ಬೆಂಗಳೂರು (ಫೆ.22):   ಕೇರಳದ ಗಡಿ ಭಾಗ ಮತ್ತು ಬಿಬಿಎಂಪಿ ವ್ಯಾಪ್ತಿಯ ಶಾಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಫೆ.22ರ ಸೋಮವಾರದಿಂದ 6ರಿಂದ 8ನೇ ತರಗತಿ ಶಾಲೆಗಳು ಆರಂಭಗೊಳ್ಳಲಿವೆ.

"

ಶಿಕ್ಷಣ ಇಲಾಖೆ ಒಂದು ವಾರದ ಹಿಂದೆ ಕೊರೋನಾ ಸುರಕ್ಷಿತ ಕ್ರಮ ಕೈಗೊಂಡು ಶಾಲೆ ಆರಂಭಿಸುವಂತೆ ಸೂಚನೆ ನೀಡಿತ್ತು. ಇದೀಗ ಶಾಲೆ ಆರಂಭಕ್ಕೂ ಎರಡು ದಿನ ಮೊದಲೇ ಶಿಕ್ಷಣ ಇಲಾಖೆಯು ಶಾಲೆಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ಮತ್ತು ವೇಳಾಪಟ್ಟಿಬಿಡುಗಡೆ ಮಾಡಿದೆ. ಅದರಂತೆ ತರಗತಿ ಆರಂಭಿಸಲು ರಾಜ್ಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಶಾಲೆಗಳು ಸಜ್ಜಾಗಿವೆ.

ಗಡಿಭಾಗದಲ್ಲಿ ಹಾಗೂ ನಗರದಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿ ಹಾಗೂ ಕೇರಳದ ಗಡಿಭಾಗದ ಶಾಲೆಗಳಲ್ಲಿ 8ನೇ ತರಗತಿ ಮಾತ್ರ ಪೂರ್ಣ ಪ್ರಮಾಣದಲ್ಲಿ ನಡೆಸಬೇಕು. 6 ಮತ್ತು 7ನೇ ತರಗತಿಗೆ ವಿದ್ಯಾಗಮ ಮುಂದುವರಿಸಬೇಕು. ಕೇರಳದಿಂದ ಬರುವ ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಕೊರೋನಾ ಪರೀಕ್ಷೆ ಮಾಡಿಸುವುದು ಕಡ್ಡಾಯ ಎಂದು ಇಲಾಖೆ ತಿಳಿಸಿದೆ.

ಫೆ. 22 ರಿಂದ ಈ 3 ತರಗತಿಗಳು ಪುನರಾರಂಭ : ಸಿದ್ಧತೆಗೆ ಸೂಚನೆ

ಇನ್ನು ರಾಜ್ಯದ ಉಳಿದ ಭಾಗದಲ್ಲಿ 6ರಿಂದ 8ನೇ ತರಗತಿಗೆ ಪೂರ್ಣ ಪ್ರಮಾಣದಲ್ಲಿ ಶಾಲೆ ನಡೆಸಬೇಕು. ಮಕ್ಕಳ ಹಾಜರಾತಿ ಕಡ್ಡಾಯವಲ್ಲ, ಆನ್‌ಲೈನ್‌ ಅಥವಾ ಬೇರಾವುದೇ ವಿಧಾನದಲ್ಲಿ ಕಲಿಕೆ ಮುಂದುವರಿಸಲು ಮಕ್ಕಳು ಇಚ್ಛಿಸಿದರೆ ಅವಕಾಶ ನೀಡಬೇಕು. ಮನೆಯಿಂದಲೇ ಊಟ, ತಿಂಡಿ ತರಲು ವಿದ್ಯಾರ್ಥಿಗಳಿಗೆ ಹೇಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.

ಬೆಳಿಗ್ಗೆ 10ರಿಂದ ಸಂಜೆ 4.30

ಸೋಮವಾರದಿಂದ ಶನಿವಾರದವರೆಗೂ ತರಗತಿ ನಡೆಸಬೇಕು. ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ತರಗತಿ ಆರಂಭಿಸಿ, 4.30ರವರೆಗೆ ನಡೆಸಬೇಕು. ಶನಿವಾರ ಮಾತ್ರ ಮಧ್ಯಾಹ್ನ 12.30ರವರೆಗೆ ಮಾತ್ರ ತರಗತಿಗೆ ಅವಕಾಶ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿ ಮತ್ತು ಕೇರಳ ಗಡಿಭಾಗದ ಶಾಲೆಗಳ ವೇಳಾಪಟ್ಟಿಬಿಡಗಡೆ ಮಾಡಿದ್ದು, ವಿದ್ಯಾಗಮ ಮಾತ್ರ ಬೆಳಗ್ಗೆ 12.30ರವರೆಗೆ ನಡೆಸಬೇಕು ಉಳಿದಂತೆ 8ನೇ ತರಗತಿಗೆ ಪೂರ್ತಿದಿನ ತರಗತಿ ನಡೆಸಬಹುದೆಂದು ಇಲಾಖೆ ತಿಳಿಸಿದೆ.