Asianet Suvarna News Asianet Suvarna News

ಈ ಊರು ತುಂಬಾ ಐಐಟಿ ವಿದ್ಯಾರ್ಥಿಗಳೇ! ಹೇಗೆ ಅಂತೀರಾ?

ಯಾರಿಗಾದರೂ ಐಐಟಿಯಲ್ಲಿ ಓದಿ ಒಳ್ಳೆಯ ವೃತ್ತಿಯನ್ನು ಸಂಪಾದಿಸುವುದು ಗುರಿಯಾಗಿರುತ್ತದೆ. ಬಿಹಾರದ ಈ ಹಳ್ಳಿಯೊಂದರಲ್ಲಿ ಬಹುತೇಕ ವಿದ್ಯಾರ್ಥಿಗಳು ಐಐಟಿ ಓದಲು ಉತ್ಸುಕರಾಗಿದ್ದಾರೆ ಮತ್ತು ಐಐಟಿ ಸೇರಲು ಯಶಸ್ವಿಯೂ ಆಗಿದ್ದಾರೆ. ಈ ಹಳ್ಳಿಯ ವಿದ್ಯಾರ್ಥಿಗಳ ಯಶಸ್ಸಿನ ಕತೆ ಇಲ್ಲಿದೆ ಓದಿ...
 

Patwatoli Village of Bihar is full of aspirations of IIT aspirations
Author
Bengaluru, First Published Oct 31, 2020, 1:57 PM IST

ಐಐಟಿಯಲ್ಲಿ ಓದಬೇಕು ಅನ್ನೋದು ಬಹುತೇಕ ವಿದ್ಯಾರ್ಥಿಗಳ ಕನಸ್ಸು. ದೇಶದ ಅತ್ಯುನ್ನತ ತಾಂತ್ರಿಕ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಸಾಕಷ್ಟು ಇಂಜಿನಿಯರ್ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಾರೆ. ಐಐಟಿಯಲ್ಲಿ ವ್ಯಾಸಂಗ ಮಾಡಿದ್ರೆ, ಪ್ರತಿಷ್ಠಿತ  ಕಂಪನಿಗಳಲ್ಲಿ ಉದ್ಯೋಗ ಸಿಗುತ್ತದೆ. ಅಷ್ಟೇ ಅಲ್ಲ ಐಐಟಿ ಅನ್ನೋದೇ ಒಂದು ಮಾನ್ಯತೆ, ಪ್ರತಿಷ್ಠೆಯ ಸಂಕೇತ ಕೂಡ.  ಇಂಥ ಪ್ರತಿಷ್ಠಿತ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಅವಕಾಶ ಎಲ್ಲರಿಗೂ ಸಿಗಲ್ಲ. ಆದ್ರೆ ಇಲ್ಲೊಂದು ಸಣ್ಣ ಹಳ್ಳಿಯಲ್ಲಿ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೇ ಐಐಟಿಯಲ್ಲಿ ಪ್ರವೇಶ ಪಡೆದಿದ್ದಾರೆ. ಜೆಇಇ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿ ಐಐಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

New Normal: ಆನ್‌ಲೈನ್ ಕ್ಲಾಸ್‌ಗಾಗಿ ಬೆಟ್ಟ ಹತ್ತಬೇಕು

ಬಿಹಾರದ ಗಯಾ ಜಿಲ್ಲೆಯ  ಪಟ್ವಾಟೋಲಿ ಎಂಬ ಈ ಹಳ್ಳಿಯಲ್ಲಿ ಇರುವ ಜನರು ಶ್ರೀಮಂತರೇನಲ್ಲ. ಇಲ್ಲಿನ ಜನರ ಮುಖ್ಯ ಆದಾಯದ ಮೂಲವೆಂದರೆ ಬೆಡ್‌ಶೀಟ್‌ ಅಥವಾ ಸಾಂಪ್ರದಾಯಿಕ ಭಾರತೀಯ ಟವೆಲ್, ಗಾಮ್ಚಾ ತಯಾರಿಸುವುದು. ಹಳ್ಳಿಯ ಬಹುತೇಕ ಕುಟುಂಬಗಳ ವೃತ್ತಿ ನೇಯ್ಗೆ. ಹೀಗಾಗಿ ಇಲ್ಲಿನ ಬಹುತೇಕ ವಿದ್ಯಾರ್ಥಿಗಳ ಪೋಷಕರು, ದಿನಗೂಲಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಆದ್ರೆ ಅವರ ಮಕ್ಕಳು ಇಂಜಿನಿಯರ್ ಆಗಬೇಕೆಂದು ಕಷ್ಟಪಟ್ಟು ಓದಿ, ದೇಶದ ಪ್ರತಿಷ್ಠಿತ ಸಂಸ್ಥೆಯಾದ ಐಐಟಿಯಲ್ಲಿ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಈ ಊರಿನ ಪ್ರತಿ ಕುಟುಂಬದಲ್ಲೊಬ್ಬ ಐಐಟಿ ವಿದ್ಯಾರ್ಥಿ ಇರುತ್ತಾನೆ. ಇಲ್ಲಿನ ಕುಟುಂಬಗಳು ಹೆಚ್ಚು ಹಣ ಸಂಪಾದನೆ ಮಾಡುವುದಿಲ್ಲವಾದರೂ, ಸೀಮಿತ ಖರ್ಚನ್ನು ಮಾಡುತ್ತವೆ. ಅಲ್ಪ ಸ್ವಲ್ಪ ಹಣವನ್ನು ಉಳಿಸಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ‌ ಮಾಡಿಸುತ್ತವೆ. ಹಲವು ಕುಟುಂಬಗಳು ಸಾಲ ಪಡೆದೋ ಅಥವಾ ಉಳಿತಾಯ ಮಾಡಿ, ತಮ್ಮ ಮಕ್ಕಳು ಜೆಇಇ ಪರೀಕ್ಷೆ ಎದುರಿಸಲು ಕೋಚಿಂಗ್ ಕ್ಲಾಸ್ ಗೆ ಕಳುಹಿಸುತ್ತಾರೆ. 

