ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿ ಆರಂಭ: ಯಾವಾಗಿನಿಂದ..?
ಮೊದಲ, ದ್ವಿತೀಯ ವರ್ಷದ ಪದವಿ, ಸ್ನಾತಕೋತ್ತರ, ಡಿಪ್ಲೊಮೋ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿ ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಎಲ್ಲ ವಿವಿ ಕುಲಪತಿಗಳ ಜತೆ ಡಿಸಿಎಂ ಸಮಾಲೋಚನೆ ನಡೆಸಿದ್ದಾರೆ.
ಬೆಂಗಳೂರು, (ಜ.08): ಈಗಾಗಲೇ ಪದವಿ, ಸ್ನಾತಕೋತ್ತರ, ಡಿಪ್ಲೊಮೋ ಮತ್ತು ಎಂಜಿನಿಯರಿಂಗ್ ತರಗತಿಗಳ ಅಂತಿಮ ವರ್ಷದ/ಸೆಮಿಸ್ಟರ್ ನ ಆಫ್‌ಲೈನ್ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿರುವ ಬೆನ್ನಲ್ಲೇ ಇದೇ ತರಗತಿಗಳ ಪ್ರಥಮ- ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳನ್ನು ಸಂಕ್ರಾಂತಿ ಹಬ್ಬದ ನಂತರ ಆರಂಭಿಸಲಾಗುವುದು. ಈ ಸಂಬಂಧ ವರದಿ ನೀಡುವಂತೆ ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಸರಕಾರಿ- ಖಾಸಗಿ ವಲಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು, ಉನ್ನತ ಶಿಕ್ಷಣ ಸೇರಿ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಉಪ ಮುಖ್ಯಮಂತ್ರಿಗಳು ಈ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಶೈಕ್ಷಣಿಕ ದಾಖಲೆಗಳ ಭದ್ರತೆಗೆ ಡಿಜಿ ಲಾಕರ್ ವ್ಯವಸ್ಥೆ
ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಕುಲಪತಿಗಳು ನೇರ ತರಗತಿಗಳನ್ನು ಆರಂಭಿಸುವಂತೆ ಸರಕಾರಕ್ಕೆ ಸಲಹೆ ನೀಡಿದರು. ಹೀಗಾಗಿ ಅದಕ್ಕೆ ಸಂಬಂಧಿಸಿದ ವರದಿಯನ್ನು ಕೂಡಲೇ ಕಳಿಸುವಂತೆ ಕೋರಲಾಗಿದೆ. ನಂತರ ಮೊದಲ ಮತ್ತು ದ್ವಿತೀಯ ವರ್ಷದ ನೇರ ತರಗತಿಗಳನ್ನು ಸಂಕ್ರಾಂತಿ ಹಬ್ಬದ ನಂತರ ಯಾವ ದಿನದಿಂದ ಆರಂಭಿಸಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಈಗಾಗಲೇ ಅಂತಿಮ ವರ್ಷದ ವಿದ್ಯಾರ್ಥಿಗಳ ನೇರ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಆ ಯಶಸ್ಸಿನ ಹಿನ್ನೆಲೆಯಲ್ಲಿ ಉಳಿದ ತರಗತಿಗಳನ್ನು ಶುರು ಮಾಡಲಾಗುವುದು. ಯುಜಿಸಿ ಮತ್ತು ಕೋವಿಡ್ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪರೀಕ್ಷೆ ಮತ್ತು ಮುಂದಿನ ಶೈಕ್ಷಣಿಕ ವರ್ಷ
ಮುಖ್ಯವಾಗಿ ಈ ಸಭೆಯಲ್ಲಿ 2021-22ರ ಶೈಕ್ಷಣಿಕ ವರ್ಷವನ್ನು ಯಾವಾಗಿನಿಂದ ಆರಂಭಿಸಬೇಕು ಎಂಬ ಬಗ್ಗೆ ಮಹತ್ವದ ಚರ್ಚೆ ನಡೆಯಿತು. ಮೇ ತಿಂಗಳ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಉನ್ನತ ಶಿಕ್ಷಣದ ಶೈಕ್ಷಣಿಕ ವೇಳಾಪಟ್ಟಿಯನ್ನು ರೂಪಿಸಲಾಗುವುದು ಎಂದರು ಡಿಸಿಎಂ.
ಹಾಗೆಯೇ, ಆನ್‌ಲೈನ್ ಪರೀಕ್ಷೆಗಳಿಗಿಂತ ಪೆನ್ ಮತ್ತು ಪೇಪರ್ ಆಧಾರಿತ ಆಫ್‌ಲೈನ್ ಪರೀಕ್ಷೆಯೇ ಉತ್ತಮ ಎಂದು ವಿಟಿಸಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಸೇರಿದಂತೆ ಎಲ್ಲ ಕುಲಪತಿ, ಕುಲ ಸಚಿವರು ಸಲಹೆ ಮಾಡಿದರು. ಇದನ್ನು ಸರಕಾರ ಗಂಭೀರವಾಗಿ ಪರಿಶೀಲಿಸಲಿದೆ. ಯುಜಿಸಿ ನಿಯಮದಂತೆ ಮಾರ್ಚ್‌ನಲ್ಲಿ ಪರೀಕ್ಷೆ ಮುಗಿಯಬೇಕಾಗುತ್ತದೆ. ಆದರೆ, ಇನ್ನು ಹಲವಾರು ವಿವಿಗಳ ವ್ಯಾಪ್ತಿಯಲ್ಲಿ ಪಾಠಗಳು ಮುಗಿಯದ ಕಾರಣ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ, ಶೀಘ್ರವೇ ಈ ಬಗ್ಗೆ ಅಂತಿಮ ಮಾಹಿತಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
ಬಸ್ ಪಾಸ್ ಮತ್ತು ಹಾಸ್ಟೆಲ್ ಸೌಲಭ್ಯ
ವಿದ್ಯಾರ್ಥಿಗಳ ಬಸ್ ಪಾಸ್ ಬಗ್ಗೆ ಇರುವ ಗೊಂದಲದ ಬಗ್ಗೆ ಶೀಘ್ರದಲ್ಲಿಯೇ ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ಅವರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಹಳೆಯ ಪಾಸ್ ಇಟ್ಟುಕೊಂಡೇ ಓಡಾಡಬಹುದಾ? ಇಲ್ಲವಾ? ಎಂಬ ಬಗ್ಗೆ ಮಾಹಿತಿ ನೀಡಲಾಗುವುದು ಎಂದ ಡಿಸಿಎಂ, ಉಳಿದಂತೆ ತರಗತಿಗಳು ಆರಂಭವಾದ ಮೇಲೆ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುವುದು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.
ಈ ಆನ್‌ಲೈನ್ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಸೇರಿದಂತೆ ರಾಜ್ಯದ ಎಲ್ಲ ವಿವಿಗಳ ಕುಲಪತಿ, ಕುಲ ಸಚಿವರು ಪಾಲ್ಗೊಂಡಿದ್ದರು.
ಡಿಸಿಎಂ ಅವರು ರಾಮನಗರದಿಂದಲೇ ವಿಡಿಯೊ ಸಂವಾದದಲ್ಲಿ ಭಾಗವಹಿಸಿದ್ದರು.