Asianet Suvarna News Asianet Suvarna News

ಸರ್ಕಾರಿ ಶಾಲೆಗಳತ್ತ ಮಕ್ಕಳು: ಸಿಎಂ ಯಡಿಯೂರಪ್ಪ ಸಂತಸ

ವಿದ್ಯಾಗಮ ಯೋಜನೆ ರೂಪಿಸಿದ ಶಿಕ್ಷಣ ಇಲಾಖೆಗೆ ಸಿಎಂ ಬಿಎಸ್‌ವೈ ಶ್ಲಾಘನೆ| ಶಿಕ್ಷಕರ ದಿನಾಚರಣೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದವರಿಗೆ ಸನ್ಮಾನ| 20 ಪ್ರಾಥಮಿಕ ಶಾಲಾ ಶಿಕ್ಷಕರು, 10 ಪ್ರೌಢಶಾಲಾ ಶಿಕ್ಷಕರು, 10 ಮಂದಿ ಪಿಯು ಕಾಲೇಜು ಉಪನ್ಯಾಸಕರು, ಪ್ರಾಂಶುಪಾಲರು ಮತ್ತು ರಾಷ್ಟ್ರಪ್ರಶಸ್ತಿ ಪಡೆದ ರಾಜ್ಯದ ಮೂವರು ಶಿಕ್ಷಕರನ್ನು ಗೌರವಿಸಲಾಯಿತು| 

CM BS Yediyurappa Happy for Childrens Comes to Government Schools
Author
Bengaluru, First Published Sep 12, 2020, 1:13 PM IST

ಬೆಂಗಳೂರು(ಸೆ.12): ಕೊರೋನಾ ಕಾಲಘಟ್ಟದಲ್ಲಿ ಶಿಕ್ಷಣ ಇಲಾಖೆ ರೂಪಿಸಿರುವ ‘ವಿದ್ಯಾಗಮ’ ಯೋಜನೆ ಅಡಿ ಖಾಸಗಿ ಶಾಲೆಗಳಿಂದ ಮಕ್ಕಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿರುವುದು ಶಿಕ್ಷಣ ಇಲಾಖೆಯ ಸುಧಾರಣೆಯ ದ್ಯೋತಕವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶ್ಲಾಘಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೋನಾ ಸಂದರ್ಭದಲ್ಲಿ ಮಕ್ಕಳು ಶಾಲೆಯಿಂದ ಅನಿವಾರ್ಯವಾಗಿ ದೂರ ಉಳಿದಿದ್ದರಿಂದ ಕಲಿಕಾ ಪ್ರಕ್ರಿಯೆ ಮುಂದುವರೆಸಲು ‘ವಿದ್ಯಾಗಮ’ ಎಂಬ ವಿನೂತನ ಕಾರ್ಯಕ್ರಮ ರೂಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಲ್ಲಿ ಮಕ್ಕಳು ಮತ್ತು ಶಿಕ್ಷಕರು ತೊಡಗಿಸಿಕೊಳ್ಳುವಂತೆ ಮಾಡಿರುವುದು ಸಹ ಉತ್ತಮ ಪ್ರಯತ್ನವಾಗಿದೆ. ಈ ಕ್ರಮವನ್ನು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಕೂಡ ಶ್ಲಾಘಿಸಿದೆ ಎಂದರು.

