ಕಾರವಾರ: 6 ವರ್ಷದಲ್ಲಿ 13 ಸರಕಾರಿ ಶಾಲೆ ಬಂದ್
ಕಾರವಾರ ತಾಲೂಕಿನಲ್ಲಿ ಕೇವಲ ಎರಡೇ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣವನ್ನ ಪ್ರಾರಂಭಿಸಲಾಗಿದೆ. ಶಿಕ್ಷಕರ ಕೊರತೆ ಹಾಗೂ ಇಂಗ್ಲಿಷ್ ಶಿಕ್ಷಕರ ಅಲಭ್ಯದಿಂದ ಇಂಗ್ಲಿಷ್ ಶಿಕ್ಷಣವನ್ನೂ ಕೊಡಲಾಗದೇ ಇರುವುದು ಸರ್ಕಾರಿ ಶಾಲೆಗಳು ಮುಚ್ಚಲು ಕಾರಣ ಅಂತಾರೆ ಸ್ಥಳೀಯರು.
ಕಾರವಾರ(ಜು.21): ಕರ್ನಾಟಕ- ಗೋವಾ ಗಡಿಯಲ್ಲಿ ಬರುವ ಕಾರವಾರ ತಾಲೂಕಿನಲ್ಲಿ ಕೊಂಕಣಿ, ಮರಾಠಿ ಭಾಷಿಗರು ಹೆಚ್ಚಿದ್ದ ಕಾರಣ ಕನ್ನಡ ಶಾಲೆಗಳಿಗೆ ಈ ಹಿಂದೆ ಸಾಕಷ್ಟು ಡಿಮ್ಯಾಂಡ್ ಇತ್ತು. ಗಡಿಭಾಗದಲ್ಲಿ ಸರ್ಕಾರದ ಶಾಲೆಗಳು ಜೊತೆ ಹಲವು ಅನುದಾನಿತ ಕನ್ನಡ ಶಾಲೆಗಳು ತಲೆ ಎತ್ತಿದ್ದವು. ಆದರೆ, ಕಳೆದ ಕೆಲವು ವರ್ಷದಿಂದ ಗಡಿ ಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು, ಹಲವು ಶಾಲೆಗಳು ಬಂದ್ ಆಗಿವೆ.
2017-18 ನೇ ಸಾಲಿನಲ್ಲಿ ಮೂರು ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದ್ದರೆ, 2019-20 ನೇ ಸಾಲಿನಲ್ಲಿ ಎರಡು, 2020-21 ನೇ ಸಾಲಿನಲ್ಲಿ ಒಂದು ಶಾಲೆ, 2021-22 ನೇ ಸಾಲಿನಲ್ಲಿ ಎರಡು ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಬಂದ್ ಆಗಿತ್ತು. 2022-23ನೇ ಸಾಲಿನಲ್ಲೂ ಎರಡು ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಶಾಲೆ ಬಂದ್ ಮಾಡಿದ್ದರೆ, ಸದ್ಯ ಪ್ರಸ್ತುತ ವರ್ಷ ತಾಲೂಕಿನ ಮೂರು ಶಾಲೆಗಳು ವಿದ್ಯಾರ್ಥಿಗಳೇ ಇಲ್ಲದೇ ಬಂದ್ ಆಗಿದೆ. ಇದರ ಜತೆ ಒಂದು ಅನುದಾನಿತ ಪ್ರೌಢ ಶಾಲೆ ಕೂಡಾ ಬಂದ್ ಆಗುವ ಹಂತಕ್ಕೆ ತಲುಪಿದೆ. ಅಲ್ಲದೇ, ಸುಮಾರು ಹತ್ತು ಶಾಲೆಗಳಲ್ಲಿ ಕೇವಲ ಎರಡೇ ವಿದ್ಯಾರ್ಥಿಗಳು ದಾಖಲಾಗಿದ್ದು, ಗಡಿಭಾಗದಲ್ಲಿ ಕನ್ನಡ ಶಾಲೆಗಳು ಅವನತಿಯತ್ತ ಸಾಗುತ್ತಿದೆ.
TRAVEL TIPS : ದುಮ್ಮಿಕ್ಕಿ ಹರಿಯುವ ಉಂಚಳ್ಳಿ ಜೋಗಕ್ಕೆ ಒಮ್ಮೆ ಭೇಟಿ ನೀಡಿ
ಕನ್ನಡ ಶಾಲೆಗಳಿಗೆ ಕೆಲವು ವರ್ಷಗಳಿಂದ ಸಾಕಷ್ಟು ಡಿಮ್ಯಾಂಡ್ ಇತ್ತು. ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗದಿಂದ ಬಂದ ಜನರು ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದರು. ಆದರೆ, ಕೆಲ ವರ್ಷದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳು ಎಲ್ಲೆಂದರಲ್ಲಿ ತಲೆ ಎತ್ತಿದ್ದು, ಈ ಕಾರಣಕ್ಕೆ ವಿದ್ಯಾರ್ಥಿಗಳು ಕನ್ನಡ ಶಾಲೆಯತ್ತ ಮುಖ ಮಾಡುತ್ತಿಲ್ಲ ಎನ್ನಲಾಗಿದೆ. ಇನ್ನು ಸ್ಥಳೀಯರ ಪ್ರಕಾರ ಗಡಿ ಭಾಗದಲ್ಲಿ ಅಭಿವೃದ್ದಿಗೆ ಸರ್ಕಾರ ವಿಶೇಷ ಒತ್ತನ್ನು ನೀಡುತ್ತಿಲ್ಲ.
ಗಡಿ ಭಾಗದ ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳಿಗೆ ಉದ್ಯೋಗ ಪಡೆಯುವಾದ ವಿಶೇಷ ಮೀಸಲಾತಿ ಕಲ್ಪಿಸುವುದರ ಜೊತೆಗೆ ಸವಲತ್ತನ್ನು ಹೆಚ್ಚಿಸಬೇಕು. ಅಲ್ಲದೇ, ಗಡಿ ಭಾಗದ ಶಾಲೆಗಳಿಗೆ ಹೆಚ್ಚಿನ ಶಿಕ್ಷಕರನ್ನ ನಿಯೋಜನೆ ಮಾಡಬೇಕು.
ಕಾರವಾರ ತಾಲೂಕಿನಲ್ಲಿ ಕೇವಲ ಎರಡೇ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣವನ್ನ ಪ್ರಾರಂಭಿಸಲಾಗಿದೆ. ಶಿಕ್ಷಕರ ಕೊರತೆ ಹಾಗೂ ಇಂಗ್ಲಿಷ್ ಶಿಕ್ಷಕರ ಅಲಭ್ಯದಿಂದ ಇಂಗ್ಲಿಷ್ ಶಿಕ್ಷಣವನ್ನೂ ಕೊಡಲಾಗದೇ ಇರುವುದು ಸರ್ಕಾರಿ ಶಾಲೆಗಳು ಮುಚ್ಚಲು ಕಾರಣ ಅಂತಾರೆ ಸ್ಥಳೀಯರು.