ಬೆಂಗಳೂರು(ಸೆ.28): ಪದವಿ ಪೂರ್ವ ಪರೀಕ್ಷಾ ಮಂಡಳಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೊಂದಿಗೆ ವಿಲೀನಗೊಳಿಸುವುದನ್ನು ವಿರೋಧಿಸಿ ಹೋರಾಟ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಬೋಧಕೇತರ ಸಂಘ ನಿರ್ಧರಿಸಿವೆ. ಹೋರಾಟ ನಡೆಸುವ ಸಂಬಂಧ ಭಾನುವಾರ ಶಾಸಕರ ಭವನದಲ್ಲಿ ನಡೆದ ಸಭೆಯಲ್ಲಿ ಮೂರು ಸಂಘಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿ ರಚಿಸಲಾಗಿದೆ.

ಇತ್ತೀಚೆಗೆ ಪಿಯು ಇಲಾಖೆಯು 2020-21ನೇ ಸಾಲಿನ ಪಿಯುಸಿ ಪರೀಕ್ಷೆಗಳನ್ನು ಎಸ್‌ಎಸ್‌ಎಲ್‌ಸಿ ಮಂಡಳಿ ವತಿಯಿಂದ ನಡೆಸುವ ಕುರಿತು ಸರ್ಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಲು ಉದ್ದೇಶಿಸಿದೆ. ಅದರಂತೆ ಪಿಯು ಪರೀಕ್ಷಾ ವಿಭಾಗವನ್ನು ಎಸ್‌ಎಸ್‌ಎಲ್‌ಸಿ ಮಂಡಳಿಯೊಂದಿಗೆ ವಿಲೀನಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಜಂಟಿ ಕ್ರಿಯಾ ಸಮಿತಿ ರಚಿಸಲಾಗಿದೆ.

ರಾಜ್ಯದಲ್ಲಿ ಶೀಘ್ರ ಶಾಲೆಗಳು ಆರಂಭವಾಗುತ್ತಾ..?

ಸಭೆಯಲ್ಲಿ ವಿವರಗಳನ್ನು ತಿಳಿಸಿದ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್‌. ನಿಂಗೇಗೌಡ, ಮಂಡಳಿ ವಿಲೀನದ ಬಗ್ಗೆ ಚರ್ಚಿಸದೆ, ಉಪನ್ಯಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ಕಾರ ವಿಲೀನಕ್ಕೆ ಮುಂದಾಗಿದೆ. ಈ ಸಂಬಂಧ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಿದ್ದೇವೆ. ಪ್ರಸ್ತಾವನನ್ನು ಕೈಬಿಡದೇ ಇದ್ದರೆ ಜಂಟಿ ಕ್ರಿಯಾ ಸಮಿತಿ ಮೂಲಕ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದರು.

ಈ ಸಂಬಂಧ ಚರ್ಚಿಸಲು ಪ್ರಾಂಶುಪಾಲರ ಸಂಘದ ಗೌರವಾಧ್ಯಕ್ಷರಾದ ಕೆ.ಟಿ.ಶ್ರೀಕಂಠೇಗೌಡ, ಬೋಧಕತೇರ ಸಂಘದ ಅಧ್ಯಕ್ಷ ನಂದೀಶ್‌ ಸೇರಿದಂತೆ ಸುಮಾರು 50 ಮಂದಿ ಪದಾಧಿಕಾರಿಗಳು ಚರ್ಚೆ ಮಾಡಿ, ಜಂಟಿ ಕ್ರಿಯಾ ಸಮಿತಿ ರಚನೆ ಮಾಡಿದ್ದೇವೆ. ಮುಂದಿನ ಹೋರಾಟಗಳನ್ನು ಈ ಸಮಿತಿಯ ಮೂಲಕವೇ ಮಾಡಲಿದ್ದೇವೆ ಎಂದರು.