Asianet Suvarna News Asianet Suvarna News

ಅಧಿಕೃತ ಘೋಷಣೆ: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಫೈನಲ್

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

Karnataka Second PUC Exam Time Table Final Start From may 24 to june 16th rbj
Author
Bengaluru, First Published Feb 12, 2021, 7:35 PM IST

ಬೆಂಗಳೂರು, (ಫೆ.12):   ರಾಜ್ಯದ ಎಲ್ಲ ಭಾಗಗಳಿಂದಲೂ ಪ್ರಸ್ತುತ ಶೈಕ್ಷಣಿಕ ವರ್ಷದ ಉಳಿದ ತರಗತಿಗಳನ್ನು ಆರಂಭಿಸಬೇಕೆಂಬ ಪೋಷಕರು, ವಿದ್ಯಾರ್ಥಿ ಸಮುದಾಯ ಒತ್ತಾಯದ ಹಿನ್ನೆಲೆಯಲ್ಲಿ ಶಾಲಾರಂಭ ಕುರಿತಂತೆ ಫೆ. 16ರಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಶುಕ್ರವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಇಲಾಖೆಯ ಹಲವಾರು ವಿಷಯಗಳ ಮತ್ತು ಈಗಾಗಲೇ ಆರಂಭವಾಗಿರುವ ತರಗತಿಗಳ ಹಾಜರಾತಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಉಳಿದ ತರಗತಿಗಳ ಆರಂಭ ಕುರಿತು ವ್ಯಾಪಕವಾದ ಒತ್ತಾಯ ಕೇಳಿಬರುತ್ತಿದೆ ಎಂದರು. 

ತಾವು ಇತ್ತೀಚೆಗೆ ಭೇಟಿ ನೀಡಿದ 15ಕ್ಕೂ ಹೆಚ್ಚು ಜಿಲ್ಲೆಗಳ ಹಲವಾರು ಶಾಲೆಗಳಲ್ಲಿ ಕೋವಿಡ್ ನಿಯಮಗಳ ಪಾಲನೆ ಮಾಡುತ್ತಿರುವುದನ್ನು ತಾವು ಖುದ್ದಾಗಿ ಪರಿಶೀಲಿಸಿದ್ದು, ಶಾಲೆಗಳು ತಡವಾಗಿ ಆರಂಭವಾಗಿರುವುದರಿಂದ ಶಾಲೆಗಳಿಗೆ ಬಹು ಆಸ್ಥೆಯಿಂದ ಬರುತ್ತಿದ್ದಾರೆ. ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಪಾಠ ಪ್ರವಚನ ಆಲಿಸುತ್ತಿರುವುದು ಕಂಡು ಬಂದಿದೆ ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಶಾಲಾ ಸುರಕ್ಷತಾ ನಿಯಮಗಳ ಕುರಿತ ಸಭೆ:  ಕಳೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಪ್ರಸ್ತಾಪವಾದ ಖಾಸಗಿ ಶಾಲೆಗಳ ಸುರಕ್ಷತಾ ನಿಯಮಗಳ ಸರಳೀಕರಿಸಬೇಕೆಂಬ ಪ್ರಸ್ತಾವನೆಗಳ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪಿನ ವ್ಯಾಪ್ತಿಯಲ್ಲಿಯೇ ಮರು ಪರಿಶೀಲಿಸುವ ಕುರಿತು ಫೆ. 16ರಂದು ಅಗ್ನಿಶಾಮಕ ದಳ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗೃಹ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು. 

ಕಡತ ವಿಲೇವಾರಿ ಯಜ್ಞ: 
ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಉಪನಿರ್ದೇಶಕರ ಕಚೇರಿಗಳಲ್ಲಿ ಕೆಲಸಗಳು ಸರಿಯಾಗಿ ಹಾಗೂ ಸಕಾಲದಲ್ಲಿ ಆಗುತ್ತಿಲ್ಲವೆಂದು ಪದೇ ಪದೇ ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ಕಡತ ವಿಲೇವಾರಿ ಯಜ್ಞಕ್ಕೆ ಚಾಲನೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಸುರೇಶ್ ಕುಮಾರ್, ತಂತ್ರಜ್ಞಾನಾಧಾರಿತವಾದ ಆಡಳಿತಕ್ಕೆ ಪ್ರಾಶಸ್ತ್ಯ ನೀಡಬೇಕೆಂದು ಸೂಚನೆ ನೀಡಿದರು. ಮಾರ್ಚ್ ಒಂದರಂದು ಧಾರವಾಡ ಅಪರ ಆಯುಕ್ತಾಲಯ ವಿಭಾಗ ವ್ಯಾಪ್ತಿಯಲ್ಲಿ ಕಡತ ವಿಲೇವಾರಿ ಆದಾಲತ್‍ನ್ನು ತಮ್ಮ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಅದೇ ಮಾದರಿಯಲ್ಲಿ ಉಳಿದ ಆಯುಕ್ತಾಲಯಗಳೂ ಕ್ರಮ ವಹಿಸಲು ಮುಂದಾಗಬೇಕೆಂದೂ ಸಚಿವರು ಸೂಚಿಸಿದರು. 

