ಕೊರೋನಾ ಹೊಡೆತಕ್ಕೆ ಖಾಸಗಿ ಶಾಲಾ ಶಿಕ್ಷಕರು ತೊಂದರೆಗೆ ಸಿಲುಕಿದ್ದ ಅವರ ನೆರವಿಗೆ ನಿಲ್ಲಲು ಇದೀಗ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಧಾರವಾಡ (ಸೆ.11): ಕೊರೋನಾ ಹೊಡೆತಕ್ಕೆ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರು ಆರ್ಥಿಕವಾಗಿ ತೊಂದರೆಯಲ್ಲಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸೇರಿ ಆ ಶಿಕ್ಷಕರಿಗೂ ಆರ್ಥಿಕ ಸಹಕಾರ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಂದಾಜು 4 ಲಕ್ಷ ಖಾಸಗಿ ಶಾಲಾ ಶಿಕ್ಷಕರಿದ್ದು, ಪ್ರತಿಯೊಬ್ಬರಿಗೂ 10 ಸಾವಿರ ಪ್ಯಾಕೆಜ್ ರೂಪದಲ್ಲಿ ನೀಡಿದರೆ ಅಂದಾಜು 400 ಕೋಟಿ ರು. ಅಗತ್ಯವಿದೆ. ಆದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸುಧಾರಣೆ ಇಲ್ಲದ ಕಾರಣ ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಇಷ್ಟುವರ್ಷಗಳ ಕಾಲ ಈ ಶಿಕ್ಷಕರ ಸೇವೆ ಬಳಸಿಕೊಂಡ ಶಿಕ್ಷಣ ಸಂಸ್ಥೆಗಳು ಸಹ ಜವಾಬ್ದಾರರಾಗಿದ್ದು, ಅವರನ್ನು ಒಳಗೊಂಡು ಆರ್ಥಿಕ ಸಹಕಾರ ಮಾಡಬಹುದೇ? ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.
21ನೇ ಶತಮಾನಾದ ಶಾಲಾ ಶಿಕ್ಷಣ ಹೇಗಿರಬೇಕು? ಮೋದಿ ಮಾತು ..
ಶಾಲೆ ಆರಂಭಿಸುವ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದಿಂದ ಈ ಕುರಿತು ಹಸಿರು ನಿಶಾನೆ ಬಂದಾಗಲೇ ಶಾಲೆಗಳನ್ನು ಆರಂಭಿಸಲಾಗುವುದು. ಅದಕ್ಕೂ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಆರಂಭಿಸಬೇಕು ಎಂಬುದರ ಬಗ್ಗೆ ಚರ್ಚೆ ಹಾಗೂ ಸಲಹೆಗಳನ್ನು ಪಡೆಯಲಾಗುತ್ತಿದೆ ಎಂದರು. ಇನ್ನು, ಸೆ. 21ರಿಂದ 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಶಿಕ್ಷಕರ ಮಾರ್ಗದರ್ಶನ ಪಡೆಯಲು ಅವಕಾಶ ನೀಡಲಾಗುವುದು. ಈ ಕುರಿತು ಕೇಂದ್ರದಿಂದ ಮಾರ್ಗಸೂಚಿ ಬಂದಿದ್ದು, ರಾಜ್ಯದ ಮಾರ್ಗಸೂಚಿಯನ್ನು ತಯಾರು ಮಾಡಲಾಗುತ್ತಿದ್ದು, ಸೆ. 12ರಂದು ಪ್ರಕಟ ಮಾಡುತ್ತೇವೆ ಎಂದರು.
