ಬೆಂಗಳೂರು (ಫೆ.04):  ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗಿರುವುದರಿಂದ 5ರಿಂದ 8ನೇ ತರಗತಿಗಳನ್ನು ಫೆ.8ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಗಳಲ್ಲೇ ಆರಂಭಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ ಎಂದು ಶಿಕ್ಷಣ ಸುಧಾರಣೆಗಳ ಸಲಹೆಗಾರ ಎಂ.ಆರ್‌.ದೊರೆಸ್ವಾಮಿ ಹೇಳಿದರು.

ಫೆ.1ರಿಂದ 9 ಮತ್ತು ಪ್ರಥಮ ಪಿಯುಸಿ ತರಗತಿಗಳು ಆರಂಭವಾಗಿವೆ. 5-8ನೇ ತರಗತಿಗೆ ವಿದ್ಯಾಗಮ ಬೋಧನೆ ಶುರುವಾಗಿದೆ. ಇದುವರೆಗೂ ಪ್ರಾರಂಭಗೊಂಡಿರುವ ತರಗತಿಗಳಲ್ಲಿ ಯಾವುದೇ ಕೋವಿಡ್‌ ಸಮಸ್ಯೆಗಳು ಕಂಡುಬಂದಿಲ್ಲ. ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚಳವಾಗುತ್ತಿದೆ. ಇದೇ ತಿಂಗಳ ಎರಡನೇ ವಾರದಲ್ಲಿ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಸಚಿವ ಸುರೇಶ್‌ ಕುಮಾರ್‌ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ 5-8ನೇ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವಂತೆ ಸಲಹೆ ನೀಡಿರುವುದಾಗಿ ಅವರು ಹೇಳಿದರು.

ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಸಿಬ್ಬಂದಿ ಕೊರತೆ

ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಒಂದನೇ ತರಗತಿಯಿಂದಲೇ ಶಾಲೆಗಳು ಆರಂಭಗೊಂಡಿವೆ. ಇಂತಹ ಸನ್ನಿವೇಶದಲ್ಲಿ ನಾವು ನಮ್ಮ ಮಕ್ಕಳಿಗೆ ಕಲಿಕೆಗೆ ಅವಕಾಶ ಮಾಡಿ ಕೊಡದಿದ್ದರೆ ತಪ್ಪಾಗುತ್ತದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಮನವಿ ಮಾಡಿದ್ದೇನೆ. ನಮ್ಮ ಸಲಹೆಗೆ ಇಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಕಾಲೇಜುಗಳು ಪ್ರಾರಂಭವಾದ ನಂತರ ಆನ್‌ಲೈನ್‌ ತರಗತಿಗೆ ಸಂಪೂರ್ಣ ಬ್ರೇಕ್‌ ಬಿದ್ದಿದೆ. ಭೌತಿಕವಾಗಿ ಪದವಿ, ಪಿಯು, ಹಾಗೂ ಇಂಜಿನಿಯರಿಂಗ್‌ ಕ್ಲಾಸ್‌ಗಳು ನಡೆಯುತ್ತಿವೆ. ಕಳೆದ 8 ತಿಂಗಳಿನಿಂದ ಆನ್‌ಲೈನ್‌ ಪಾಠ ಕೇಳಲು ಮಕ್ಕಳಿಗೆ ಕಷ್ಟವಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೇ ಆನ್‌ಲೈನ್‌ ಪಾಠ ಅರ್ಥವಾಗುವುದು ಕಷ್ಟ. ಹೀಗಿರುವಾಗ ಪುಟ್ಟಮಕ್ಕಳಿಗೆ ಆನ್‌ಲೈನ್‌ನಲ್ಲಿ ಕಲಿಸುತ್ತೇವೆ ಎನ್ನುವುದೆಲ್ಲ ಭ್ರಮೆ. ಹೀಗಾಗಿ ಭೌತಿಕ ಶಾಲೆಯೇ ಉತ್ತಮ ಎಂದು ತಿಳಿಸಿದರು.

ಈಗಾಗಲೇ 9 ಹಾಗೂ 11ನೇ ತರಗತಿಗಳಿಗೆ ಬೋಧನೆ ಶುರುವಾಗಿದ್ದು, ಹಾಜರಾತಿ ಪ್ರಮಾಣ ಸಹ ಹೆಚ್ಚಾಗಿದೆ. ಪೋಷಕರು ವಿದ್ಯಾರ್ಥಿಗಳು ಬಹಳ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ನನ್ನನ್ನು ಭೇಟಿಯಾಗಿ ಈ ವಿಚಾರದ ಬಗ್ಗೆ ಚರ್ಚಿಸಿರುವ ಪೋಷಕರು ಸಹ 5, 6, 7, 8ನೇ ತರಗತಿ ಆರಂಭಿಸಬೇಕು ಎಂದೇ ಮನವಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.