತ್ತೆ ಇಂತಹ ಪ್ರಕರಣಗಳು ಮರುಕಳಿಸಿದರೆ ಅಂತಹ ಶಾಲೆಗಳ ವಿರುದ್ಧ ಪರಮಾಧಿಕಾರ ಚಲಾಯಿಸಬೇಕಾಗುತ್ತದೆ’ ಎಂದು ಸ್ಪಷ್ಟಎಚ್ಚರಿಕೆ ನೀಡಿದ್ದಾರೆ.