Patwatoli Village of Bihar is full of aspirations of IIT aspirations

ಐಐಟಿ ಪದವೀಧರರು ವಾರ್ಷಿಕ ಸುಮಾರು 15 ಲಕ್ಷ ರೂ.ಗಳಷ್ಟು ಸಂಬಳವನ್ನು ಪಡೆಯುತ್ತಾರೆ. ಇದು ಭಾರತದ ತಲಾ ಆದಾಯದ ಹನ್ನೆರಡು ಪಟ್ಟು ಹೆಚ್ಚು. ಪಟ್ವಾಟೋಲಿಯ ಹಲವಾರು ಎಂಜಿನಿಯರ್‌ಗಳು ಅಮೆರಿಕಾ, ಇಂಗ್ಲೆಂಡ್ ಮತ್ತು ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ.

ಅಂದಹಾಗೇ  2000ರ ದಶಕದ ಆರಂಭದಲ್ಲಿ ಪಟ್ವಾಟೋಲಿಗೆ ಐಐಟಿ ಅಪ್ಪಳಿಸಿತು. ಅಲ್ಲಿಯವರೆಗೆ ಈ ಊರಲ್ಲಿ ಸರಿಯಾದ ಶಾಲೆಗಳು ಇರಲಿಲ್ಲ, ಹತ್ತಿರದಲ್ಲಿ ಉತ್ತಮ ಕಾಲೇಜು ಇರಲಿಲ್ಲ. ಯಾವುದೇ ಉದ್ಯೋಗಾವಕಾಶಗಳು ಇರಲಿಲ್ಲ. ಹೆಣ್ಣು ‌ಮಕ್ಕಳು ಹೆಚ್ಚಾಗಿ ಸಾಕ್ಷರತೆ ಹೊಂದಿರಲಿಲ್ಲ.  10 ನೇ ತರಗತಿಯ ನಂತರ ಹುಡುಗರು ಓದುತ್ತಿದ್ದದ್ದು ತೀರಾ ಕಡಿಮೆ. ದೇಶಾದ್ಯಂತ ಜೆಇಇ ಕೋಚಿಂಗ್ ಕೇಂದ್ರಗಳು ಇದ್ದರೂ, ಪಟ್ವಟೋಲಿ‌ ಮಾತ್ರ ಐಐಟಿ ಬಗ್ಗೆ ಕೇಳಿರಲಿಲ್ಲ ಅಂತಾರೆ ಐಐಟಿ ಪದವೀಧರರಾದ ದೇವ್ ನಾರಾಯಣ್. 

ಈ ಹಳ್ಳಿಯ ಎಂಜಿನಿಯರಿಂಗ್ ಯಶಸ್ಸಿನ  ಪ್ರವೃತ್ತಿಯನ್ನು ಪ್ರಾರಂಭಿಸಿದ ಮೊದಲ ವ್ಯಕ್ತಿ ಅಂದ್ರೆ ಅದರ ಮೊದಲ ಐಐಟಿ ಪದವೀಧರ, ಜೀತೇಂದರ್ ಪ್ರಸಾದ್ ಅವರು. ಪಟ್ವಾಟೋಲಿಯಲ್ಲಿ ಅವರ ಹೆಸರು ಎಂದೆಂದಿಗೂ ಅಜರಾಮರ.

