ಬೆಂಗಳೂರು(ಅ.24): ಕೊರೋನಾ ಹಿನ್ನೆಲೆಯಲ್ಲಿ 7 ತಿಂಗಳಿಂದ ಬಂದ್‌ ಆಗಿದ್ದ ಕಾಲೇಜುಗಳ ಆರಂಭಕ್ಕೆ ಸರ್ಕಾರ ಕೊನೆಗೂ ಮಹೂರ್ತ ನಿಗದಿಯಾಗಿದೆ. ನವೆಂಬರ್‌ 17ರಿಂದ ರಾಜ್ಯಾದ್ಯಂತ ಇಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳನ್ನು ಪುನಾರಂಭಿಸುವುದಾಗಿ ಘೋಷಿಸಿದೆ.

ಆದರೆ, ಕೋವಿಡ್‌ ಆತಂಕ ಮುಂದುವರೆದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರಲೇಬೇಕೆಂದು ಕಡ್ಡಾಯವಿಲ್ಲ. ಸ್ವ ಇಚ್ಛೆಯಿಂದ ನೋಂದಾಯಿಸಿಕೊಂಡು ಕಾಲೇಜಿಗೆ ಬರಬಹುದು ಅಥವಾ ಬರಲು ಇಚ್ಚಿಸದವರು ಮನೆಯಲ್ಲೇ ಆನ್‌ಲೈನ್‌ ಶಿಕ್ಷಣ ಪಡೆದುಕೊಳ್ಳ ಬಹುದು. ಕಾಲೇಜಿಗೆ ಬರಲಿಚ್ಛಿಸುವ ವಿದ್ಯಾರ್ಥಿಗಳು ಪೋಷಕರ ಲಿಖಿತ ಅನುಮತಿ ಪಡೆದುಕೊಂಡು ಬರಬೇಕು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ನವೆಂಬರ್‌ 17 ರಿಂದ ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳನ್ನು ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಇಲಾಖೆ, ಸಾರಿಗೆ, ಹಣಕಾಸು ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖಾ ಅಧಿಕಾರಿಗಳ ಸಭೆಯಲ್ಲಿ ನವೆಂಬರ್‌ 17 ರಿಂದ ರಾಜ್ಯದಲ್ಲಿ ಪದವಿ ಪೂರ್ವ ಮೇಲ್ಪಟ್ಟಎಲ್ಲಾ ರೀತಿಯ ಕಾಲೇಜುಗಳನ್ನು ಆರಂಭ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಇಂಜಿನಿಯರಿಂಗ್‌, ವೈದ್ಯಕೀಯ ಕಾಲೇಜುಗಳೂ ಸೇರಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳನ್ನು ನ.17 ರಿಂದ ಆರಂಭಿಸಲಾಗುವುದು ಎಂದು ತಿಳಿಸಿದರು.

ಮಾರ್ಗಸೂಚಿ ಪಾಲಿಸಿ:

ಸಾಮಾಜಿಕ ಅಂತರ, ಮಾಸ್ಕ್‌ ಕಡ್ಡಾಯ ಸೇರಿದಂತೆ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾಲೇಜುಗಳನ್ನು ಆರಂಭಿಸಲಾಗುವುದು. ಕಾಲೇಜುಗಳನ್ನು ಆರಂಭಿಸಿದರೂ ವಿದ್ಯಾರ್ಥಿಗಳ ಹಾಜರಾತಿಗೆ ಒತ್ತಾಯ, ಕಡ್ಡಾಯ ಇರುವುದಿಲ್ಲ. ಇಚ್ಛೆ ಇದ್ದರೆ ತರಗತಿಗೆ ಹಾಜರಾಗಬಹುದು. ಇಲ್ಲದಿದ್ದರೆ ಮನೆಯಲ್ಲಿ ಆನ್‌ಲೈನ್‌ನಲ್ಲೇ ಶಿಕ್ಷಣ ಮುಂದುವರೆಸುವ ನಿರ್ಧಾರವನ್ನು ವಿದ್ಯಾರ್ಥಿಗಳೇ ಕೈಗೊಳ್ಳಬಹುದು. ಸಾಮಾಜಿಕ ಅಂತರ ದೃಷ್ಟಿಯಿಂದ ಪ್ರತಿ ತರಗತಿಯಲ್ಲಿ 30 ಮಕ್ಕಳಿಗೆ ಮಾತ್ರ ಕೂರಲು ಅವಕಾಶ ನೀಡಲಾಗುವುದು. ಅದರಂತೆ ಎಷ್ಟುಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುತ್ತಾರೋ ಅದರ ಆಧಾರದ ಮೇಲೆ ಬ್ಯಾಚ್‌ ಅಥವಾ ಶಿಫ್ಟ್‌ ಮಾದರಿಯಲ್ಲಿ ತರಗತಿ ನಡೆಸಲಾಗುವುದು ಎಂದು ವಿವರಿಸಿದರು.

ಥಿಯರಿ ತರಗತಿಗಳನ್ನು ತರಗತಿ ಅಥವಾ ಆನ್‌ಲೈನ್‌ ಹೇಗೆ ಬೇಕಾದರೂ ಕಲಿಯಬಹುದು. ಆದರೆ, ಪ್ರಯೋಗಾಲಯ, ಪ್ರಾಕ್ಟಿಕಲ್‌ ತರಗತಿಗಳಿಗೆ ಖುದ್ದು ಹಾಜರಾಗಬೇಕಾಗುತ್ತದೆ. ಹೀಗಾಗಿ ಮುಂಜಾಗ್ರತೆಯೊಂದಿಗೆ ತರಗತಿಗಳನ್ನು ಆರಂಭಿಸಲಾಗುವುದು ಎಂದರು.

ಪ್ರತಿ ಕಾಲೇಜಿನಲ್ಲಿ ಟಾಸ್ಕ್‌ ಫೋರ್ಸ್‌:

ಯುಜಿಸಿ ಮಾರ್ಗಸೂಚಿಯಲ್ಲಿ ನವೆಂಬರ್‌ನಲ್ಲಿ ಆಫ್‌ಲೈನ್‌ ತರಗತಿ ಆರಂಭಕ್ಕೆ ಅವಕಾಶ ಬೀಡಿರುವುದರಿಂದ ಪೂರ್ವಭಾವಿ ಸಭೆ ನಡೆಸಿ ನಿರ್ಧಾರ ಮಾಡಲಾಗಿದೆ. ಮಾರ್ಗಸೂಚಿ ಸಂಬಂಧ ಶೀಘ್ರದಲ್ಲೇ ಉನ್ನತ ಶಿಕ್ಷಣ ಇಲಾಖೆಯಿಂದಲೂ ಪ್ರಕಟಣೆ ಹೊರಡಿಸಲಾಗುತ್ತದೆ. ಪ್ರತಿ ಕಾಲೇಜಿನಲ್ಲಿ ಮಾರ್ಗಸೂಚಿಗಳ ಅನುಷ್ಠಾನಕ್ಕೆ ಕಾರ್ಯಪಡೆ ರಚಿಸಲಾಗುವುದು. ಜಿಲ್ಲಾಮಟ್ಟದಲ್ಲಿ ಡಿಸಿ ನೇತೃತ್ವದಲ್ಲಿ ಮುಖ್ಯ ಟಾಸ್ಕ್‌ ಫೋರ್ಸ್‌ ರಚಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಪೋಷಕರು ಲಿಖಿತ ಅನುಮತಿ ಕೊಡಬೇಕು

ಕಾಲೇಜಿಗೆ ಬರಲಿಚ್ಛಿಸುವ ವಿದ್ಯಾರ್ಥಿಗಳ ಪೋಷಕರಿಂದ ಲಿಖಿತ ಅನುಮತಿಯನ್ನೂ ಪಡೆಯಲಾಗುವುದು. ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ನಮ್ಮ ಅಭ್ಯಂತರ ಅಥವಾ ಆಕ್ಷೇಪವಿಲ್ಲ ಎಂದು ಲಿಖಿತ ಅನುಮತಿ ನೀಡಬೇಕು.