ಪ್ರಸ್ತುತ ವರ್ಷದ ತರಗತಿ ಆರಂಭವಾಗಿರುವ ಹಿನ್ನೆಲೆಯಲ್ಲಿ 9ರಿಂದ 12ನೇ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು 6ರಿಂದ 9ರವರೆಗಿನ ಪರಿಷ್ಕೃತ ವಿದ್ಯಾಗಮ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ವಿವರವನ್ನು ಪರಿಶೀಲಿಸಿ ಶಾಲೆಗಳು ಕೋವಿಡ್ ನಿಯಮಗಳ ಪಾಲಿಸುವ ಕುರಿತು ವಿವರ ಪಡೆದುಕೊಂಡರು. 

ಈಗಾಗಲೇ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು, ಭೌತಿಕ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪರೀಕ್ಷಾಭಿಮುಖವಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದು, ಅಧಿಕೃತ ಪರೀಕ್ಷಾ ವೇಳಾಪಟ್ಟಿಯತ್ತ ಮುಖ ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಹಾಗೆಯೇ ಪರೀಕ್ಷೆಗಳ ದಿನಾಂಕ, ಮೌಲ್ಯಮಾಪನ, ಫಲಿತಾಂಶ ಪ್ರಕಟಣೆ ಸೇರಿದಂತೆ ಮುಂದಿನ ಶೈಕ್ಷಣಿಕ ವರ್ಷದ ಆರಂಭ ಕುರಿತಂತೆ ಸುದೀರ್ಘವಾಗಿ ಚರ್ಚೆ ನಡೆಸಿದ ಸಚಿವರು, 10 ಮತ್ತು 12ನೇ ತರಗತಿಗಳ ಪರೀಕ್ಷೆ ಮತ್ತು ಫಲಿತಾಂಶಗಳನ್ನು ಜೂನ್ ಅಂತ್ಯದೊಳಗೆ ಮತ್ತು ಉಳಿದ ತರಗತಿಗಳ ಪರೀಕ್ಷೆ ಮತ್ತು ಫಲಿತಾಂಶ ಘೊಷಣೆಯನ್ನು ಜೂ. 10ರೊಳಗೆ ಪೂರ್ಣಗೊಳಿಸಿ ಈ ಎಲ್ಲ ಪ್ರಕ್ರಿಯೆ ಮುಗಿದ ತಕ್ಷಣವೇ ಮಂದಿನ ಶೈಕ್ಷಣಿಕ ವರ್ಷದ ತರಗತಿಗಳನ್ನು ಏಕ ಕಾಲಕ್ಕೆ ಆರಂಭಗೊಳಿಸಲಾಗುವುದು ಎಂದು ತಿಳಿಸಿದರು.

ಶಿಕ್ಷಕರ ವರ್ಗಾವಣೆ ಕುರಿತ ಕೆಎಟಿ ತಡೆಯಾಜ್ಞೆ ತೆರವು, ಪಿಯು ಉಪನ್ಯಾಸಕರ ವರ್ಗಾವಣೆ ನಿಯಮ ರೂಪಿಸುತ್ತಿರುವುದರ ಪ್ರಗತಿ, ದಾಖಲಾತಿ ಪ್ರಕ್ರಿಯೆ, ಹೊಸ ಶಾಲೆಗಳಿಗೆ, ತರಗತಿಗಳಿಗೆ ಅನುಮತಿ, ವಿವಿಧ ಸಂಗತಿಗಳ ಪ್ರಕ್ರಿಯೆಗಳಲ್ಲಿನ ನಿಯಮ ಸರಳೀಕರಣ, ಪರಿಶೀಲನಾ ಹಂತಗಳ ಕಡಿತ ಮಾಡುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಸಮಗ್ರ ಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕಿ ದೀಪಾಚೋಳನ್ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು. 

