ಬೆಂಗಳೂರು (ಡಿ.15):  ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ 2020-21ನೇ ಸಾಲಿನಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ 137.50 ಕೋಟಿ ರು. ಮರು ಪಾವತಿ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಅನುದಾನವನ್ನು ಶಿಕ್ಷಕರು ಹಾಗೂ ಸಿಬ್ಬಂದಿಯ ವೇತನಕ್ಕೆ ಮೊದಲ ಆದ್ಯತೆಯಲ್ಲಿ ಬಳಸುವಂತೆ ಸೂಚಿಸಿದೆ.

ಇದರೊಂದಿಗೆ ಕೋವಿಡ್‌-19 ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಸರ್ಕಾರದ ಮುಂದಿಟ್ಟಿದ್ದ ಬೇಡಿಕೆಯೊಂದು ಈಡೇರಿದಂತಾಗಿದೆ. ಪೋಷಕರಿಂದ 2ನೇ ಕಂತಿನ ಶುಲ್ಕ ವಸೂಲಿಗೆ ಒತ್ತಡ ಹಾಕಬಾರದು ಎಂದಾದರೆ ಕನಿಷ್ಠ ಪಕ್ಷ ಶಾಲೆಗಳಿಗೆ ಬರಬೇಕಿರುವ ಆರ್‌ಟಿಇ ಮರು ಪಾವತಿ ಅನುದಾನವನ್ನಾದರೂ ಬಿಡುಗಡೆ ಮಾಡುವಂತೆ ಖಾಸಗಿ ಶಾಲೆಗಳು ಸರ್ಕಾರವನ್ನು ಕೋರಿದ್ದವು.

ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ : ರಾಜ್ಯದಲ್ಲಿ ಈ ವರ್ಷ ಇಲ್ಲ ಬೇಸಿಗೆ ರಜೆ

ಮನವಿಗೆ ಸ್ಪಂದಿಸಿದ ಸರ್ಕಾರ 3ನೇ ತ್ರೈಮಾಸಿಕದ ಅಥವಾ ಅಂತಿಮ ಕಂತಿನ ಮರು ಪಾವತಿ ಅನುದಾನದ ಲೆಕ್ಕದಲ್ಲಿ 137.50 ಕೋಟಿ ರು. ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಈ ಅನುದಾನವನ್ನು ಮೊದಲು 2019-20ನೇ ಸಾಲಿನ ಶುಲ್ಕ ಮರು ಪಾವತಿಗಾಗಿ ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ನಂತರ ಉಳಿದ ಮೊತ್ತವನ್ನು ಹಿಂದಿನ ಸಾಲುಗಳ ಬಾಕಿ ಶುಲ್ಕ ಮರು ಪಾವತಿಗೆ ಬಳಸಬೇಕು. ಮೊದಲ ಆದ್ಯತೆಯಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಯ ವೇತನಕ್ಕೆ ಈ ಅನುದಾನ ಬಳಸಬೇಕೆಂದು ಸರ್ಕಾರ ಸೂಚಿಸಿದೆ.

2020-21ನೇ ಸಾಲಿನ ಆರ್‌ಟಿಇ ಶುಲ್ಕ ಮರು ಪಾವತಿಗಾಗಿ ಬಜೆಟ್‌ನಲ್ಲಿ 550 ಕೋಟಿ ರು. ಮಂಜೂರಾಗಿದ್ದು, ಡಿಸೆಂಬರ್‌ 1ರ ವರೆಗೆ 412.50 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಅಂತಿಮ ಕಂತಿನ 137.50 ಕೋಟಿ ರು. ಬಿಡುಗಡೆ ಮಾಡಿದೆ.