* ಸದ್ಯಕ್ಕೆ 60% ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ* ಆಗಸ್ಟ್‌ನಲ್ಲಿ ಡಿಗ್ರಿ ಕಾಲೇಜು ಶುರು?* 80% ಮಕ್ಕಳಿಗೆ ಹಾಕಿದ ನಂತರವೇ ಆರಂಭ* ಮೊದಲು ಬಾಕಿ ಉಳಿಸದ ಸೆಮಿಸ್ಟರ್ ಪರೀಕ್ಷೆ* ಬಳಿಕ ಡಿಗ್ರಿ, ವೈದ್ಯ ಕಾಲೇಜು: ಮೂಲಗಳು
ಬೆಂಗಳೂರು(ಜು.09): ರಾಜ್ಯದಲ್ಲಿ ಉನ್ನತ ಶಿಕ್ಷಣ (ಪದವಿ/ಎಂಬಿಬಿಎಸ್) ವ್ಯಾಸಂಗದ ಕನಿಷ್ಠ ಶೇ.80ರಷ್ಟುವಿದ್ಯಾರ್ಥಿಗಳಿಗಾದರೂ ಕೋವಿಡ್ ಲಸಿಕೆ ನೀಡಿ ಬಾಕಿ ಇರುವ ವಿವಿಧ ಸೆಮಿಸ್ಟರ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರವೇ ಕಾಲೇಜುಗಳನ್ನು ಭೌತಿಕವಾಗಿ ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಆ ಪ್ರಕಾರ, ಇನ್ನು ನಾಲ್ಕೈದು ದಿನಗಳಲ್ಲಿ ಲಸಿಕಾಕರಣದ ಪ್ರಗತಿ ಶೇ. 80ರಷ್ಟುತಲುಪುವ ಸಾಧ್ಯತೆ ಇದೆ. ಆ ನಂತರ ಮಾಚ್‌ರ್‍ನಲ್ಲೇ ನಡೆಯಬೇಕಿದ್ದ ಬೆಸ ಸಂಖ್ಯೆಯ 1,3,5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಆರಂಭಿಸಿ ಜುಲೈ ಅಂತ್ಯದ ವೇಳೆಗೆ ಪೂರ್ಣಗೊಳಿಸುವುದಕ್ಕೆ ಆದ್ಯತೆಯನ್ನು ಶಿಕ್ಷಣ ಇಲಾಖೆ ನೀಡಲಿದೆ. ಇದಾದ ನಂತರ ಅಂದರೆ ಬಹುತೇಕ ಆಗಸ್ಟ್ ಮೊದಲ ವಾರ ಭೌತಿಕವಾಗಿ ಕಾಲೇಜುಗಳನ್ನು ಆರಂಭಿಸುವ ಆಲೋಚನೆ ಇಲಾಖೆಯದ್ದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಮಧ್ಯೆ, ಜು.19 ರ ನಂತರ ಭೌತಿಕವಾಗಿ ಕಾಲೇಜುಗಳನ್ನು ಆರಂಭಿಸಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಅಧಿಕೃತ ಘೋಷಣೆಯಷ್ಟೇ ಬಾಕಿ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು, ‘ಇದುವರೆಗೂ ಭೌತಿಕವಾಗಿ ಕಾಲೇಜು ಆರಂಭದ ಬಗ್ಗೆ ದಿನಾಂಕ ನಿಗದಿಯಾಗಿಲ್ಲ. ವಿದ್ಯಾರ್ಥಿಗಳ ಲಸಿಕಾಕರಣ ವೇಗಗೊಳಿಸುವಷ್ಟೇ ನಮ್ಮ ಈಗಿನ ಆದ್ಯತೆ’ ಎಂದು ಹೇಳಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ ಜು.7ರವರೆಗೆ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಕಾಳೇಜುಗಳಲ್ಲಿ ಒಟ್ಟಾರೆ ಶೇ.60ರಷ್ಟುವಿದ್ಯಾರ್ಥಿಗಳಿಗೆ ಮೊದಲ ಡೋಸ್ ಲಸಿಕೆ ನೀಡುವ ಕಾರ್ಯ ಪೂರ್ಣಗೊಂಡಿದ್ದು, ಲಸಿಕಾರಣಕ್ಕೆ ಇನ್ನಷ್ಟುವೇಗ ನೀಡಲು ಡಾ| ಅಶ್ವತ್‌್ಥ ನಾರಾಯಣ ಅವರು ಗುರುವಾರ ಇಲಾಖೆಯ ಅಧಿಕಾರಿಗಳು ಹಾಗೂ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ನಡೆಸಿ ಸೂಚನೆ ನೀಡಿದ್ದಾರೆ.
