ಬೆಂಗಳೂರು(ಮಾ.06): ‘ಕೋವಿಡ್‌-19’ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಕೊಂಚ ವ್ಯತ್ಯಾಸವಾಗಲಿದೆ. ಇದುವರೆಗೆ 20 ಅಂಕಗಳಿಗೆ ಕೇಳಲಾಗುತ್ತಿದ್ದ ಬಹುಉತ್ತರ ಆಯ್ಕೆ (ಮಲ್ಪಿಪಲ್‌ ಚಾಯ್‌್ಸ) ಪ್ರಶ್ನೆಗಳು ಈ ಬಾರಿ 30 ಅಂಕಗಳಿಗೆ ಹೆಚ್ಚಳವಾಗಲಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಮಾಹಿತಿ ನೀಡಿದ್ದು, ಈ ಸಂಬಂಧ ಪ್ರಶ್ನೆ ಪತ್ರಿಕೆಯ ಮಾದರಿಯನ್ನೂ ಅಂತಿಮಗೊಳಿಸಿ ಈಗಾಗಲೇ ಶಾಲೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್‌ ಕಾರಣದಿಂದ ತಡವಾಗಿ ಶಾಲೆಗಳು ಆರಂಭವಾಗಿ ಬೋಧನೆಗೆ ಕಾಲಾವಕಾಶದ ಕೊರತೆ ಹಿನ್ನೆಲೆಯಲ್ಲಿ ಈಗಾಗಲೇ ಶೇ.30ರಷ್ಟುಪಠ್ಯ ಕಡಿತ ಮಾಡಲಾಗಿದೆ. ಇದರ ಜತೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈಗ ಪ್ರಶ್ನೆ ಪತ್ರಿಕೆಯಲ್ಲಿ ತಲಾ ಒಂದು ಅಂಕದ 20 ಪ್ರಶ್ನೆಗಳ ಬದಲು 30 ಅಂಕಗಳ ಪ್ರಶ್ನೆ ಕೇಳಲು ತೀರ್ಮಾನಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಗಳಿಸಲು ಸಹಾಯವಾಗಲಿದೆ.

1 ಅಂಕದ ಪ್ರಶ್ನೆಗಳ ಹೆಚ್ಚಳದಿಂದ 2, 3 ಮತ್ತು 5 ಅಂಕದ ಪ್ರಶ್ನೆಗಳಲ್ಲಿ ಒಂದೆರಡು ಪ್ರಶ್ನೆಗಳು ಕಡಿಮೆಯಾಗಲಿವೆ. ಉಳಿದೆಲ್ಲವೂ ಹಿಂದಿನ ಪ್ರಶ್ನೆಪತ್ರಿಕೆ ಮಾದರಿಯಲ್ಲೇ ಇರುತ್ತದೆ. ಒಂದು ಅಂಕದ ಪ್ರಶ್ನೆಗಳ ಹೆಚ್ಚಳದಂತಹ ಸಣ್ಣ ಬದಲಾವಣೆ ಹೊರತುಪಡಿಸಿದರೆ ಪ್ರಶ್ನೆ ಪತ್ರಿಕೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಗದಿಪಡಿಸಿರುವ ಗುಣಮಟ್ಟದ ಮಾನದಂಡದಲ್ಲೇ ಇರುತ್ತದೆ. ಒಟ್ಟಾರೆ ಅಂಕದಲ್ಲಾಗಲಿ, ಗುಣಮಟ್ಟದಲ್ಲಾಗಲಿ ಬದಲಾವಣೆ ಇರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಭಾಷೆ ಕನ್ನಡಕ್ಕೆ ಮಾತ್ರ 125 ಅಂಕಗಳಿಗೆ ಪರೀಕ್ಷೆ ನಡೆದರೆ, ಉಳಿದೆಲ್ಲಾ ವಿಷಯಗಳಿಗೆ ತಲಾ 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಶೇ.80ರಷ್ಟುಅಂಕಗಳಿಗೆ ಲಿಖಿತವಾಗಿ ಪ್ರಶ್ನೆಗಳಿಗೆ ಉತ್ತರಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆಯುವ ಉತ್ತರ ಆಧರಿಸಿ ಮೌಲ್ಯಮಾಪಕರು ಈ ಅಂಕ ನೀಡುತ್ತಾರೆ. ಉಳಿದ ಶೇ.20ರಷ್ಟುಅಂಕಗಳು ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ (ಇಂಟರ್ನಲ್‌ ಅಸೆಸ್‌ಮೆಂಟ್‌)ದಿಂದ ದೊರೆಯುತ್ತವೆ. ಈ ಅಂಕಗಳನ್ನು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ಆಧಾರದ ಮೇಲೆ ಆಯಾ ವಿಷಯ ಶಿಕ್ಷಕರೇ ನೀಡುತ್ತಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಲಾ 1 ಅಂಕದ ಬಹು ಉತ್ತರ ಆಯ್ಕೆಯ ಪ್ರಶ್ನೆಗಳನ್ನು 30 ಅಂಕಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಉಳಿದಂತೆ ಪ್ರಶ್ನೆ ಪತ್ರಿಕೆಯ ಮಾದರಿ ಯಥಾಸ್ಥಿತಿಯಲ್ಲಿರುತ್ತದೆ. ಈ ಬಗ್ಗೆ ಮಾದರಿ ಪ್ರಶ್ನೆಪತ್ರಿಕೆಗಳನ್ನು ಈಗಾಗಲೇ ಶಾಲೆಗಳಿಗೆ ಕಳುಹಿಸಲಾಗಿದೆ.

- ವಿ.ಅನ್ಬುಕುಮಾರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ

ಸಿಬಿಎಸ್‌ಇ ಪರೀಕ್ಷೆ ದಿನಾಂಕ ಬದಲು

ನವ​ದೆ​ಹ​ಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡ​ಳಿ (ಸಿಬಿ​ಎ​ಸ್‌​ಇ)ಯ 10 ಮತ್ತು 12ನೇ ತರ​ಗ​ತಿಯ ಗಣಿತ, ಕಾಮ​ರ್ಸ್‌ ಮತ್ತು ಭೌತ​ಶಾಸ್ತ್ರ ಸೇರಿ​ದಂತೆ ಇನ್ನಿ​ತರ ವಿಷ​ಯ​ಗಳ ದಿನಾಂಕ​ವನ್ನು ಪರಿ​ಷ್ಕ​ರಣೆ ಮಾಡ​ಲಾ​ಗಿದೆ. 10ನೇ ತರ​ಗ​ತಿಯ ವಿಜ್ಞಾನ ಪರೀ​ಕ್ಷೆ ಮೇ 21ಕ್ಕೆ, ಗಣಿತ ಪರೀ​ಕ್ಷೆ ಜೂ 2ಕ್ಕೆ ನಡೆ​ಯ​ಲಿದೆ. 12ನೇ ತರ​ಗ​ತಿಯ ಭೌತ​ಶಾಸ್ತ್ರ ಪರೀ​ಕ್ಷೆ ಜೂ.8ಕ್ಕೆ, ವಿಜ್ಞಾನ ಮತ್ತು ಕಾಮ​ರ್ಸ್‌ ವಿದ್ಯಾ​ರ್ಥಿ​ಗ​ಳಿಗೆ ಗಣಿತ ಮತ್ತು ಅಪ್ಲೈಡ್‌ ಗಣಿ​ತ ಪರೀಕ್ಷೆ ಮೇ 31ಕ್ಕೆ ನಡೆಯಲಿದೆ.