ಕೋವಿಡ್-19 ಮುಂಚೆಯೇ ಆನ್‌ಲೈನ್ ಶಿಕ್ಷಣಕ್ಕೆ ಹೋರಾಡಿದ್ದ ವಿದ್ಯಾರ್ಥಿನಿ!

ಜೀತೇಂದರ್ ಪ್ರಸಾದ್ ಅವರು ಜೆಇಇ ಪರೀಕ್ಷೆ ಬರೆಯಲು ಪ್ರೇರಣೆ ಏನು ಅನ್ನೋದು ನಮಗೆ ತಿಳಿದಿಲ್ಲ. 1990ರ ದಶಕದ ಆರಂಭದಲ್ಲಿ ಅವರು ಐಐಟಿ ಪ್ರವೇಶಿಸಿದ್ದರು. ಸದ್ಯ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.  ಅವರ ಯಶಸ್ಸೇ ಒಂದು ಚಳುವಳಿಯಂತಿದೆ. 1999ರಲ್ಲಿ 16 ವಿದ್ಯಾರ್ಥಿಗಳ ಪೈಕಿ 7 ಮಂದಿ‌ ಮಾತ್ರ ಐಐಟಿ ಪ್ರವೇಶ ಪಡೆದಿದ್ದರು ಎಂದು ಹೇಳುತ್ತಾರೆ 2014 ರ ಜೆಇಇಯಲ್ಲಿ ಹೆಚ್ಚು ಅಂಕ ಗಳಿಸಿದವರಲ್ಲಿ ಒಬ್ಬರಾದ ಸುಶೀಶ್ ಕುಮಾರ್. 

2000ರಲ್ಲಿ ವಿದ್ಯಾರ್ಥಿಗಳು ಬೇಸಿಗೆಯಲ್ಲಿ ಮನೆಗೆ ಮರಳಿದಾಗ, ಜೀತೇಂದರ್ ಪ್ರಸಾದ್ ಅವರು ಜಿಲ್ಲೆಯ ಪ್ರತಿ ಶಾಲೆಗೆ ಭೇಟಿ ನೀಡಿ ಪ್ರತಿಭಾ ಶೋಧ ಪರೀಕ್ಷೆಯನ್ನು ಘೋಷಿಸಿದರು. ಇದು ಗಣಿತ ಮತ್ತು ವಿಜ್ಞಾನದ ಮೇಲೆ ಮಕ್ಕಳಿಗೆ ಆಸಕ್ತಿ ಬೆಳೆಯಲು ಸಹಕಾರಿಯಾಗಿತ್ತು. ಜೊತೆಗೆ ಯುವಜನರಿಗೆ ಜೆಇಇಗೆ ಸಮಾಲೋಚನೆ ಮತ್ತು ಮಾರ್ಗದರ್ಶನದ ಮೂಲಕ ತರಬೇತಿ ಪಡೆಯಲು ಆಯ್ಕೆಯಾಯಿತು. ಇಲ್ಲದಿದ್ದರೆ ಇಂಟರ್ನೆಟ್ ಪ್ರವೇಶವಿಲ್ಲದ ಹಳ್ಳಿಯಲ್ಲಿ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ ವಿಜಯ ಸಾಧಿಸಿದ ವಿದ್ಯಾರ್ಥಿಗಳ ಪೋಷಕರನ್ನು ವೇದಿಕೆ ಮೇಲೆ ಕರೆಯುತ್ತಿದ್ದದ್ದು ಕೂಡ ಅವರು ತಮ್ಮ ‌ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪ್ರೇರೆಸಿತ್ತು.

ನವ್ ಪ್ರಯಸ್ ಎಂಬ ವಿದ್ಯಾರ್ಥಿ ಸಂಘಟನೆಯು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಗ್ರಾಮದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ. ಪ್ರತಿ ವರ್ಷ ಬೇಸಿಗೆ ರಜೆ ಸಮಯದಲ್ಲಿ, ಪದವಿ ಪೂರ್ವ ಐಐಟಿ ವಿದ್ಯಾರ್ಥಿಗಳು,  ಗಣಿತ ಮತ್ತು ವಿಜ್ಞಾನದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸ್ವಯಂಸೇವಕರಾಗಿ ಶ್ರಮಿಸುತ್ತಾರೆ. ಬಹುಶಃ ಪಟ್ವಾಟೋಲಿಯ ಐಐಟಿ ಇಂಜಿನಿಯರಿಂಗ್ ಯಶಸ್ಸಿನ ಗುಟ್ಟು ಇದೇ ಇರಬಹುದು.

ಸ್ಫೂರ್ತಿಯ ಸೆಲೆ ಡಾಕ್ಟರ್ ಕಲೆಕ್ಟರ್ ಡಾ.ರಾಜೇಂದ್ರ ಭಾರೂಡ್

Follow Us:
Download App:
  • android
  • ios