ಕಾರಟಗಿ(ಫೆ.26):  ಮಹಾಮಾರಿ ಕೊರೋನಾದಿಂದ ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದ್ದನ್ನು ಗಮನಿಸಿ ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್‌ ಶಾಲೆ ಮಾತೃ ಶಿಕ್ಷಣ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ‘ಅರಿವು’ ಆ್ಯಪ್‌ ಬಿಡುಗಡೆ ಮಾಡಿದೆ.

ಜಿಲ್ಲೆಯಲ್ಲಿ ಇದೀಗ ಎಸ್‌ಎಸ್‌ಎಲ್‌ಸಿಯಲ್ಲಿ ಕಲಿಯುತ್ತಿರುವ ಬರೋಬರಿ 25 ಸಾವಿರ ಮಕ್ಕಳ ಹಿತದೃಷ್ಟಿ ಇಟ್ಟುಕೊಂಡು ಈ ಆ್ಯಪ್‌ನ್ನು ರಚಿಸಲಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅರಿವು ಆ್ಯಪ್‌ನ್ನು ‘ಎಂಗೇಜ್‌’, ‘ಎನ್‌ಕ್ವೈಯರಿ’, ‘ಎಂಪವರ್‌ ಯುವರ್‌ ಚೈಲ್ಡ್‌’ ಎನ್ನುವ ಮೂಲ ತತ್ವವನ್ನು ಹೊಂದಿದೆ.

ಕೊರೋನಾ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳನ್ನು ಬಂದ್‌ ಮಾಡಿ, ಆನ್‌ಲೈನ್‌ ತರಗತಿಗಳನ್ನು ಪ್ರಾರಂಭಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳಿಗೆ ಸಮರ್ಪಕ ರೀತಿಯಲ್ಲಿ ಬೋಧನೆ ನಡೆದಿಲ್ಲ ಎಂಬ ಅನುಮಾನ, ಆತಂಕದ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದವು. ಇವುಗಳ ನಡುವೆ ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕವನ್ನು ಸಹ ಪ್ರಕಟಿಸಿತ್ತು. ಮಕ್ಕಳು ಸುಲಭವಾಗಿ ಅವರಿಗೆ ಬೇಕಾದ ರೀತಿಯಲ್ಲಿ ಪಾಠಗಳನ್ನು ಅಲಿಸಿ ಮುಂದಿನ ಪರೀಕ್ಷೆಯಲ್ಲಿ ಅನುಕೂಲವಾಗುವಂತೆ ಸುಲಭ ಭಾಷೆಗಳಲ್ಲಿ ಎಲ್ಲ ವಿಷಯಗಳ ಪಠ್ಯಗಳನ್ನು ಇಲ್ಲಿ ಅಳವಡಿಸಲಾಗಿದೆ.

ಕೊರೊನಾ ಕೇಸ್‌ಗಳು ಹೆಚ್ಚುತ್ತಿದ್ದರೂ ಕಾಲೇಜು ನಿರ್ಲಕ್ಷ್ಯ, ವಿದ್ಯಾರ್ಥಿಗಳ ಆಕ್ರೋಶ

ವಿದ್ಯಾನಿಕೇತನ ಪಬ್ಲಿಕ್‌ ಶಾಲೆ ಚೇರಮನ್‌ ನೆಕ್ಕಂಟಿ ಸೂರಿಬಾಬು ಅವರು ಲಕ್ಷಾಂತರ ರು. ವೆಚ್ಚ ಮಾಡಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 10ನೇ ತರಗತಿ ಮಕ್ಕಳ ಅನುಕೂಲಕ್ಕಾಗಿ ಮತ್ತು ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಪಟ್ಟಿಯಲ್ಲಿ ಜಿಲ್ಲೆ ಉತ್ತಮ ಸ್ಥಾನದಲ್ಲಿ ಬರಲಿ ಎನ್ನುವ ದೂರದೃಷ್ಟಿಯಿಂದ ಈ ಆ್ಯಪ್‌ ರಚಿಸಿದ್ದಾರೆ. ಮುಂಬೈ ಮೂಲದ ಟೊನಿಕಾ ಲ್ಯಾಬ್‌ದಿಂದ ಈ ಆ್ಯಪ್‌ ರಚಿಸಲಾಗಿದೆ.

ನಾಡಿನ ವಿವಿಧ ಭಾಗಗಳ ಸರ್ಕಾರಿ ಶಾಲೆಯಲ್ಲಿನ ವಿಷಯ ತಜ್ಞರು, ಭಾಷಾ ಪರಿಣಿತರು ಮುಖ್ಯವಾಗಿ ಲಾಕ್‌ಡೌನ್‌ ವೇಳೆ ದೂರದರ್ಶನದಲ್ಲಿ ಪಾಠ ಮಾಡಿದ ಪರಿಣಿತ ಶಿಕ್ಷಕರನ್ನು ಸಂಪರ್ಕಿಸಿ ಸಲಹೆ-ಸೂಚನೆಗಳನ್ನು ಪಡೆದು ಅವರು ಮಾಡಿದಂತ ವಿಡಿಯೋ ಪಾಠಗಳನ್ನು ಸಹ ಆ್ಯಪ್‌ನಲ್ಲಿ ಸೇರಿಸಲಾಗಿದೆ ಎನ್ನುತ್ತಾರೆ ಸೂರಿಬಾಬು.

