ಬೆಂಗಳೂರು(ನ.03): ರಾಜ್ಯದಲ್ಲಿ ಶಾಲೆಗಳನ್ನು ಎಂದಿನಿಂದ ಆರಂಭಿಸಬೇಕು ಎಂಬ ಕುರಿತು ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ವಿಸ್ತೃತವಾಗಿ ಚರ್ಚಿಸಿದ ಬಳಿಕ ಅಂತಿಮ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ.

ರಾಜ್ಯದೆಲ್ಲೆಡೆ ಶಾಲೆಗಳನ್ನು ಆರಂಭಿಸುವ ಸಂಬಂಧ ಸೋಮವಾರ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಹಾಗೂ ಜಿಲ್ಲಾ ಉಪ ನಿರ್ದೇಶಕರು (ಡಿಡಿಪಿಐ)ಗಳೊಂದಿಗೆ ಆಯುಕ್ತರು ಸಭೆ ಆಯೋಜಿಸಿದ್ದರು. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಭೆ ನಡೆಸಲು ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ಮಂಗಳವಾರ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸ್ಥಳೀಯವಾಗಿ ಸಂಗ್ರಹವಾದ ಮಾಹಿತಿಯನ್ನು ಆಧರಿಸಿ ಬುಧವಾರ ಇಲಾಖೆ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿಗಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು, ಮಾಹಿತಿಗಳು, ರಾಜ್ಯದ ವಿವಿಧ ಜಿಲ್ಲೆಗಳ ವಸ್ತುಸ್ಥಿತಿಯನ್ನು ಆಧರಿಸಿ ರಾಜ್ಯದಲ್ಲಿ ಶಾಲೆಗಳನ್ನು ಯಾವಾಗ ಆರಂಭಿಸಬೇಕು ಎಂಬ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ಇಲಾಖೆ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಲು ಸಾಧ್ಯವಾಗದಿದ್ದರೆ, ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ನಿರ್ಧರಿಸಬಹುದು ಎಂದು ತಿಳಿದು ಬಂದಿದೆ.

ಮಂಗಳವಾರದ ಸಭೆಯಲ್ಲಿ ಶಾಲೆಗಳ ಮೂಲಸೌಕರ್ಯ, ಶಾಲಾ ಕೊಠಡಿಗಳು, ಶಾಲೆಗಳ ತಾಂತ್ರಿಕ ಸಾಮರ್ಥ್ಯ, ಸ್ಥಳೀಯವಾಗಿ ಮಕ್ಕಳ ಪರಿಸ್ಥಿತಿ, ಬೋಧಕ ಸಿಬ್ಬಂದಿ ಸಂಖ್ಯೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕುರಿತು ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ. ನಂತರ ಬುಧವಾರ ಸಚಿವರೊಂದಿಗೆ ಚರ್ಚೆ ನಡೆಯಲಿದೆ.

ಇದೇ ತಿಂಗಳ 17ರಿಂದ ಕಾಲೇಜುಗಳನ್ನು ಆರಂಭಿಸುವುದಾಗಿ ಉನ್ನತ ಶಿಕ್ಷಣ ಇಲಾಖೆ ಘೋಷಿಸಿದೆ. ನೆರೆ ರಾಜ್ಯಗಳಾದ ಆಂಧ್ರಪ್ರದೇಶದಲ್ಲಿ ನ.2ರಿಂದ ಮತ್ತು ತಮಿಳುನಾಡಿನಲ್ಲಿ ನ.10ರಿಂದ ಶಾಲೆಗಳನ್ನು ಆರಂಭಿಸುವುದಾಗಿ ಅಲ್ಲಿನ ರಾಜ್ಯ ಸರ್ಕಾರಗಳು ಘೋಷಿಸಿವೆ. ರಾಜ್ಯದಲ್ಲಿಯೂ ಕೊರೋನಾ ಸೋಂಕಿನ ತೀವ್ರತೆ ಇಳಿಮುಖವಾಗುತ್ತಿರುವುದರಿಂದ ಶಾಲೆಗಳನ್ನು ಆರಂಭಿಸುವ ಕುರಿತು ಚರ್ಚೆಗಳು ಆರಂಭವಾಗಿವೆ.