ಮೇ 24ರಿಂದ ದ್ವಿತೀಯ ಪಿಯು ಪರೀಕ್ಷೆ 
ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಪಿಯು ಪರೀಕ್ಷೆಗಳು ಮೇ 24ರಿಂದ ಜೂ. 16ರವರೆಗೆ ನಡೆಯಲಿವೆ ಎಂದು ತಿಳಿಸಿದ್ದಾರೆ.

ಈ ಹಿಂದೆ ವೇಳಾಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳಿಗೆ ಒಂದುವಾರ ಸಮಯ ನಿಗದಿಪಡಿಸಿತ್ತು. ರಾಜ್ಯದ ವಿವಿಧೆಡೆಯ ಹಲವಾರು ಪೋಷಕರು ತಮ್ಮನ್ನು ಖುದ್ದಾಗಿ ಭೇಟಿ ಮಾಡಿ ಸಲ್ಲಿಸಿದ ಮನವಿಗಳು ಮತ್ತು ವಿದ್ಯಾರ್ಥಿಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಾಗೆಯೇ ನೀಟ್, ಜೆಇಇ ಗಳಂತಹ ಮುಂದಿನ ತರಗತಿಗಳ ಪ್ರವೇಶದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯು ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಸಚಿವರು ತಿಳಿಸಿದರು. 

24-05-2021- ಇತಿಹಾಸ, 
25-05-2021-ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ, 
26-05-2021 ಭೂಗೋಳ ಶಾಸ್ತ್ರ, 
27-05-2021 ಮನಃಶಾಸ್ತ್ರ/ ಬೇಸಿಕ್ ಮ್ಯಾತ್ಸ್, 
28-05-2021 ತರ್ಕಶಾಸ್ತ್ರ, 
29-05-2021 ಹಿಂದಿ, 
30-05-2021 ಭಾನುವಾರ –ರಜೆ, 
31-05-2021 ಇಂಗ್ಲಿಷ್, 
01-06-2021 ಮಾಹಿತಿ ತಂತ್ರಜ್ಞಾನ/ಹೆಲ್ತ್‍ಕೇರ್/ವೆಲ್‍ನೆಸ್‍ಬ್ಯೂಟಿ, 
02-06-2021 ರಾಜ್ಯಶಾಸ್ತ್ರ/ಗಣಕ ವಿಜ್ಞಾನ, 
03-06-2021 ಜೀವಶಾಸ್ತ್ರ/ಎಲೆಕ್ಟ್ರಾನಿಕ್ಸ್ 
04-06-2021 ಅರ್ಥಶಾಸ್ತ್ರ, 
05-06-2021 ಗೃಹ ವಿಜ್ಞಾನ, 
06-06-2021 ಭಾನುವಾರ –ರಜೆ, 
07-06-2021 ವ್ಯವಹಾರ ಅಧ್ಯಯನ/ ಭೌತಶಾಸ್ತ್ರ, 
08-06-2021 ಐಚ್ಛಿಕ ಕನ್ನಡ, 
09-06-2021, ತಮಿಳು/ತೆಲುಗು/ಮಲಯಾಳಂ/ಮರಾಠಿ/ಅರೆಬಿಕ್/ಫ್ರೆಂಚ್, 
10-06-2021 ಸಮಾಜ ಶಾಸ್ತ್ರ/ ರಸಾಯನಶಾಸ್ತ್ರ, 
11-06-2021 ಉರ್ದು/ ಸಂಸ್ಕೃತ, 
12-06-2021 ಸಂಖ್ಯಾಶಾಸ್ತ್ರ, 
13-06-2021 ಭಾನುವಾರ ರಜೆ, 
14-06-2021 ಲೆಕ್ಕಶಾಸ್ತ್ರ/ ಗಣಿತ/ಶಿಕ್ಷಣ, 
15-06-2021 ಭೂಗರ್ಭಶಾಸ್ತ್ರ, 
16-06-2021 ಕನ್ನಡ ಪರೀಕ್ಷೆಗಳು ನಡೆಯಲಿವೆ ಎಂದರು. 

ಶೀಘ್ರದಲ್ಲೇ ಎಸ್ ಎಸ್ ಎಲ್ ಸಿ ಅಧಿಕೃತ ವೇಳಾಪಟ್ಟಿ ಪ್ರಕಟ:
ಪ್ರಸ್ತುತ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಲು ಅವಧಿ ಮುಗಿದ ತಕ್ಷಣವೇ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

Follow Us:
Download App:
  • android
  • ios