ಕೊಪ್ಪಳ (ಫೆ.05):  ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಉಪಪ್ರಾಂಶುಪಾಲರು ಇನ್ನುಂದೆ ವಾರ​ದಲ್ಲಿ ಕನಿಷ್ಠ 12 ತರ​ಗತಿ ತೆಗೆ​ದು​ಕೊ​ಳ್ಳುವ ಜತೆಗೆ ಮೇಲಾ​ಧಿ​ಕಾ​ರಿ​ಗ​ಳಿಗೆ ವರ​ದಿ ಸಲ್ಲಿ​ಸಲು ಸರ್ಕಾರ ಕಟ್ಟು​ನಿ​ಟ್ಟಿನ ಆದೇಶ ಹೊರ​ಡಿ​ಸಿ​ದೆ.

ರಾಜ್ಯಾದ್ಯಂತ ಹೈಸ್ಕೂಲ್‌ಗಳಲ್ಲಿ ಶಿಕ್ಷಣ ಗುಣಮಟ್ಟ ಕುಸಿಯುತ್ತಿದೆ. ಫಲಿತಾಂಶ ಸುಧಾರಣೆಯಾಗಬೇಕಾಗಿದೆ. ಕಲಿಕಾ ಗುಣಮಟ್ಟಹೆಚ್ಚಳವಾಗಬೇಕಾಗಿದೆ. ಇದರ ಸಮಗ್ರ ಅಧ್ಯಯನ ಮಾಡಿದ ವರದಿಯನ್ನು ಈಗಾಗಲೇ ಶಿಕ್ಷಣ ಇಲಾಖೆ ಆಯಾ ಜಿಲ್ಲೆಗೆ ಕಳುಹಿಸಿಕೊಟ್ಟಿದೆ. ಅಧ್ಯಯನ ವರದಿಯಲ್ಲಿ ಈ ವಿಷಯವೂ ಇದೆ. ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಉಪಪ್ರಾಂಶುಪಾಲರು ತಾವು ಪಾಠ ಮಾಡುವುದನ್ನೇ ಮರೆತಿದ್ದಾರೆ. ತಮಗೆ ನಿಯಮಾನುಸಾರ ನೀಡಿರುವ ತರಗತಿಗಳನ್ನು ನೈತಿಕ ಶಿಕ್ಷಣ ಸೇರಿದಂತೆ ಮೊದಲಾದ ತರಗತಿಗಳಿಗೆ ಹಾಕಿಕೊಂಡು ಪಾಠವನ್ನೇ ಮಾಡುತ್ತಿಲ್ಲ. ತಮ್ಮ ವಿಷಯದ ಪಾಠ ಮಾಡದೆ ಆಡಳಿತಾತ್ಮಕ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ.

ಇದೆಲ್ಲವನ್ನು ಪರಿಗಣಿಸಿ, ಈಗ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಉಪಪ್ರಾಂಶುಪಾಲರು ಕಡ್ಡಾಯವಾಗಿ ಪಾಠ ಮಾಡುವಂತೆ ಸೂಚಿಸಲಾಗಿದೆ.

12 ಅವಧಿ:  ತಮ್ಮ ವಿಷಯವನ್ನು ಪ್ರತಿ ವಾರವೂ 12 ಅವಧಿ ಪಾಠ ಮಾಡಬೇಕು ಮತ್ತು ತಿಂಗಳಿಗೆ 48 ಅವಧಿಯ ಪಾಠ ಮಾಡಬೇಕು. ಇದರಲ್ಲಿ ಮುಖ್ಯೋಪಾಧ್ಯಾಯರು ಎನ್ನುವ ವಿನಾಯತಿ ಇಲ್ಲ. ಎಲ್ಲರಂತೆ ಪಾಠ ಮಾಡಬೇಕು ಮತ್ತು ಮಾಡಿದ ಪಾಠದ ವಿವರಣೆಯನ್ನು ಸಿದ್ಧಪ​ಡಿಸಿ ವರದಿಯನ್ನು ಮೇಲಾಧಿಕಾರಿಗಳಾದ ಬಿಆರ್‌ಸಿ ಹಾಗೂ ಬಿಇಒಗೆ ಪ್ರತಿ ತಿಂಗಳು ಸಲ್ಲಿಸಬೇಕು.

ಮೊದಲೇ ಇತ್ತು:  ಮುಖ್ಯೋಪಾಧ್ಯಾಯರು ತಮ್ಮ ವಿಷಯವನ್ನು ಪಾಠ ಮಾಡಬೇಕು ಎನ್ನುವ ನಿಯಮ ಮೊದಲಿನಿಂದಲೂ ಇತ್ತು. ಆದರೆ, ಬಿಸಿಯೂಟ ಬಂದ ಮೇಲೆ ಅವರು ಅದನ್ನು ಮರೆತುಬಿಟ್ಟಿದ್ದರು. ಅಲ್ಲದೆ ಆಡಳಿತಾತ್ಮಕ ಕೆಲಸ ಇರುವುದರಿಂದ ಪಾಠ ಮಾಡುವುದು ಸಾಧ್ಯವಿಲ್ಲ ಎನ್ನುವಂತೆ ಆಗಿತ್ತು. ಇದೆಲ್ಲವೂ ಪ್ರೌಢಶಾಲೆಯ ಶಿಕ್ಷಣ ಗುಣಮಟ್ಟಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಶಿಕ್ಷಣ ಇಲಾಖೆಯ ಆಯುಕ್ತರು ಫೆ. 3ರಂದು ಈ ಕುರಿತು ಆದೇಶ ಮಾಡಿದ್ದಾರೆ.

SSLC ಪರೀಕ್ಷೆ ಬರೆಯಲು 11 ವರ್ಷದ ವಿದ್ಯಾರ್ಥಿ ರೆಡಿ ...

ಆದೇಶದ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ. ರಾಜ್ಯದ ಎಲ್ಲ ಡಿಡಿಪಿಐಗಳಿಗೂ ರವಾನೆ ಮಾಡಿ, ಇಂದಿನಿಂದಲೇ ಜಾರಿ ಮಾಡುವಂತೆ ಕಟ್ಟುನಿಟ್ಟಾಗಿ ಸೂಚಿಸುವಂತೆ ವರದಿ ಮಾಡಲಾಗಿದೆ. ಇದೆಲ್ಲಕ್ಕಿಂತ ಮಿಗಿಲಾಗಿ, ಹೀಗೆ ಪಾಠಮಾಡಲು ಪ್ರಾರಂಭಿಸದ ಮೇಲೆ ಆಗಿರುವ ಬೆಳವಣಿಗೆಯ ಕುರಿತು ಡಿಡಿಪಿಐಗಳು ವರದಿ ಮಾಡುವಂತೆ ಸೂಚಿಸಲಾಗಿದೆ.

ವಿಶೇಷ ಗಮನ:  ಮುಖ್ಯೋಪಾಧ್ಯಾಯರು ಪಾಠ ಮಾಡುವಾಗ ತಮಗೆ ತಿಳಿದ ತರಗತಿಗಳನ್ನು ತೆಗೆದುಕೊಳ್ಳುವಂತೆ ಇಲ್ಲ. ವಿಶೇಷವಾಗಿ 9-10ನೇ ತರಗತಿ ವಿದ್ಯಾರ್ಥಿಗಳಿಗೆ ತಾವು ಪರಿಣಿತಿ ಇರುವ ವಿಷಯದಲ್ಲಿ ಪಾಠ ಮಾಡುವಂತೆಯೂ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.