ಸಂವಿಧಾನದ ಶ್ರೇಷ್ಠ ಮೌಲ್ಯಗಳಾದ ಸಮಾನತೆ, ಸಹೋದರತ್ವ, ಸಹಬಾಳ್ವೆ, ಸಾಮಾಜಿಕ ನ್ಯಾಯಗಳನ್ನು ಶಿಕ್ಷಕರು ಅಳವಡಿಸಿಕೊಂಡು ಕ್ರಿಯಾಶಕ್ತಿ ಹಾಗೂ ಮೌಲ್ಯಗಳನ್ನು ಬೆಳೆಸಲು ಶ್ರಮಿಸಬೇಕಿದೆ. ಸಮಾಜದಲ್ಲಿ ತಂದೆ ಹಾಗೂ ತಾಯಿಯ ನಂತರದ ಸ್ಥಾನ ಗುರುವಿಗೇ ಮೀಸಲಾಗಿದೆ. ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಎಸ್‌. ರಾಧಾಕೃಷ್ಣನ್‌ ಶ್ರೇಷ್ಠ ದಾರ್ಶನಿಕರಾಗಿ, ಆದರ್ಶನೀಯ ಶಿಕ್ಷಕರಾಗಿದ್ದರು. ಸೇವಾ ಹಂತದಲ್ಲಿಯೇ ರಾಷ್ಟ್ರದ ಉಪರಾಷ್ಟ್ರಪತಿಯಾಗಿ, ರಾಷ್ಟ್ರಪತಿಗಳಾಗಿ ಅತ್ಯುನ್ನತ ಹುದ್ದೆಗೇರಿದವರು. ಈ ಮೂಲಕ ಶಿಕ್ಷಕ ಹುದ್ದೆಯ ಸಾಧ್ಯತೆಗಳು ಹಾಗೂ ಶ್ರೇಷ್ಠತೆಯನ್ನು ಜಗತ್ತಿಗೆ ತೆರೆದಿಟ್ಟವರು ಎಂದರು.

'ನನ್ನ ರಾಷ್ಟ್ರೀಯ ಶಿಕ್ಷಣ ನೀತಿ’ ಸ್ಪರ್ಧೆಗೆ ಸಚಿವ ಅಶ್ವತ್ಥ ನಾರಾಯಣ ಚಾಲನೆ

ಶಿಕ್ಷಣ ಸಚಿವರಿಗೆ ಶ್ಲಾಘನೆ:

ಇಡೀ ಜಗತ್ತನೇ ಆವರಿಸಿರುವ ಕೊರೋನಾವನ್ನು ಸವಾಲಾಗಿ ಸ್ವೀಕರಿಸಿ ಹಾಗೂ ದೇಶವೇ ಮೆಚ್ಚುಗೆ ವ್ಯಕ್ತಪಡಿಸುವಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಕಾರ್ಯಕ್ಕೆ ಮುಖ್ಯಮಂತ್ರಿಗಳು ಶ್ಲಾಘಿಸಿದರು. ಇಲಾಖೆ ಅಧಿಕಾರಿಗಳನ್ನು ಹುರಿದುಂಬಿಸಿ, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸಿ ಯಶಸ್ಸು ಕಂಡಿದ್ದಾರೆ ಎಂದರು.

CM BS Yediyurappa Happy for Childrens Comes to Government Schools

ಇದರ ಜೊತೆಗೆ ಶಿಕ್ಷಕರು ಕುಳಿತಲ್ಲಿಯೇ ಸೇವಾ ವಿಷಯಗಳು, ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕಾಗಿ ‘ಶಿಕ್ಷಣವಾಣಿ’ ಎಂಬ ಸಹಾಯವಾಣಿ, ವರ್ಗಾವಣೆ ಪ್ರಕ್ರಿಯೆ ಸುಲಭಗೊಳಿಸುವುದಕ್ಕಾಗಿ ‘ಶಿಕ್ಷಕ ಮಿತ್ರ’ ಆ್ಯಪ್‌ ಹಾಗೂ ಕೊರೋನಾ ಸಮಯದಲ್ಲಿ ಚಂದನ ವಾಹಿನಿಯಲ್ಲಿ ಆರಂಭಿಸಿರುವ ‘ಸೇತುಬಂಧ’ ಕಾರ್ಯಕ್ರಮಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯಕ್ಕೆ ಚಿಂತನೆ:

