ವಿಧಾನಪರಿಷತ್‌ (ಮಾ.16): ವೈದ್ಯಕೀಯ ಸೀಟುಗಳ ಬ್ಲಾಕಿಂಗ್‌ ದಂಧೆ ತಡೆಗಟ್ಟಲು ತಜ್ಞರ ಸಮಿತಿ ನೀಡಿರುವ ವರದಿಯನ್ನು ಪರಿಶೀಲಿಸುತ್ತಿದ್ದು, ಸೀಟು ನಿರಾಕರಿಸಿದ ವಿದ್ಯಾರ್ಥಿಗೆ 25 ಲಕ್ಷ ರು.ವರೆಗೆ ದಂಡ ವಿಧಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಒಳಗೊಂಡ ಹಲವು ಶಿಫಾರಸು ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಬಿಜೆಪಿ ಎನ್‌.ರವಿಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಲವಾರು ವರ್ಷಗಳಿಂದ ವೈದ್ಯಕೀಯ ಸೀಟುಗಳ ಬ್ಲಾಕಿಂಗ್‌ ದಂಧೆ ನಡೆಯುತ್ತಿದ್ದು, ಕಾನೂನಿನಲ್ಲಿ ಇರುವ ಲೋಪದೋಷ, ಸುಪ್ರೀಂಕೋರ್ಟ್‌ ಆದೇಶವನ್ನು ದುರುಪಯೋಗ ಮಾಡಿಕೊಂಡು ಈ ದಂಧೆ ಮಾಡಲಾಗುತ್ತಿದೆ.

ಇಂತಹ ಅಕ್ರಮ ತಡೆದು ಮೆರಿಟ್‌ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಿರಲು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ನಿಯಂತ್ರಣ ನಿಯಮ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಘಗಳೊಂದಿಗೆ ಸರ್ಕಾರ ಮಾಡಿಕೊಂಡ ಒಡಂಬಡಿಕೆ ಪರಿಶೀಲಿಸಿ, ಸದರಿ ಕಾಯ್ದೆ ಹಾಗೂ ನಿಯಮಗಳಿಗೆ ತಿದ್ದುಪಡಿ ತರಲು ರಾಜೀವಗಾಂಧಿ ಆರೋಗ್ಯ ವಿವಿ ಕುಲಪತಿ ಡಾ. ಸಚ್ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಈಗಾಗಲೇ ವರದಿ ನೀಡಿದ್ದು, ಸರ್ಕಾರ ಪರಿಶೀಲಿಸುತ್ತಿದೆ ಎಂದು ವಿವರಿಸಿದರು.

ಕಾಲೇಜುಗಳಿಗೆ ರಜೆ ಘೋಷಣೆ ಸುತ್ತೋಲೆ ಸುತ್ತಾಟ: ಸ್ಪಷ್ಟೀಕರಣ ಕೊಟ್ಟ ಡಿಸಿಎಂ

ಸೀಟು ಬ್ಲಾಕಿಂಗ್‌ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸುತ್ತಿದೆ. ಆದರೆ ಸೀಟು ಬ್ಲಾಕಿಂಗ್‌ ನಿಯಂತ್ರಿಸಲು ಕಾಯ್ದೆಯಲ್ಲಿ ತಿದ್ದುಪಡಿ ತರಲು ಸರ್ಕಾರದ ಹಂತದಲ್ಲಿ ಪರಿಶೀಲಿಸಲಾಗುತ್ತಿದೆ . ಬ್ಲಾಕಿಂಗ್‌ ದಂಧೆಯಲ್ಲಿ ವಿವಿ ಅಧಿಕಾರಿಗಳು ಭಾಗಿಯಾಗಿರುವ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಪೂರ್ವಾನುಮತಿ ಕೋರಿದೆ, ಸರ್ಕಾರ ಪ್ರಸ್ತಾವನೆ ಪರಿಶೀಲಿಸುತ್ತಿದೆ ಎಂದು ಉತ್ತರಿಸಿದರು.

ಇತ್ತೀಚೆಗೆ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿದ ಪ್ರಕರಣವನ್ನು ಆದಾಯ ತೆರಿಗೆ ತನಿಖೆ ನಡೆಸುತ್ತಿದೆ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಏನಾದರೂ ನಿಯಮ ಉಲ್ಲಂಘನೆ ಮಾಡಿದ್ದರೆ ಮಾತ್ರ ತಮ್ಮ ಇಲಾಖೆ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದರು.