ಬೆಂಗಳೂರು(ಮಾ.27): ಕೊರೋನಾ 2ನೇ ಭೀತಿ ನಡುವೆಯೇ ಕಾಲೇಜು, ಹಾಸ್ಟೆಲ್‌ಗಳು ಕೊರೋನಾ ಹಾಟ್‌ಸ್ಪಾಟ್‌ಗಳಾಗಿ ಬದಲಾಗುತ್ತಿದ್ದು, ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಶುಕ್ರವಾರ ಒಂದೇ ದಿನದ ರಾಜ್ಯದ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ 53ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಆತಂಕ ಹೆಚ್ಚಾಗಿದೆ. ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿರುವ ಅಂಬಿಕಾ ನರ್ಸಿಂಗ್‌ ಕಾಲೇಜಿನ 31 ವಿದ್ಯಾರ್ಥಿಗಳಿಗೆ ಸೋಂಕು ದೃಢವಾಗಿದ್ದರೆ, ಬೆಂಗಳೂರಿನ ಜೋಗು​ಪಾಳ್ಯದ ಬಿಬಿಎಂಪಿಯ ಶಾಲೆ​ಯ​ 9 ವಿದ್ಯಾ​ರ್ಥಿ​ಗ​ಳ ವರದಿ ಪಾಸಿಟಿವ್‌ ಬಂದಿದೆ. 

1-2 ದಿನಕ್ಕೆ ಬೆಂಗ್ಳೂರಿಗೆ ಬಂದ್ರೆ ವರದಿ ಬೇಕಿಲ್ಲ: ಸಚಿವ ಸುಧಾಕರ್‌

ಮಂಗಳೂರಿನ ಖಾಸಗಿ ನರ್ಸಿಂಗ್‌ ಕಾಲೇಜಿನಲ್ಲಿ ಮತ್ತೆ 6 ಮಂದಿಯಲ್ಲಿ ಸೋಂಕು ಕಂಡುಬಂದ್ದಿದರೆ, ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಪಬ್ಲಿಕ್‌ ಶಾಲೆಯ 8ನೇ ತರಗತಿ ವಿದ್ಯಾರ್ಥಿಗೆ ಸೋಂಕು ಹಬ್ಬಿದೆ. ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌)ನ ಎಂಬಿಬಿಎಸ್‌ನ ನಾಲ್ಕು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.