ತಜ್ಞರಲ್ಲಿ 2 ಅಭಿಪ್ರಾಯ:
ಈ ಸಭೆಯಲ್ಲಿ ಕೆಲವರು, ‘ಕನಿಷ್ಠ ಶೇ.80ರಷ್ಟುವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯ ಪೂರ್ಣಗೊಂಡರೆ ಒಂದು ಮಟ್ಟಕ್ಕೆ ವಿದ್ಯಾರ್ಥಿ ವಲಯದಲ್ಲಿ ಹರ್ಡ್ ಇಮ್ಯುನಿಟಿ ಬೆಳೆಯುತ್ತದೆ. ಆ ನಂತರ ಕಳೆದ ಮಾಚ್‌ರ್‍ನಲ್ಲಿ ನಡೆಬೇಕಿದ್ದ ಬೆಸ ಸಂಖ್ಯೆಯ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ನಡೆಸಲು ಸೂಚನೆ ನೀಡಬಹುದು. ಪರೀಕ್ಷೆಗಳು ಮುಗಿದ ಬಳಿಕ ಕಾಲೇಜುಗಳನ್ನು ಭೌತಿಕವಾಗಿ ಆರಂಭಿಸಬಹುದು’ ಎಂಬ ಸಲಹೆ ನೀಡಿದ್ದಾರೆ.
ಆದರೆ ಇನ್ನೂ ಕೆಲವರು, ‘ಕೆಲವೇ ದಿನಗಳಲ್ಲಿ ಶೇ.80ರಷ್ಟುಲಸಿಕಾಕರಣ ಪೂರ್ಣಗೊಳ್ಳುವುದರಿಂದ ಉಳಿದ ಶೇ.20ರಷ್ಟುಮಕ್ಕಳು ತಮ್ಮದೇ ಊರಿನಲ್ಲಿ ಅಥವಾ ಸಾರ್ವಜನಿಕರಿಗೆ ಲಸಿಕೆ ನೀಡುವ ಸ್ಥಳಗಳಲ್ಲೇ ಲಸಿಕೆ ಪಡೆದಿರುವ ಸಾಧ್ಯತೆ ಇದೆ. ಈ ಬಗ್ಗೆ ಎಲ್ಲ ಮಕ್ಕಳಿಂದ ಮಾಹಿತಿ ಪಡೆದು ಜು.19ರ ನಂತರ ಕಾಲೇಜುಗಳನ್ನು ಭೌತಿಕವಾಗಿ ಆರಂಭಿಸಿ ಆ ನಂತರ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಬಹುದು’ ಎಂಬ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಯಾವುದೇ ತೀರ್ಮಾನ ಆಗಿಲ್ಲ
ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ತೀರ್ಮಾನ ಇದುವರೆಗೂ ಆಗಿಲ್ಲ. ಸದ್ಯಕ್ಕೆ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಮಾತ್ರ ಸರ್ಕಾರದ ಆದ್ಯತೆಯಾಗಿದೆಯೇ ಹೊರತು ಕಾಲೇಜುಗಳನ್ನು ಆರಂಭಿಸುವುದಲ್ಲ.
- ಡಾ| .ಎನ್.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ
