23ರಿಂದ ಹೈಸ್ಕೂಲ್, ಕಾಲೇಜು ಆರಂಭಕ್ಕೆ ಶೀಘ್ರ ಮಾರ್ಗಸೂಚಿ
ಒಂದೆಡೆ ಶಾಲಾ-ಕಾಲೇಜುಗಳಿಲ್ಲದೇ ಮಕ್ಕಳ ಭವಿಷ್ಯ ಕಮರುತ್ತಿರುವ ಚಿಂತೆಯಾದರೆ, ಇನ್ನೊಂದೆಡೆ ಹೆಚ್ಚುತ್ತಿರುವ ಕೋವಿಡ್ ಆತಂಕ. ಆನ್‌ಲೈನ್ ತರಗತಿ ಅಟೆಂಡ್ ಮಾಡುತ್ತಿರುವ ಮಕ್ಕಳಾದರೂ ಓಕೆ. ಹಳ್ಳಿಯಲ್ಲಿ ಅತ್ತ ಇಂಟರ್ನೆಟ್ ಇಲ್ಲದೇ, ಇತ್ತ ಶಾಲೆಗೆ ಹೋಗಲಾಗದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಬೆಂಗಳೂರು (ಆ.13): ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಿಗದಿಯಂತೆ ಆ.23ರಿಂದ ಭೌತಿಕ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಶೀಘ್ರ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಪ್ರಾಥಮಿಕ ತರಗತಿ ಮಕ್ಕಳಿಗೂ ಭೌತಿಕ ತರಗತಿ ಆರಂಭಿಸಬೇಕೇ ಇಲ್ಲವೇ ವಿದ್ಯಾಗಮ ನಡೆಸಬೇಕೆ ಎಂಬ ಬಗ್ಗೆ ಈ ಮಾಸಾಂತ್ಯದ ವೇಳೆಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಕರ್ನಾಟಕದಲ್ಲಿ ಡಿಪ್ಲೋಮಾಗೆ ಹೊಸ ಎಂಟು ಕೋರ್ಸ್
ಈಗಾಗಲೇ ಶೇ.84ರಷ್ಟುಶಾಲಾ ಶಿಕ್ಷಕರು ಕೊರೊನಾ ಲಸಿಕೆ ಪಡೆದಿದ್ದಾರೆ. ಇದರಲ್ಲಿ ಶೇ.19ರಷ್ಟುಶಿಕ್ಷಕರು ಎರಡನೇ ಡೋಸ್ ಕೂಡ ಪಡೆದಿದ್ದಾರೆ. ಉಳಿದ ಶಿಕ್ಷಕರಿಗೆ ಆಗಸ್ಟ್ 23ರೊಳಗೆ ಲಸಿಕೆ ನೀಡುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಿದ್ದೇವೆ. ಭೌತಿಕ ತರಗತಿ ಆರಂಭಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ. ಆನ್‌ಲೈನ್ ತರಗತಿಯೂ ಮುಂದುವರಿಯಲಿದೆ. ಪಾಳಿ ಪದ್ಧತಿಯಲ್ಲಿ ತರಗತಿ ನಡೆಯಲಿದೆ. ಈ ಸಂಬಂಧ ಇಲಾಖಾ ಅಧಿಕಾರಿಗಳು ವಿಸ್ತೃತ ಎಸ್‌ಒಪಿ ರಚಿಸುತ್ತಿದ್ದು, ಶೀಘ್ರ ಪ್ರಕಟಿಸಲಾಗುವುದು ಎಂದರು.
ಗುರುಗಳಾದ ಮಕ್ಕಳು: 46ನೇ ವಯಸ್ಸಲ್ಲಿ ಎಸ್ಎಸ್‌ಎಲ್‌ಲಿಸಿ ಪಾಸಾದ ಮಕ್ಕಳು
ಎಲ್ಲರಿಗೂ ಪಿಯು ಪ್ರವೇಶ:
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ ಪರೀಕ್ಷೆ ಬರೆದಿದ್ದ ಎಲ್ಲ 8.71 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಉತ್ತೀರ್ಣಗೊಳಿಸಿರುವುದರಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶಕ್ಕೆ ಹೆಚ್ಚಿನ ಒತ್ತಡ ನಿರ್ಮಾಣವಾಗುವುದು ನಿಜ. ಆದರೆ, ರಾಜ್ಯದಲ್ಲಿ ಇರುವ 5600 ಪಿಯು ಕಾಲೇಜುಗಳಲ್ಲಿ ಸುಮಾರು 12 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದು. ಜತೆಗೆ ಇನ್ನಷ್ಟುಸರ್ಕಾರಿ ಪ್ರೌಢಶಾಲೆಗಳಲ್ಲಿ ಪಿಯು ಕಾಲೇಜು ಆರಂಭಿಸಿ ಉನ್ನತೀಕರಿಸುವ ಕಾರ್ಯವೂ ನಡೆಯುತ್ತಿದೆ. ಹೊಸ ಅನುದಾನ ರಹಿತ ಪಿಯು ಕಾಲೇಜುಗಳ ಆರಂಭಕ್ಕೂ ಅರ್ಜಿ ಆಹ್ವಾನಿಸಿದ್ದೇವೆ. ಹಾಗಾಗಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ಎಲ್ಲ ಮಕ್ಕಳಿಗೂ ಪಿಯು ಪ್ರವೇಶಕ್ಕೆ ಸಮಸ್ಯೆಯಾಗುವುದಿಲ್ಲ ಎಂದರು.