ಬೆಂಗಳೂರು(ಸೆ.30): ನಗರದ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಐಯು) ವಿದ್ಯಾರ್ಥಿ ಯಮುನಾ ಮೆನನ್‌ ಅವರು ಕಾನೂನು ಪದವಿಯಲ್ಲಿ 18 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಳೆದ ಭಾನುವಾರ ನಡೆದ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವದಲ್ಲಿ ಪದಕ ಪ್ರದಾನ ಮಾಡಲಾಗಿದೆ. ಪದಕ ಪಡೆದಿರುವ ಕುರಿತು ಮಾತನಾಡಿರುವ ಅವರು, ತಾನು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಸುಪ್ರೀಂಕೋರ್ಟ್‌ ವಕೀಲರಾಗಿ ಸೇವೆ ಸಲ್ಲಿಸಿದ್ದ ಜೋಸೆಫ್‌ ಅವರು ಹೇಳಿದ ಕತೆಗಳು ನನಗೆ ಕಾನೂನು ಅಭ್ಯಸಿಸಲು ಪ್ರೇರಣೆ ನೀಡಿದವು. ಕೆಲವು ಸಮಯ ಅವರಿಗೆ ಕಂಪ್ಯೂಟರ್‌ಗೆ ಸಂಬಂಧಿಸಿದಂತೆ ತಾಂತ್ರಿಕವಾಗಿ ಸಹಾಯ ಮಾಡುತ್ತಿದ್ದೆ, ಈ ವೇಳೆ ಕವನ ಸಂಕಲಗಳನ್ನು ರಚಿಸುತ್ತಾ ಮಾತನಾಡುತ್ತಿದ್ದ ಜೋಸೆಫ್‌, ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುವುದರ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದರು. ಇಂತಹ ಅನೇಕ ಕತೆಗಳು ನನಗೆ ಪ್ರೇರಣೆ ನೀಡಿವೆ ಎಂದು ತಿಳಿಸಿದ್ದಾರೆ.

ಇನ್ನೂ ಮೂರು ತಿಂಗಳು ಶಾಲೆ ಪುನಾರಂಭ ಬೇಡ, ನಾವು ಕಳ್ಸೋದು ಇಲ್ಲ: ಪೋಷಕರ ಒತ್ತಾಯ

ಸದ್ಯ ಸ್ನಾತಕೋತ್ತರ ಕಾನೂನು ಪದವಿ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ಹೋಗಲು ಸಜ್ಜಾಗಿದ್ದೇನೆ. ಆಕ್ಸ್‌ಫರ್ಡ್‌ ಮತ್ತು ಟ್ರಿನಿಟಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿವೇತನ ನೀಡುವುದಕ್ಕಾಗಿ ಆಹ್ವಾನ ನೀಡಿವೆ. ಈ ಪೈಕಿ ಟ್ರಿನಿಟಿ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲು ಬಯಸಿದ್ದೇನೆ. ಶಿಕ್ಷಣ ಮುಗಿಸಿದ ಬಳಿಕ ದೇಶಕ್ಕಾಗಿ ಕೊಡುಗೆ ನೀಡಲು ಭಾರತಕ್ಕೆ ವಾಪಸ್ಸಾಗಲಿದ್ದೇನೆ ಎಂದು ತಿಳಿಸಿದ್ದಾರೆ.

ಕೊಚ್ಚಿಯ ಉದಯಂಪೂರ್‌ ಮೂಲದ ಯಮುನಾ 2014ರಲ್ಲಿ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್‌ಎಟಿ) ನಂತರ ಕಾನೂನು ವಿಶ್ವವಿದ್ಯಾಲಯಕ್ಕೆ ಸೇರಲು ಇಚ್ಛಿಸಿದ್ದರು. ಅವಕಾಶ ಸಿಗದಿದ್ದರಿಂದ ಮತ್ತೆ 2015ರಲ್ಲಿ ಕ್ಲಾಟ್‌ ಪರೀಕ್ಷೆ ಬರೆದು 28ನೇ ರಾರ‍ಯಂಕ್‌ ಪಡೆದಿದ್ದರು.