ಅಭಿನವ ಗವಿಶ್ರೀಗಳಿಂದ ಬಿಡುಗಡೆ

ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಹೊರತಂದಿರುವ ‘ಅರಿವು’ ಆ್ಯಪ್‌ನ್ನು ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀ ಫೆ. 23ರಂದು ಬಿಡುಗಡೆ ಮಾಡಿ ಲೋಕಾರ್ಪಣೆ ಮಾಡಿದರು.

ಆ್ಯಪ್‌ನಲ್ಲಿ ಏನೇನು ಇದೆ:

‘ಅರಿವು’ನಲ್ಲಿ 10ನೇ ತರಗತಿ ಕನ್ನಡ ಮಾಧ್ಯಮದ ಎಲ್ಲ ಪಠ್ಯಗಳು, ವಿಶ್ಲೇಷಣೆ, ಪರೀಕ್ಷೆಗಳು ಮತ್ತು ಪರೀಕ್ಷೆಗೆ ಸಂಬಂಧ ಪಟ್ಟ ಉತ್ತರಗಳು ಸಹ ದೊರೆಯಲಿವೆ. ಪ್ಲೈ ಸ್ಟೋರ್‌ ನಲ್ಲಿ ‘ಅರಿವು’ ಆ್ಯಪ್‌ ಫೆ. 25ರಿಂದ ಡೌನ್‌ಲೋಡ್‌ಗೆ ಲಭ್ಯವಿದೆ. ಯಾವುದೇ ಶುಲ್ಕವಿಲ್ಲದೆ ಸರ್ವರೂ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ವಿಷಯವಾರು, ಘಟಕವಾರು ಪರಿಕಲ್ಪನಾ ನಕ್ಷೆ, ರಾಜ್ಯದ ವಿವಿಧ ಭಾಗದ ನುರಿತ ಶಿಕ್ಷಕರಿಂದ ಸಿದ್ಧಪಡಿಸಿದ ನೋಟ್ಸ್‌, ವಿವಿಧ ಭಾಗಗಳ ತಜ್ಞ, ವಿಷಯ ಅಧ್ಯಾಪಕರು ಸಿದ್ಧಪಡಿಸಿದ ವಿಡಿಯೋ ಪಾಠಗಳು, ವಿಡಿಯೋ ಲಿಂಕ್‌, ಸಂವೇದನಾ ಕಾರ್ಯಕ್ರಮಗಳಲ್ಲಿ ಬಳಿಸಿದ ವಿಡಿಯೋಗಳು, ಘಟಕವಾರು ಪ್ರಶೋತ್ತರಗಳು ಮತ್ತು ಘಟಕ ಪರೀಕ್ಷೆಗಳು ಮತ್ತು ಉತ್ತರಗಳು ಈ ಆ್ಯಪ್‌ನಲ್ಲಿ ಲಭ್ಯ.

‘ಸರ್ಕಾರಿ ಶಾಲಾ ಮಕ್ಕಳು ಇತರರಂತೆ ಉತ್ತಮ ವಿದ್ಯಾಭ್ಯಾಸ ಕಲಿಯಬೇಕು. ಶಿಕ್ಷಣದಿಂದ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಉಚಿತವಾಗಿ ಅರಿವು ಆ್ಯಪ್‌ ಬಿಡುಗಡೆ ಮಾಡುತ್ತಿದ್ದೇವೆ. ಇದು ಸರ್ಕಾರಿ ಶಾಲೆಯ 10ನೇ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಒಬ್ಬ ವಿದ್ಯಾರ್ಥಿ ನಿರಂತರ ಕಲಿಕೆಗೆ ಅವಕಾಶವಿರುವ ಎಲ್ಲ ಕಲಿಕಾ ಸಂಪನ್ಮೂಲಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಿದ್ದು, ಕೊಪ್ಪಳ ಜಿಲ್ಲೆಯ ಮಕ್ಕಳ ಇದನ್ನು ಬಳಕೆ ಮಾಡಿ ಪ್ರಥಮ ಸ್ಥಾನ ಪಡೆದರೆ ಅದೇ ಸಾರ್ಥಕ ಎಂದು ಶ್ರೀರಾ​ಮ​ನ​ಗ​ರ ವಿದ್ಯಾನಿಕೇತನ ಸಂಸ್ಥೆ ಚೇರಮನ್‌ ಸೂರಿಬಾಬು ನೆಕ್ಕಂಟಿ ಹೇಳಿದ್ದಾರೆ.