Asianet Suvarna News Asianet Suvarna News

1ರಿಂದ 8ನೇ ತರಗತಿ ಆರಂಭ: ಸಚಿವ ನಾಗೇಶ್ ಹೇಳಿದ್ದಿಷ್ಟು

*  ಆ.23ರಿಂದ 9ರಿಂದ 12ನೇ ತರಗತಿವರೆಗೆ ಭೌತಿಕ ತರಗತಿ ಆರಂಭ
*  ಪ್ರಾಥಮಿಕ ಹಂತದಿಂದಲೇ ಶಾಲೆ ಆರಂಭಿಸಲು ಡಾ.ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಸಲಹೆ 
*  ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಸಚಿವ ನಾಗೇಶ್

Education Minister BC Nagesh Talks Over School Reopening in Karnataka grg
Author
Bengaluru, First Published Aug 27, 2021, 8:12 AM IST

ಚನ್ನಮ್ಮನ ಕಿತ್ತೂರು(ಆ.27): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಆ.30ರಂದು ಸಭೆ ನಡೆಸಿ 1ರಿಂದ 8ನೇ ತರಗತಿಯಿಂದ ಶಾಲೆಗಳನ್ನು ಪ್ರಾರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ. 

ಆ.23ರಿಂದ 9ರಿಂದ 12ನೇ ತರಗತಿವರೆಗೆ ಭೌತಿಕ ತರಗತಿ ಆರಂಭಿಸಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ಭೌತಿಕ ತರಗತಿ ಸಾಧಕ ಬಾಧಕಗಳನ್ನು ಆಧರಿಸಿ 1 ರಿಂದ 8ನೇ ತರಗತಿ ಆರಂಭಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು. 

ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸಲು ಡಾ.ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಸಲಹೆ ಕೊಟ್ಟಿದೆ. ಆದರೆ ತಾಂತ್ರಿಕ ಸಮಿತಿಯ ವರದಿಯನ್ನು ನೋಡಿಕೊಂಡು ಮುಂದುವರಿಯಲಾಗುವುದು. ಒಂದು ವೇಳೆ ಮೂರನೇ ಅಲೆ ಆರಂಭವಾದರೆ ಶಾಲೆಗಳನ್ನು ಬಂದ್‌ ಮಾಡುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಶೇ.85 ರಿಂದ 90 ರಷ್ಟು ಶಿಕ್ಷಕರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಉಳಿದ ಶೇ.10 ರಿಂದ 15 ರಷ್ಟುಶಿಕ್ಷಕರಿಗೆ ಈ ತಿಂಗಳು ಲಸಿಕೆ ನೀಡಲಾಗುವುದು ಎಂದರು.

9-12 ತರಗತಿ ಪ್ರಾರಂಭ: ಮಕ್ಕಳ ಸ್ವಾಗತಕ್ಕೆ 16,000 ಶಾಲೆ, 5,000 ಕಾಲೇಜು ಸಜ್ಜು!

ಲಸಿಕೆ ಪಡೆಯದ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವಂತಿಲ್ಲ. ಪಾಠ ಮಾಡುವುದಿಲ್ಲ ಎಂಬ ಕಾರಣಕ್ಕೆ ಶಾಲೆಗೆ ಬಾರದ ಶಿಕ್ಷಕರಿಗೆ ಆ ದಿನ ರಜೆ ಎಂದು ಪರಿಗಣಿಸಲಾಗುವುದು ಎಂದರು.
ರಾಜ್ಯದ ಶೇ.50 ರಷ್ಟು ಮಕ್ಕಳಿಗೆ ಈಗಾಗಲೇ ಪುಸ್ತಕ ವಿತರಣೆ ಮಾಡಲಾಗಿದೆ. 9 ಹಾಗೂ 10ನೇ ತರಗತಿಯ ಮಕ್ಕಳಿಗೆ ಪೂರ್ಣ ಪ್ರಮಾಣದ ಪುಸ್ತಕಗಳ ಲಭ್ಯತೆ ಇದೆ. ಸೆ.15 ರೊಳಗೆ ಎಲ್ಲ ಶಾಲೆಗಳಿಗೆ ಶೇ.100 ರಷ್ಟು ಪುಸ್ತಕ ವಿತರಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವರ ಅಸಮಾಧಾನ:

ಈಗಿನ ಪಠ್ಯದಲ್ಲಿ ತ್ಯಾಗ ಬಲಿದಾನಗಳನ್ನು ಮಾಡಿದ ಅನೇಕ ಮಹನೀಯರ ಹೆಸರುಗಳು ಮಾಯವಾಗಿ ದೇಶವನ್ನು ಕೊಳ್ಳೆ ಹೊಡೆದ ಲೂಟಿಕೋರರ ಇತಿಹಾಸಗಳೇ ಹೆಚ್ಚಾಗಿವೆ. ಇದರಿಂದ ವಿದ್ಯಾರ್ಥಿಗಳು ಇಂತಹ ಇತಿಹಾಸಗಳಿಂದ ಏನು ನೀತಿ ಪಾಠ ಕಲಿಯಲು ಸಾಧ್ಯ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತಸಿಂಗ್‌, ಝಾನ್ಸಿರಾಣಿ ಲಕ್ಷ್ಮೀಬಾಯಿ, ಉಲ್ಲಾಳ ರಾಣಿ ಅಬ್ಬಕ್ಕ ದೇವಿ ಅಂತಹ ಮಹಾನ್‌ ನಾಯಕರ ತ್ಯಾಗ ಬಲಿದಾನಗಳ ಬಗ್ಗೆ ಅರಿಯುವುದು ಮಹತ್ವದ್ದಾಗಿದೆ. ನೂತನ ಶಿಕ್ಷಣ ನೀತಿಯು ಪರಿಣಾಮಕಾರಿಯಾಗಿ ಉಪಯೋಗಕ್ಕೆ ಬರಲಿದ್ದು ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಇದನ್ನು ಜಾರಿ ಮಾಡಲಾಗಿದೆ ಎಂದರು.

ವಿದ್ಯಾರ್ಥಿಗಳ ಜತೆ ಸಂವಾದ:

ಇಲ್ಲಿನ ಸರ್ಕಾರಿ ಪಪೂ ಮಹಾವಿದ್ಯಾಲಯಕ್ಕೆ ತೆರಳಿದ ಸಚಿವರು, ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಸಚಿವ ನಾಗೇಶ್‌, ವಿದ್ಯಾರ್ಥಿಗಳು ಮೊಬೈಲ್‌ ಗೀಳು ಅಂಟಿಸಿಕೊಳ್ಳಬೇಡಿ. ಇದರಿಂದ ಜೀವನವೇ ಹಾಳಾಗುತ್ತದೆ. ಈ ಕಾರಣದಿಂದಲೇ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಆನ್‌ಲೈನ್‌ ಪಾಠ ಬೇಕೋ ಅಥವಾ ಆಫ್‌ಲೈನ್‌ ಬೇಕೊ? ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.

ಸಚಿವರ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿಗಳು, ಆನ್‌ಲೈನ್‌ ಪಾಠಕ್ಕಿಂತ ಆಫ್‌ಲೈನ್‌ ಪಾಠವೇ ಪರಿಣಾಮಕಾರಿಯಾಗಿರುತ್ತದೆ. ಸಮಸ್ಯೆಗಳ ಕುರಿತು ಹೆಚ್ಚಿನ ಚರ್ಚೆಗೆ ಆನ್‌ಲೈನ್‌ನಲ್ಲಿ ಅವಕಾಶ ಕಡಿಮೆ. ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಇಂಟರನೆಟ್‌ ಸಮಸ್ಯೆಯಿಂದಾಗಿ ಎಲ್ಲ ಮಾಹಿತಿಗಳು ಸಂಪೂರ್ಣವಾಗಿ ದೊರೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಸಮಸ್ಯೆಗಳ ಕುರಿತು ಮನದಟ್ಟು ಮಾಡಿಕೊಟ್ಟರು.
 

Follow Us:
Download App:
  • android
  • ios