ಬೆಂಗಳೂರು (ಮಾ.04):  ಬರುವ ಜೂನ್‌ ತಿಂಗಳಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ನೋಂದಣಿ ಹಾಗೂ ಶುಲ್ಕ ಪಾವತಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತೊಮ್ಮೆ ದಿನಾಂಕ ವಿಸ್ತರಿಸಿದೆ. 

ಮಂಡಳಿಯ ಜಾಲತಾಣದ ಮೂಲಕ ಪ್ರತಿ ಶಾಲೆಯು ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಂಡು ಅದರ ಮಾಹಿತಿಯನ್ನು ಅಪ್‌ಲೋಡ್‌ ಮಾಡಲು ಮಾ.3ರವರೆಗಿದ್ದ ಕಾಲಾವಕಾಶವನ್ನು ಮಾ.10ಕ್ಕೆ ವಿಸ್ತರಿಸಲಾಗಿದೆ.

ವಿದ್ಯಾರ್ಥಿಗಳೇ ಗಮನಿಸಿ: SSLC ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಕೊಂಚ ಬದಲಾವಣೆ ..

 ಅದೇ ರೀತಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕದ ಚಲನ್‌ ಪಡೆಯಲು ಮಾ.23ರ ವರೆಗೆ, ಚಲನ್‌ ಮೂಲಕ ಬ್ಯಾಂಕ್‌ಗೆ ಪರೀಕ್ಷಾ ಶುಲ್ಕ ಪಾವತಿಸಲು ಮಾ.10ರವರೆಗಿದ್ದ ಕಾಲಾವಕಾಶವನ್ನು ಮಾ.24ರ ವರೆಗೆ ವಿಸ್ತರಿಸಲಾಗಿದೆ. 

2002 ಮತ್ತು ಅದಕ್ಕೂ ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪುನರಾವರ್ತಿತ ಅಭ್ಯರ್ಥಿಗಳು ಮಂಡಳಿಗೆ ನೆಫ್ಟ್‌ ಚಲನ್‌ ಮೂಲಕ ಶುಲ್ಕ ಪಾವತಿಸಿದ ಮೂಲ ಚಲನ್‌ ಮತ್ತು ನಾಮಿನಲ್‌ ರೋಲ್‌ ಮತ್ತು ಸಂಬಂಧಿತ ಇತರ ದಾಖಲೆಗಳನ್ನು ಮಂಡಳಿಗೆ ಸಲ್ಲಿಸಲು ಮಾ.31 ಅಂತಿಮ ದಿನವಾಗಿದೆ.