ಶಿಕ್ಷಣ ಮತ್ತು ಆರೋಗ್ಯ ತಜ್ಞರು ಹಂತ ಹಂತವಾಗಿ ಕಾಲೇಜು ಮತ್ತು ಶಾಲೆಗಳನ್ನು ಆರಂಭಿಸುವಂತೆಯೂ ಸಲಹೆ ನೀಡಿದ್ದಾರೆ. ಇದರ ಜೊತೆಗೆ ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಶಾಲೆಗಳನ್ನು ಆರಂಭಿಸಿದ್ದು, ಅಲ್ಲಿನ ಪರಿಸ್ಥಿತಿಯನ್ನೂ ಅವಲೋಕಿಸಲಾಗುತ್ತದೆ. ಮಕ್ಕಳು ಶಾಲೆಗೆ ಬರುವುದರಿಂದ ಸೋಂಕು ಹರಡುವ ಸಾಧ್ಯತೆಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಏನೇನು ಸಾಧ್ಯತೆ?

1. ಹೆಚ್ಚಿನ ವಿದ್ಯಾರ್ಥಿಗಳು ಇರುವ ಶಾಲೆಗಳಲ್ಲಿ ತರಗತಿಗಳನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಪಾಳಿ ಪದ್ಧತಿಯಲ್ಲಿ ನಡೆಸಬಹುದು

2. ಅಸ್ಸಾಂ ರಾಜ್ಯದಲ್ಲಿ ಜಾರಿ ಮಾಡಿದ ರೀತಿಯಲ್ಲಿ ಸಮ ಮತ್ತು ಬೆಸ ಸಂಖ್ಯೆಯ ತರಗತಿಗಳನ್ನು ದಿನ ಬಿಟ್ಟು ದಿನ ನಡೆಸಬಹುದು

3. ಕಡಿಮೆ ವಿದ್ಯಾರ್ಥಿಗಳಿದ್ದು, ಸಾಮಾಜಿಕ ಅಂತರ ಕಾಪಾಡಲು ಸಾಕಷ್ಟುಕೊಠಡಿಗಳಿದ್ದರೆ ಎಲ್ಲ ಮಕ್ಕಳನ್ನು ಶಾಲೆಗೆ ಕರೆಯಬಹುದು

ಡಿಸೆಂಬರ್‌ ಮಧ್ಯದಲ್ಲಿ ಪುನಾರಂಭ ಆಗುತ್ತಾ?

ತಿಂಗಳಾಂತ್ಯಕ್ಕೆ ಅಥವಾ ಡಿಸೆಂಬರ್‌ ತಿಂಗಳ ಮಧ್ಯಭಾಗದಲ್ಲಿ ಶಾಲೆಗಳು ಆರಂಭವಾಗಬಹುದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಆದರೆ, ಇಲ್ಲಿಯವರೆಗೂ ಇಲಾಖೆಯಲ್ಲಿ ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲವಾದ್ದರಿಂದ ಅಂತಿಮವಾಗಿ ಇಲಾಖೆ ಬುಧವಾರ ಕೈಗೊಳ್ಳಲಿರುವ ನಿರ್ಣಯ ಮಹತ್ವದ್ದಾಗಿದೆ. ಹೀಗಾಗಿ, ಶಾಲೆ ಆರಂಭಿಸಲು ಸಭೆ ನಡೆಸುತ್ತಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಸದ್ಯಕ್ಕೆ ಶಾಲೆಯನ್ನು ಆರಂಭಿಸದಿರಲು ಸಹ ನಿರ್ಧರಿಸಬಹುದು ಎನ್ನಲಾಗಿದೆ.