ಶಾಲೆಗಳು ಆರಂಭ ಆಗುವ ವರೆಗೂ ವಿದ್ಯಾಗಮ ಯೋಜನೆ ಚಾಲ್ತಿಯಲ್ಲಿರುತ್ತದೆ. ಆದರೆ, ಈ ಯೋಜನೆಯಲ್ಲಿ ಅನೇಕ ಸುಧಾರಣೆಗಳನ್ನು ತರಲಾಗುತ್ತಿದ್ದು, ಈ ಮೂಲಕ ಮಕ್ಕಳ ಕಲಿಕೆಯನ್ನು ನಿರಂತರತೆ ಕಾಪಾಡಿಕೊಳ್ಳುವುದೇ ನಮ್ಮ ಉದ್ದೇಶ. ಕಲಿಕೆಗೆ ತೊಂದರೆ ಹಾಗೂ ಮಕ್ಕಳು ಕಲಿಕೆಯಿಂದ ವಂಚಿತ ಆಗದಂತೆ ವಿದ್ಯಾಗಮ ಯೋಜನೆ ರೂಪಿಸಲಾಗಿದೆ. ಈಗಾಗಲೇ ಎಲ್ಲ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಿದ್ದು ಕಲಿಕೆಯಲ್ಲಿ ನಿರಂತರತೆ ಕಾಪಾಡಿಕೊಳ್ಳಲು ಈ ಯೋಜನೆ ಪೂರಕವಾಗಿದೆ. ಈ ಯೋಜನೆ ಜಾರಿಯಾಗದೇ ಇದ್ದರೆ, ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲದೇ, ಶಾಲೆಯಿಂದ ಹೊರಗುಳಿಯುವರ ಸಂಖ್ಯೆ ಜಾಸ್ತಿಯಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾಗಮಕ್ಕೆ ಪೋಷಕರು, ಮಕ್ಕಳು ತುಂಬ ಉತ್ತಮ ಸ್ಪಂದನೆ ನೀಡಿದ್ದಾರೆ ಎಂದರು.
ಪಕ್ಷಾತೀತವಾಗಿ ಡ್ರಗ್ ವಿರುದ್ಧ ಹೋರಾಟ
ಡ್ರಗ್ ಸೇವನೆ ಪ್ರಕರಣದಲ್ಲಿ ಬಿಜೆಪಿ ನಾಯಕರ ನಂಟಿದೆ ಎಂಬ ಕಾಂಗ್ರೆಸ್ ಮುಖಂಡರ ಆರೋಪ ವಿಚಾರವಾಗಿ ಧಾರವಾಡದಲ್ಲಿ ಶಿಕ್ಷಣ ಸಚಿವ ಸುರೇಶ ಕುಮಾರ ಪ್ರತಿಕ್ರಿಯೆ ನೀಡಿದ್ದು, ಡ್ರಗ್ ಸೇವಕರು ಯಾರ ಜತೆಗೆ ನಂಟು ಹೊಂದಿದ್ದಾರೆ ಅಥವಾ ಇಲ್ಲವೋ ಎನ್ನುವುದಕ್ಕಿಂತ ಅವರು ಯಾವ ಪಕ್ಷಕ್ಕೂ ಸೇರಿದವರಲ್ಲ. ಡ್ರಗ್ ಸೇವಕರ ಭಾವಚಿತ್ರಗಳನ್ನು ಟಿವಿಯಲ್ಲಿ ನೋಡುತ್ತಿದ್ದು ನಮಗೂ ಬೇಸರ ಮೂಡಿಸಿದೆ. ಯುವ ಜನಾಂಗಕ್ಕೆ ಡ್ರಗ್ ಸೇವನೆ ಪಿಡುಗು. ನಮ್ಮ ಯುವ ಜನಾಂಗ ಡ್ರಗ್ ಸೇವಿಸಿ ಹಾಳಾದರೆ ಶತ್ರು ರಾಷ್ಟ್ರಗಳಿಗೆ ಅನುಕೂಲ ಆಗಲಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ ಆಗಲಿ ಅಥವಾ ವಿಪಕ್ಷದವರು ಹಾಗೂ ನಾವು ಪಕ್ಷಾತೀತವಾಗಿ ಡ್ರಗ್ ವಿರುದ್ಧ ಹೋರಾಡಬೇಕು ಎಂದರು.
