ಬೆಂಗಳೂರು(ಫೆ.04): ಸೇಂಟ್‌ ಜೋಸೆಫ್‌ ಕಾಲೇಜಿಗೆ ವಿಶ್ವವಿದ್ಯಾನಿಲಯ ಮಾನ್ಯತೆ ನೀಡುವ ವಿಧೇಯಕ ಮಂಡನೆಯಾಗಿ ಚರ್ಚೆ ನಡೆದರೂ ಅನುಮೋದನೆ ಪಡೆಯುವ ಹಂತದಲ್ಲಿ ರಾಜ್ಯ ಸರ್ಕಾರ ವಿಧೇಯಕ ಮಂಗಳವಾರ ತಡೆ ಹಿಡಿದದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು.

ಸೇಂಟ್‌ ಜೋಸೆಫ್‌ ಕಾಲೇಜಿಗೆ ವಿಶ್ವವಿದ್ಯಾನಿಲಯ ನೀಡುವ ಬಗ್ಗೆ ವಿಧೇಯಕ ಮಂಡನೆಯಾಗಿ ಚರ್ಚೆ ನಡೆಯಿತು. ಆದರೆ, ವಿಧೇಯಕ ಅನುಮೋದನೆ ಪಡೆಯಲಿಲ್ಲ. ಈ ವಿದ್ಯಾಲಯಕ್ಕೆ ಸರ್ಕಾರ 55 ಕೋಟಿ ರು. ಅನುದಾನ ಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಅನುಮತಿ ಪಡೆದು ವಿಧೇಯಕಕ್ಕೆ ಅನುಮೋದನೆ ಪಡೆಯಬೇಕಾಗುತ್ತದೆ. ಆದ್ದರಿಂದ ಗುರುವಾರ ವಿಧೇಯಕ ಅಂಗೀಕಾರ ನೀಡಲು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‌ ನಾರಾಯಣ್‌ ಮನವಿ ಮಾಡಿದರು.

ಆಗ ಕಾಂಗ್ರೆಸ್‌ ಸದಸ್ಯ ನಸೀರ್‌ ಅಹ್ಮದ್‌, ಇದು ಅಲ್ಪಸಂಖ್ಯಾತರಿಗೆ ಸೇರಿದ ಶಿಕ್ಷಣ ಸಂಸ್ಥೆ. ಆದ್ದರಿಂದ ನೀವು ತಾರತಮ್ಯ ಮಾಡುತ್ತಿದ್ದೀರಿ. ಈ ಬಗ್ಗೆ ಈಗಷ್ಟೇ ಆಡಳಿತ ಪಕ್ಷದ ಇತರೆ ಸದಸ್ಯರೊಂದಿಗೆ ಚರ್ಚೆ ಮಾಡಿದ್ದೀರಿ ಎಂದು ಆರೋಪಿಸಿದರು. ಪ್ರತಿಪಕ್ಷದ ಸದಸ್ಯರು ಸರ್ಕಾರದ ನಡೆಯನ್ನು ವಿರೋಧ ವ್ಯಕ್ತಪಡಿಸಿದರು.

'5-8ನೇ ಕ್ಲಾಸ್ ಶುರು : ಕೊರೋನಾ ಇಳಿದಿದ್ದು 1ನೇ ಕ್ಲಾಸ್‌ ಕೂಡ ಆರಂಭ '

ಆಗ ಮಧ್ಯ ಪ್ರವೇಶಿಸಿದ ಅಶ್ವಥ್‌ ನಾರಾಯಣ್‌, ಈ ತಾಂತ್ರಿಕ ವಿಷಯದ ಬಗ್ಗೆ ಈಗಷ್ಟೇ ಸಂಸದೀಯ ಸದಸ್ಯರು ನಮ್ಮ ಗಮನಕ್ಕೆ ತಂದರು. ಆದ್ದರಿಂದ ರಾಜ್ಯಪಾಲರ ಅನುಮತಿ ಪಡೆದು ಮಂಡಿಸುತ್ತೇನೆ. ಒಂದು ವೇಳೆ ಈ ವಿಧೇಯಕವನ್ನು ಪಾಸ್‌ ಮಾಡಿದರೂ ಕೂಡಾ ಅದು ರಾಜ್ಯಪಾಲರ ಅನುಮತಿಗೆ ಹೋಗಬೇಕಾಗುತ್ತದೆ. ನಾವು ಯಾವುದೇ ತಾರತಮ್ಯ ಮಾಡುತ್ತಿಲ್ಲ. ನಾವೇ ವಿಧಾನಸಭೆಯಲ್ಲಿ ಪಾಸು ಮಾಡಿ, ಇಲ್ಲಿ ಇಷ್ಟು ಚರ್ಚೆ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ, ಈ ಸದನದ ಕಲಾಪ ಮುಗಿಯುವುದರ ಒಳಗಾದರೂ ಸೇಂಟ್‌ ಜೋಸೆಫ್‌ ವಿಶ್ವವಿದ್ಯಾಲಯ ವಿಧೇಯಕಕ್ಕೆ ಅನುಮೋದನೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ತಿದ್ದುಪಡಿ:

ಬೆಂಗಳೂರು ಡಾ.ಬಿ.ಆರ್‌.ಅಂಬೇಡ್ಕರ್‌ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ 2021ಕ್ಕೆ ಸರ್ಕಾರ ತಿದ್ದುಪಡಿ ತಂದಿದೆ. ಇನ್ನು ಮುಂದೆ ಈ ವಿಶ್ವವಿದ್ಯಾಲಯ ಡಾ.ಬಿ.ಆರ್‌.ಅಂಬೇಡ್ಕರ್‌ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ಬೆಂಗಳೂರು ಎಂದು ಬಳಸುವಂತೆ ತಿದ್ದುಪಡಿ ಮಾಡಿದೆ.