2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ, ಪರೀಕ್ಷೆಯ ಸಮಯದಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದ ನಡುವೆಯೂ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರ ಈ ಸಾಧನೆ ಮನೋಬಲ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದ್ದು, ಅನೇಕರಿಗೆ ಸ್ಪೂರ್ತಿದಾಯಕವಾಗಿದೆ.

ಮಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ ಪರಿಪೂರ್ಣ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಶೇ.100 ಫಲಿತಾಂಶದೊಂದಿಗೆ ಅವರು ಸಾಧಿಸಿರುವ ಈ ಸಾಧನೆ ರಾಜ್ಯದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

Add Asianetnews Kannada as a Preferred SourcegooglePreferred

ದಿಶಾ ಅವರ ಈ ಸಾಧನೆ ಕೇವಲ ಅಂಕಗಳ ಮಟ್ಟದಲ್ಲೇ ವಿಶಿಷ್ಟವಲ್ಲ, ಅದಕ್ಕೆ ಕಾರಣವಾದ ಹಿನ್ನಲೆ ಇನ್ನಷ್ಟು ಮನಕಲುಕುವಂತಿದೆ. ಪರೀಕ್ಷೆ ಬರೆಯುತ್ತಿದ್ದ ಸಮಯದಲ್ಲಿ ಅವರು ತಾಯಿಯನ್ನು ಕಳೆದುಕೊಂಡರು ಆದರೂ ಮನೋಬಲ ಕಳೆದುಕೊಳ್ಳದೆ ಉಳಿದ ಪರೀಕ್ಷೆಗಳನ್ನು ಬರೆದು ಈ ಮಹತ್ವದ ಸಾಧನೆ ಮಾಡಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ.

ಮೂರು ಪರೀಕ್ಷೆ ಬರೆದ ನಂತರ ತಾಯಿ ನಿಧನ

ದಿಶಾ ಅವರು ಮೂರು ಪರೀಕ್ಷೆಗಳನ್ನು ಬರೆದ ನಂತರ ಅವರ ತಾಯಿ ನಿಧನರಾಗಿದ್ದರು. ಈ ದುಃಖದ ನಡುವೆಯೂ ದಿಶಾ ಧೈರ್ಯ ಕಳೆದುಕೊಳ್ಳದೆ ಉಳಿದ ಪರೀಕ್ಷೆಗಳಿಗೆ ಹಾಜರಾಗಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ತಾಯಿಯ ಪ್ರೇರಣೆ ಮತ್ತು ಆಶೀರ್ವಾದವೇ ತನ್ನ ಯಶಸ್ಸಿನ ಹಿಂದಿನ ಶಕ್ತಿ ಎಂದು ದಿಶಾ ಹೇಳಿದ್ದಾರೆ

ಫಲಿತಾಂಶ ಬಂದ ಖುಷಿಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗೆ ಹಂಚಿಕೊಂಡ ದಿಶಾ, ಕಾಲೇಜಿಗೆ, ಉಪನ್ಯಾಸಕರಿಗೆ ಥ್ಯಾಂಕ್ಯೂ. ನಾನು ಇದನ್ನು ನಿರೀಕ್ಷಿಸಿದ್ದೆ ಆದ್ರೆ ಭಯ ಕೂಡ ಇತ್ತು. ಇಂಗ್ಲಿಷ್ ಬಗ್ಗೆ ಸ್ವಲ್ಪ ಭಯ ಇತ್ತು. ಇಂಗ್ಲಿಷ್ ನಲ್ಲಿ 100 ಕ್ಕೆ ನೂರು ತೆಗೆದುಕೊಳ್ಳುವುದು ಕಷ್ಟ ಅಂದುಕೊಂಡಿದ್ದೆ. ಬೇರೆ ವಿಷಯಗಳ ಬಗ್ಗೆ ನೂರಕ್ಕೆ ನೂರು ಬರುವ ಧೈರ್ಯ ಇತ್ತು.

ಮೂರು ಪರೀಕ್ಷೆ ಬರೆದ ನಂತ್ರ ತಾಯಿಯನ್ನು ಕಳೆದುಕೊಂಡೆ. ಆ ಸಂದರ್ಬದಲ್ಲಿ ಏನು ಮಾಡಬೇಕೆಂದು ತಿಳಿಯಲಿಲ್ಲ. ಯಾವ ಕಡೆ ಗಮನ ಕೊಡಬೇಕೆಂದು ಮೊದಲಗೆ ತೋಚಲಿಲ್ಲ. ಅದಾದ ನಂತರ ಒಂದನ್ನು ಕಳೆದುಕೊಂಡೆ. ಆದ್ರೆ ಶಕ್ತಿ ಇಲ್ಲ. ಆದರೆ ನನ್ನ ಲೆಕ್ಚರ್‌ಗಳು ತುಂಬಾ ಬೆನ್ನೆಲುಬಾಗಿ ನಿಂತ್ರು. ಅಮ್ಮ ಬಿದ್ದು ತಲೆಗೆ ಪೆಟ್ಟಾಗಿತ್ತು. ಹೀಗಾಗಿ ಕಳೆದುಕೊಂಡೆ.

