Asianet Suvarna News Asianet Suvarna News

SSLC ಪರೀಕ್ಷೆ 2 ದಿನ: ಬಹು ಆಯ್ಕೆ ಮಾದರಿ, ಯಾರನ್ನೂ ಫೇಲ್ ಮಾಡಲ್ಲ!

* ಎಸ್ಸೆಸ್ಸೆಲ್ಸಿ ಪರೀಕ್ಷೆ 2 ದಿನ ಮಾತ್ರ, ಅಧಿಕೃತ ಆದೇಶ

* ಬಹು ಆಯ್ಕೆ ಮಾದರಿ, ಯಾರನ್ನೂ ಫೇಲ್ ಮಾಡಲ್ಲ

* ಪರೀಕ್ಷಾ ವೇಳಾಪಟ್ಟಿ ಜೂನ್‌ ಮೂರನೇ ವಾರ ಪ್ರಕಟಿಸುವ ಸಾಧ್ಯತೆ 

Karnataka SSLC exams will be held for two days Paper in MCQ format pod
Author
Bangalore, First Published Jun 19, 2021, 7:55 AM IST

ಬೆಂಗಳೂರು(ಜೂ.19): ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸರಳೀಕರಿಸಿ ಕೇವಲ ಎರಡೇ ದಿನದಲ್ಲಿ ನಡೆಸಲು ನಿರ್ಧರಿಸಿದ್ದ ಶಿಕ್ಷಣ ಇಲಾಖೆ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ. ಪರೀಕ್ಷಾ ವೇಳಾಪಟ್ಟಿಜೂನ್‌ ಮೂರನೇ ವಾರ ಪ್ರಕಟಿಸುವ ಸಾಧ್ಯತೆ ಇದೆ.

ಕೋವಿಡ್‌ನಿಂದಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಹಿಂದಿನ ಸಾಲಿನ (9ನೇ ತರಗತಿ) ಪರೀಕ್ಷೆ ನಡೆದಿಲ್ಲ. ಜತೆಗೆ ಎಸ್ಸೆಸ್ಸೆಲ್ಸಿಯಲ್ಲೂ ಸಮರ್ಪಕವಾಗಿ ಪಠ್ಯ ಬೋಧನೆ, ಪ್ರಿಪರೇಟರಿ ಸೇರಿ ಯಾವುದೇ ಪರೀಕ್ಷೆಗಳು ನಡೆದಿಲ್ಲ. ಹಾಗಾಗಿ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ. ಪರೀಕ್ಷೆ ಸರಳೀಕರಿಸಿ ಒಂದು ದಿನ ಕೋರ್‌ ವಿಷಯಗಳು ಮತ್ತೊಂದು ದಿನ ಭಾಷಾ ವಿಷಯಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕೇವಲ ಬಹು ಉತ್ತರ ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಆರು ದಿನ ಪರೀಕ್ಷೆ ನಡೆಸಿದರೆ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗುವುದು ಕಷ್ಟವಾಗುತ್ತದೆ. ಹಾಗಾಗಿ ಪ್ರತಿ ಮೂರು ವಿಷಯಕ್ಕೆ ಒಂದೊಂದು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು. ಒಟ್ಟು ಮೂರು ಕೋರ್‌ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆಪತ್ರಿಕೆ ನೀಡಲಾಗುವುದು. 3 ಭಾಷಾ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆಪತ್ರಿಕೆ ನೀಡಲಾಗುವುದು. ಪರೀಕ್ಷಾ ಸಮಯವನ್ನು ಅಪರಾಹ್ನ 10.30 ರಿಂದ 01.30 ಗಂಟೆಯವರೆಗೆ ನಿಗದಿಪಡಿಸಿ, ಒಟ್ಟು 3.00 ಗಂಟೆಯ ಕಾಲಾವಕಾಶವಿರುತ್ತದೆ ಎಂದು ಇಲಾಖೆ ತಿಳಿಸಿದೆ.

ಈ ವರ್ಷ ಪರೀಕ್ಷಾ ಕೇಂದ್ರಗಳನ್ನು ದುಪ್ಪಟ್ಟುಗೊಳಿಸಲಾಗುವುದು. ಒಂದು ಕೊಠಡಿಗೆ ಗರಿಷ್ಠ 12 ವಿದ್ಯಾರ್ಥಿಗಳಂತೆ, ಒಂದು ಡೆಸ್ಕ್‌ಗೆ ಕೇವಲ ಒಬ್ಬ ವಿದ್ಯಾರ್ಥಿಯಂತೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದೆ.

9.77 ಲಕ್ಷ ಮಾಸ್ಕ್‌:

ಎಸ್ಸೆಸ್ಸೆಲ್ಸಿಗೆ ನೋಂದಾಯಿಸಿಕೊಂಡಿರುವ 8.77 ಲಕ್ಷ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಇತರೆ ಸಿಬ್ಬಂದಿ ಸೇರಿ 1 ಲಕ್ಷ ಮಂದಿಗೆ ಎನ್‌95 ಮಾಸ್ಕ್‌ ಖರೀದಿಸಿ ನೀಡಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿಧಿಯಿಂದ ಅನುದಾನ ಬಳಕೆಗೆ ಇಲಾಖೆ ಒಪ್ಪಿಗೆ ನೀಡಿದೆ. ಕೋವಿಡ್‌ ಮಾರ್ಗಸೂಚಿ ಅನುಸರಿಸುವುದು ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದೆ.

100 ಅಂಕಕ್ಕೆ ಫಲಿತಾಂಶ ಪರಿವರ್ತನೆ:

ಯಾರನ್ನೂ ಅನುತ್ತೀರ್ಣಗೊಳಿಸುವುದಿಲ್ಲ. ಪಾಸಾಗಲು ಅಗತ್ಯ ಕನಿಷ್ಠ ಅಂಕ ನೀಡಲಾಗುವುದು. ಪ್ರತಿ ವಿಷಯದಲ್ಲಿ ವಿದ್ಯಾರ್ಥಿ ಪಡೆದ ಅಂಕಗಳನ್ನು ಗರಿಷ್ಠ 100 ಅಂಕಗಳಿಗೆ ಪರಿವರ್ತಿಸಿ ಫಲಿತಾಂಶ ನೀಡಲಾಗುವುದು. ಅಂಕ ಹಾಗೂ ಗ್ರೇಡ್‌ ಎರಡೂ ಆಧಾರದಲ್ಲಿ ಫಲಿತಾಂಶ ನೀಡಲಾಗುತ್ತದೆ ಎಂದು ಪ್ರೌಢಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ.

Follow Us:
Download App:
  • android
  • ios