ಸಚಿವ ಸುರೇಶ್‌ಕುಮಾರ್‌ ಮಾತನಾಡಿ, ಕೊರೋನಾದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸಹಾಯ ಮಾಡುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಮೊದಲ ಹಂತದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಆದೇಶ ನೀಡಲಾಗಿದೆ. ದಾಖಲಾತಿಯಲ್ಲಿ ಸಂಗ್ರಹವಾದ ಹಣವನ್ನು ಶಿಕ್ಷಕರ ವೇತನಕ್ಕೆ ಬಳಸಿಕೊಳ್ಳುವಂತೆ ಸೂಚಿಲಾಗಿದೆ. ಎರಡನೇ ಹಂತದಲ್ಲಿ ಸರ್ಕಾರದಿಂದ ಯಾವ ರೀತಿಯ ಸಹಾಯ ನೀಡಬೇಕೆಂದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಅಂಕಪಟ್ಟಿ ಸುರಕ್ಷತೆ ತಂತ್ರಜ್ಞಾನ:

ಇದೇ ವೇಳೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದಕ್ಕಾಗಿ ಬ್ಲಾಕ್‌ ಚೈನ್‌ ತಂತ್ರಜ್ಞಾನ ವಿಧಾನ ಹಾಗೂ ಕೊರೋನಾ ಸಂದರ್ಭದಲ್ಲಿ ಶಿಕ್ಷಕರು ಪಾಠ ಮಾಡುವುದಕ್ಕಾಗಿ ತಿಳಿಸುವ ‘ಕಲಿಕಾ ಸಂವರ್ಧನಾ’ ಕೈಪಿಡಿಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಆನ್‌ಲೈನ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳುವುದಕ್ಕಾಗಿ ‘ಬ್ಲಾಕ್‌ಚೈನ್‌ ತಂತ್ರಜ್ಞಾನ’ ಎಂಬ ವಿಧಾನಕ್ಕೆ ಚಾಲನೆ ನೀಡಲಾಯಿತು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವೆಬ್‌ಸೈಟ್‌ನಲ್ಲಿ ಭೇಟಿ ನೀಡಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪ್ರಸ್ತುತ ಡಿಜಿಲಾಕರ್‌ನಲ್ಲಿ 2003ನೇ ಸಾಲಿನಿಂದಲೇ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಡೌನ್‌ಲೋಡ್‌ಗೆ ಅವಕಾಶ ನೀಡಿದೆ. ಹೊಸದಾಗಿ ಮತ್ತಷ್ಟುಪಾರದರ್ಶಕ, ಸುರಕ್ಷತಾ ಮತ್ತು ಭದ್ರತೆ ದೃಷ್ಟಿಯಿಂದ ಬ್ಲಾಕ್‌ಚೈನ್‌ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ ಎಂದು ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದರು.

ಕಾರ್ಯಕ್ರಮದಲ್ಲಿ 20 ಪ್ರಾಥಮಿಕ ಶಾಲಾ ಶಿಕ್ಷಕರು, 10 ಪ್ರೌಢಶಾಲಾ ಶಿಕ್ಷಕರು, 10 ಮಂದಿ ಪಿಯು ಕಾಲೇಜು ಉಪನ್ಯಾಸಕರು, ಪ್ರಾಂಶುಪಾಲರು ಮತ್ತು ರಾಷ್ಟ್ರಪ್ರಶಸ್ತಿ ಪಡೆದ ರಾಜ್ಯದ ಮೂವರು ಶಿಕ್ಷಕರನ್ನು ಗೌರವಿಸಲಾಯಿತು.
ರಾಜ್ಯ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರ ಪೊ. ಎಂ.ಆರ್‌. ದೊರೆಸ್ವಾಮಿ, ಶಾಸಕರಾದ ವೈ.ಎಸ್‌. ನಾರಾಯಣಸ್ವಾಮಿ, ಅರುಣ್‌ ಶಹಾಪುರ, ಅ. ದೇವೇಗೌಡ, ಹನುಮಂತ ನಿರಾಣಿ, ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌, ಆಯುಕ್ತ ಡಾ.ಕೆ.ಜೆ. ಜಗದೀಶ್‌ ಭಾಗವಹಿಸಿದ್ದರು.
 

Follow Us:
Download App:
  • android
  • ios