ಬೆಂಗಳೂರು, (ಏ.26): ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಇದೇ 27ರಿಂದ 14 ದಿನಗಳ ಕಾಲ ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದೆ. 

ಇಂದು (ಸೋಮವಾರ) ಸಂಪುಟ ಸಭೆ ಬಳಿಕ ಸಿಎಂ ಬಿಎಸ್‌ವೈ ಅವರು ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದು, ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ದಾವಣಗೆರೆ ವಿವಿ, ವಿಟಿಯು ಪರೀಕ್ಷೆಗಳನ್ನು ಮುಂದೂಡಿವೆ.

ದಾವಣಗೆರೆ ವಿವಿಯ ಪರೀಕ್ಷೆಗಳು ಮುಂದೂಡಿಕೆ
ನಾಳೆಯಿಂದ (ಏ.27) ನಡೆಯಬೇಕಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಬಿಎಡ್ ಪರೀಕ್ಷೆಗಳು ಸಹ ಮುಂದೂಡಲಾಗಿದೆ. ಈ ಬಗ್ಗೆ ಪರೀಕ್ಷಾಂಗ ಕುಲಸಚಿವೆ ಹೆಚ್ ಎಸ್ ಅನಿತ ಅವರು ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ  ಮಾಹಿತಿ ನೀಡಿದ್ದು, ಮುಂದಿನ ಪರೀಕ್ಷಾ ದಿನಾಂಕ ಪ್ರಕಟಿಸುವುದಾಗಿ ಹೇಳಿದ್ದಾರೆ.

 ರಾಣಿ ಚನ್ನಮ್ಮ ವಿವಿ ಪರೀಕ್ಷೆ ಮುಂದಕ್ಕೆ
 ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ  ನಡೆಯಬೇಕಿದ್ದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಪದವಿ, ಸ್ನಾತಕ, ಸ್ನಾತಕೋತ್ತರ ಹಾಗೂ ಎಂಬಿಎ ಪರೀಕ್ಷೆಗಳನ್ನು ಮುಂದೂಡಲಾಗಿದೆ.

14 ದಿನ ಲಾಕ್‍ಡೌನ್ ಜಾರಿಯಾಗಲಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದರಿಂದ ವಿಶ್ವವಿದ್ಯಾಲಯದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ವಿ ವಿ ಕುಲಸಚಿವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವಿಸ್ತೃತ ವರದಿ 
ಈ ಮೊದಲು ಇದೇ  ರಾಣಿ ಚನ್ನಮ್ಮ ವಿವಿ ಕೋವಿಡ್ ಆತಂಕದ ಮಧ್ಯೆಯೂ ಪರೀಕ್ಷೆ ನಡೆಸಲು ನಿರ್ಧರಿಸಿತ್ತು.  ಪರೀಕ್ಷೆ ಬರೆಯಲು ಆತಂಕ ವ್ಯಕ್ತಪಡಿಸಿದ್ದ ವಿದ್ಯಾರ್ಥಿಗಳು, ಪರೀಕ್ಷೆಗಳನ್ನು ಮುಂದೂಡುವಂತೆ ವಿಡಿಯೋ ಮಾಡಿ  ಸರ್ಕಾರಕ್ಕೆ ಮನವಿ ಮಾಡಿದ್ದರು. ಅಲ್ಲದೇ ಈ ಬಗ್ಗೆ ನಿಮ್ಮ ಏಷ್ಯಾನೆಟ್ ಸುವರ್ಣನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದೀಗ ರಾಣಿ ಚನ್ನಮ್ಮ ವಿವಿ ಪದವಿ, ಸ್ನಾತಕೋತ್ತರ  ಪರೀಕ್ಷೆಗಳನ್ನು ಮುಂದೂಡಿದೆ.