‘ಹಾಡು ಮಾತಾಡು’ ರೇಡಿಯೋ ಕಲಿಕೆಗೆ ಯಶಸ್ಸು
ರಾಜ್ಯದಲ್ಲಿ ಅಂಗನವಾಡಿ ಮಕ್ಕಳಿಗಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರೂಪಿಸಿರುವ ‘ಹಾಡು ಮಾತಾಡು’ ರೇಡಿಯೋ ಆನ್‌ಲೈನ್ ಕಲಿಕೆ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿದೆ.
ಬೆಂಗಳೂರು (ಸೆ.21): ಕೋವಿಡ್ ವೇಳೆಯಲ್ಲಿ ಆರು ವರ್ಷದೊಳಗಿನ ಶಾಲಾ ಪೂರ್ವ (ಅಂಗನವಾಡಿ) ಮಕ್ಕಳಿಗಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರೂಪಿಸಿರುವ ‘ಹಾಡು ಮಾತಾಡು’ ರೇಡಿಯೋ ಆನ್‌ಲೈನ್ ಕಲಿಕೆ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿದೆ. 300ಕ್ಕೂ ಹೆಚ್ಚು ಪುಟಾಣಿಗಳು ತಾವು ಹಾಡಿರುವ ವಿಡಿಯೋಗಳನ್ನು ಕಳುಹಿಸಿದ್ದಾರೆ.
ಕೊರೋನಾ ಸೋಂಕು ಇಲ್ಲದಿದ್ದಲ್ಲಿ ಪುಟಾಣಿ ಮಕ್ಕಳು ಅಂಗನವಾಡಿ, ನರ್ಸರಿಗೆ ತೆರಳಿ ಹಾಡಿ ಕುಣಿದು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡು ಕಲಿತು ನಲಿಯುತ್ತಿದ್ದರು. ಆದರೆ, ಈ ಬಾರಿ ಕೋವಿಡ್ ಕಾಟದಿಂದ ಮಕ್ಕಳನ್ನು ಮನೆಯಿಂದ ಆಚೆಗೆ ಕಳಿಸಲು ಸಹ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಗಳು ಆರಂಭ: ತೀರ್ಮಾನವನ್ನು ವಿದ್ಯಾರ್ಥಿಗಳಿಗೆ ಬಿಟ್ಟ ಸರ್ಕಾರ
ಹೀಗಾಗಿ ಮಕ್ಕಳು ಕಲಿಕೆಯಿಂದ ವಿಮುಖರಾಗದಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆಕಾಶವಾಣಿ ಸಹಯೋಗದಲ್ಲಿ ಸೆ.1ರಿಂದ ‘ಹಾಡು ಮಾತಾಡು’ ಎಂಬ ಕ್ರಿಯಾತ್ಮಕ ಕಲಿಕಾ ಕಾರ್ಯಕ್ರಮವನ್ನು ಆರಂಭಿಸಿದೆ. ಇದು ಮಕ್ಕಳಿಗೆ ಪ್ರಾಸಪದ್ಯಗಳನ್ನು (ರೈಮ್ಸ್) ಮನೆಯಲ್ಲೇ ಆಕಾಶವಾಣಿ ಮುಖಾಂತರ ಕಲಿಸುವ ವಿಶೇಷ ಸರಣಿ ಕಾರ್ಯಕ್ರಮವಾಗಿದೆ.
ಒಂದೊಂದು ಕಥೆಯನ್ನು ಹಾಡಿನ ರೂಪದಲ್ಲಿ (ಸಾರಾಂಶದೊಂದಿಗೆ) ಪ್ರಸಾರ ಮಾಡಲಾಗುತ್ತಿದೆ. ಮಕ್ಕಳು ಅದನ್ನು ಕೇಳಿ ಕಲಿತು ಖುಷಿಪಡುತ್ತಿದ್ದಾರೆ. ತಾವೇ ಹಾಡಿ, ವಿಡಿಯೋ ಮಾಡಿ ವಾಟ್ಸಪ್ ಮೂಲಕ ಕಳುಹಿಸುತ್ತಿದ್ದಾರೆ. ಈವರೆಗೆ 300ರಿಂದ 400 ಮಕ್ಕಳು ವಿಡಿಯೋ ಮಾಡಿ ಕಳಿಸಿರುವುದಾಗಿ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಆರು ವರ್ಷದೊಳಗಿನ ಸುಮಾರು 34 ಲಕ್ಷ ಮಕ್ಕಳಿದ್ದಾರೆ. ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಶಾಲಾ ಕಲಿಕೆ ಅಸಾಧ್ಯವಾಗಿರುವ ಈ ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತು ಕನ್ನಡ, ಇಂಗ್ಲಿಷ್ ಪದ್ಯಗಳನ್ನು ಕಲಿಸುವುದು ಈ ಕಾರ್ಯಕ್ರಮದ ಉದ್ದೇಶ. ಪ್ರಖ್ಯಾತ ಗಾಯಕರಿಂದ ಪದ್ಯಗಳನ್ನು ಹಾಡಿಸಿ, ವಿವರಣೆ ಕೊಡಿಸಲಾಗಿದೆ. ಓದುವ ಕ್ರಮವನ್ನು ಹೇಳಿಕೊಡುವ ಜತೆಗೆ ಮಕ್ಕಳಿಗೆ ಸಂವಹನ ನಡೆಸಲು ಅವಕಾಶವನ್ನೂ ನೀಡಲಾಗುತ್ತದೆ.