ಮುಖ್ಯಮಂತ್ರಿ ಅವರು ನವೆಂಬರ್‌ 17 ರಂದು ಲರ್ನಿಂಗ್‌ ಮ್ಯಾನೆಜ್ಮೆಂಟ್‌ ಪೋರ್ಟಲ್‌ಗೆ ಚಾಲನೆ ನೀಡಲಿದ್ದಾರೆ. ಅದರಲ್ಲಿ ಪ್ರತಿ ವಿದ್ಯಾರ್ಥಿಗಳು ತಾವು ಕಾಲೇಜಿಗೆ ಬರಲು ಇಚ್ಛಿಸುವಿರಾ ಇಲ್ಲಾ ಆನ್‌ಲೈನ್‌ ಶಿಕ್ಷಣ ಮುಂದುವರೆಸಲು ಇಚ್ಛಿಸುವಿರಾ ಎಂದು ದಾಖಲಿಸಬೇಕು. ಪೋಷಕರ ಅನುಮತಿ ಪತ್ರವನ್ನೂ ನೀಡಬೇಕು. ಇದರ ಪೂರ್ಣ ವಿವರದ ಬಗ್ಗೆ ಶೀಘ್ರ ಇಲಾಖಾ ಆದೇಶ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಹಾಸ್ಟೆಲ್‌ಗಳೂ ಆರಂಭ

ಕಾಲೇಜುಗಳನ್ನು ಆರಂಭಿಸಿದ ಮೇಲೆ ವಿದ್ಯಾರ್ಥಿಗಳ ವಸತಿ ಸೌಕರ್ಯಕ್ಕೆ ಹಾಸ್ಟೆಲ್‌ಗಳನ್ನೂ ಆರಂಭಿಸಬೇಕು. ಹಾಗಾಗಿ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಅನುಸರಿಸಿ ವಿಶ್ವವಿದ್ಯಾಲಯಗಳು, ಎಸ್ಸಿ ಎಸ್ಟಿಹಾಸ್ಟೆಲ್‌ಗಳು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಸೇರಿ ಎಲ್ಲ ಹಾಸ್ಟೆಲ್‌ಗಳನ್ನೂ ಆರಂಭಿಸಲಾಗುವುದು ಎಂದು ಇದೇ ವೇಳೆ ಸಚಿವ ಅಶ್ವತ್ಥನಾರಾಯಣ್‌ ತಿಳಿಸಿದರು.

ಪಠ್ಯಕ್ರಮ ಕಡಿತ ಚಿಂತನೆ ಇಲ್ಲ

ಸರ್ಕಾರ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳ ಪಠ್ಯಕ್ರಮ ಕಡಿತ ಮಾಡುವ ಇರಾದೆ ಹೊಂದಿಲ್ಲ.

ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ ಬದಲಾಯಿಸದಿರಲು ನಿರ್ಧರಿಸಿದೆ. ಆದರೆ 1, 3, 5ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಕೆಲವು ರಿಯಾಯಿತಿ ನೀಡಲಾಗುತ್ತದೆ. ಈ ಸೆಮಿಸ್ಟರ್‌ಗೆ ಮಾತ್ರ ಪಠ್ಯೇತರ, ಅಸೆಸ್‌ಮೆಂಟ್‌ ಗ್ರೇಸ್‌ ಮಾರ್ಕ್ಸ್‌ ನೀಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಈಗಾಗಲೇ 1ನೇ ತರಗತಿಯಿಂದ ಪಿಯುವರೆಗೆ ಪಠ್ಯ ಕಡಿತ ಆಗಿದೆ. ಪದವಿ, ಪಿಜಿ ಪಠ್ಯಕ್ರಮದಲ್ಲಿ ಕಡಿತ ಮಾಡಲು ಚಿಂತಿಸಿಲ್ಲ. ಕೋರೋನಾ ನಿಯಂತ್ರಣಕ್ಕೆ ಬಂದ್ರೆ ಭಾನುವಾರ ರಜಾ ದಿನಗಳಲ್ಲೂ ತರಗತಿ ನಡೆಸುವ ಚಿಂತನೆಯಿದೆ ಎಂದರು.