ನನ್ನ ತಾಯಿ ಈಗ ಇದ್ದಿದ್ರೆ ತುಂಬಾ ಖುಷಿ ಪಡುತ್ತಿದ್ರು. ಹೇಗೆ ಹೇಳಬೇಕೆಂದು ಅರ್ಥ ಆಗುತ್ತಿಲ್ಲ. ನಾನು ಇಲ್ಲದ ಅಮ್ಮನಿಗೋಸ್ಕರವಾದ್ರೂ ಪರೀಕ್ಷೆ ಬರೆದು ಸಾಧನೆ ಮಾಡಬೇಕು ಎಂದು ದೃಢ ನಿಶ್ಚಯ ಮಾಡಿದೆ. ಅದಕ್ಕೆ ತುಂಬಾ ಕಷ್ಟಪಟ್ಟು ಏನಾದ್ರೂ ಆಗಲಿ. ಬೇಕು ಅಂತ ಡಿಸೈಡ್ ಮಾಡಿದೆ.

ತಾಯಿ ಸದಾ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ನಾನು ಭಯ ಆಗುತ್ತಿದೆ ಎಂತ ಹೇಳುತ್ತಿದ್ದೆ ಆಗ ನೀನು ಕಷ್ಟಪಟ್ಟು ಓದುತ್ತಿದ್ದೀಯ, ದೇವರು ಇದ್ದಾನೆ, ಹೆದರಬೇಡ’ ಅವನು ಕೊಡ್ತಾನೆ ಬಿಡು. ಅವನು ಯಾರ ಹಣೆಯಲ್ಲಿ ಬರೆದಿದ್ದಾನೆ ಅವರಿಗೆ ಸಿಗುತ್ತೆ. ಅಮ್ಮ ಈಗ ಇದ್ದಿದ್ರೆ ಏನು ಹೇಳುತ್ತಿದ್ದರು ಎಂದು ನನಗೆ ಗೊತ್ತಿಲ್ಲ. ಆದ್ರೆ ತುಂಬಾ ಖುಷಿ ಪಡುತ್ತಿದ್ದರು. ಅವರ ಮಾತುಗಳು ನನಗೆ ಸದಾ ಧೈರ್ಯ ನೀಡುತ್ತವೆ ಎಂದು ಭಾವುಕರಾಗಿ ತಿಳಿಸಿದ್ದಾರೆ.

ಅಮ್ಮನಿಗೆ ನನ್ನ ಬಗ್ಗೆ ಇದ್ದ ಕನಸೆಂದರೆ ನಾನು ಒಳ್ಳೆ ರೀತಿಯಲ್ಲಿ ಓದಿ ಅವರಿಗಾಗಿ ಮನೆ ಕಟ್ಟಿಸಿ ಚಂದದಲ್ಲಿ ಬದುಕಬೇಕೆಂಬ ಆಸೆ ಅಮ್ಮನಿಗಿತ್ತು. ಮೇ ನಲ್ಲಿ ಸಿಎ ಪರೀಕ್ಷೆ ಇದೆ ಅದನ್ನು ಸಾಧಿಸಬೇಕೆಂದುಕೊಂಡಿದ್ದೇನೆ. ಅಮ್ಮ ಈಗ ನನ್ನನ್ನು ನೋಡುತ್ತಿರಬಹುದು. “ ಅಮ್ಮ ನಾನು ಸಾಧಿಸಿಬಿಟ್ಟೆ” ಇಷ್ಟೇ ಹೇಳಬಹುದಷ್ಟೇ. ಎಂದು ಭಾವುಕರಾದರು. 

ವಿದ್ಯಾರ್ಥಿ ಸಮುದಾಯಕ್ಕೆ ಸ್ಪೂರ್ತಿ

ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾಗಿ ದಿಶಾ ತಮ್ಮ ಪರಿಶ್ರಮ, ಶಿಸ್ತು ಮತ್ತು ಸಂಕಲ್ಪದಿಂದ ಈ ಸಾಧನೆ ಸಾಧಿಸಿದ್ದು, ವಿದ್ಯಾರ್ಥಿ ಸಮುದಾಯಕ್ಕೆ ಸ್ಪೂರ್ತಿದಾಯಕ ಮಾದರಿಯಾಗಿದ್ದಾರೆ. ಕುಟುಂಬದ ದುಃಖದ ನಡುವೆಯೂ ಗುರಿಯತ್ತ ಕೇಂದ್ರೀಕರಿಸಿ ಸಾಧನೆ ಮಾಡಬಹುದೆಂಬುದಕ್ಕೆ ದಿಶಾ ಬದುಕು ಉತ್ತಮ ಉದಾಹರಣೆ.