ಕೃಷಿ ಪದವಿ ಶಿಕ್ಷಣಕ್ಕೆ ರೈತರ ಮಕ್ಕಳಿಗೆ ಶೇ. 50 ಮೀಸಲು: ಸಚಿವ ಬಿ.ಸಿ. ಪಾಟೀಲ
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕೃಷಿ ಕಾಲೇಜು ಉದ್ಘಾಟನೆ| ಈ ಹಿಂದೆ ರೈತ ಮಕ್ಕಳಿಗೆ ಶೇ. 40ರಷ್ಟು ಮೀಸಲಾತಿ ಇತ್ತು. ಈಗ ಅದನ್ನು ಶೇ.50ಕ್ಕೆ ಹೆಚ್ಚಳ| ಕೃಷಿ ಕಾಲೇಜಿಗೆ 46 ಕೋಟಿ ಅನುದಾನ ನೀಡಿದ ಸರ್ಕಾರ|
ಗಂಗಾವತಿ(ಮಾ.07): ರೈತರ ಮಕ್ಕಳ ಕೃಷಿ ಪದವಿ ಶಿಕ್ಷಣಕ್ಕೆ ಶೇ. 50ರಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ಶನಿವಾರ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೂತನ ಕೃಷಿ ಕಾಲೇಜು ಉದ್ಘಾಟಿಸಿ ಮಾತನಾಡಿ, ಈ ಹಿಂದೆ ರೈತ ಮಕ್ಕಳಿಗೆ ಶೇ. 40ರಷ್ಟು ಮೀಸಲಾತಿ ಇತ್ತು. ಈಗ ಅದನ್ನು ಶೇ.50ಕ್ಕೆ ಹೆಚ್ಚಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿಗೊಂದು ಮಣ್ಣು ಪರೀಕ್ಷಾ ಕೇಂದ್ರ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕೃಷಿ ಸಂಜೀವಿನಿ ವಾಹನವನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ 20 ರೈತ ಸಂಪರ್ಕ ಕೇಂದ್ರಗಳಲ್ಲಿ ಈ ವಾಹನ ಕೆಲಸ ಮಾಡುತ್ತಿದ್ದು, 4.25 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದೆ ಎಂದರು. ಆರೋಗ್ಯ ಇಲಾಖೆಯಲ್ಲಿ 108 ವಾಹನ ರೀತಿಯಲ್ಲಿ ಕೃಷಿ ಸಂಜಿವೀನಿ ವಾಹನ ಕಾರ್ಯ ನಿರ್ವಹಿಸುತ್ತದೆ ಎಂದರು.
ರೈತರ ಹೊಲಗದ್ದೆಗಳಿಗೆ ತೆರಳುವ ಈ ವಾಹನ ಮಣ್ಣು ಪರೀಕ್ಷೆ ಮತ್ತು ಬೆಳೆಗಳಿಗೆ ತಗುಲುವ ರೋಗಗಳನ್ನು ಸ್ಥಳದಲ್ಲೆ ಪತ್ತೆ ಹಚ್ಚಿ ವಿಜ್ಞಾನಿಗಳು ಪರಿಹಾರ ನೀಡುತ್ತಿದ್ದಾರೆ. ಅಲ್ಲದೇ ರೈತರಿಗೆ ಸ್ವಾಭಿಮಾನ ರೈತ ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ. ರಾಜ್ಯದ 68 ಲಕ್ಷ ರೈತರಿಗೆ ಈ ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ ಎಂದರು.
ಸಂಸದ ಕರಡಿ ಸಂಗಣ್ಣ ಮಾತನಾಡಿ, ರೈತರು ದೇಶದ ಬೆನ್ನೆಲುಬು ಆಗಿದ್ದಾರೆ. ರೈತರು ಬದುಕು ಕಟ್ಟುವುದು ಕಷ್ಟಕರವಾಗಿದೆ ಎಂದು ತಿಳಿಸಿದ ಅವರು, ರೈತರು ಸಾಲ ಮಾಡಿ ಕೃಷಿಗೆ ಒತ್ತು ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಮುಂದಾಗಬಾರದೆಂದು ಮನವಿ ಮಾಡಿದರು.
ದಿಲ್ಲಿಗೆ ಸ್ವಂತ ಶಿಕ್ಷಣ ಮಂಡಳಿ: ಮೋದಿಗೆ ಕೇಜ್ರಿ ಸಡ್ಡು?
ಗಂಗಾವತಿಯಲ್ಲಿ ಪ್ರಾರಂಭಿವಾಗಿರುವ ಕೃಷಿ ಕಾಲೇಜಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದಲ್ಲದೇ ಮಹಿಳೆಯರಿಗೆ ವಸತಿನಿಲಯ ಪ್ರಾರಂಭಿಸಲಾಗುತ್ತದೆ ಎಂದರು. ನವಲಿ ಬಳಿ ಜಲಾಶಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿಸಿದ್ದು, ಈಗಾಗಲೇ ಡಿಪಿಆರ್ ಕಾರ್ಯಾರಂಭವಾಗಿದೆ ಎಂದರು.
ಕೃಷಿ ವಿಜ್ಞಾನ ಮಹಾವಿದ್ಯಾಲಯದ ಕುಲಪತಿ ಕೆ.ಎನ್. ಕಟ್ಟಿಮನಿ ಅವರು, ಕೃಷಿ ಕಾಲೇಜಿಗೆ ಸರ್ಕಾರ 46 ಕೋಟಿ ಅನುದಾನ ನೀಡಿದೆ. ಇದಕ್ಕೆ ಸಂಸದರು, ಶಾಸಕರು ಕಾರಣರಾಗಿದ್ದಾರೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇದ್ರದಲ್ಲಿ ಕಾಲೇಜು ಪ್ರಾರಂಭವಾಗಿದ್ದು, ಕಾಲೇಜಿನಲ್ಲಿ 30 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 20 ಸಹಾಯಕ ಉಪನ್ಯಾಸಕರು ಮತ್ತು 5 ಅಸೋಸಿಯೇಟ್ ಉಪನ್ಯಾಸಕರು ಬೇಕಾಗಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಪರಣ್ಣ ಮುನವಳ್ಳಿ ವಹಿಸಿದ್ದರು. ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಹನುಮನಗೌಡ ಬೆಳಗುರ್ಗಿ ಮಾತನಾಡಿದರು.