ಬೆಂಗಳೂರು, (ಆ.11): ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿ, ಸಚಿವರಾದ ಸುರೇಶ್ ಕುಮಾರ್, ಶ್ರೀರಾಮುಲು ಮತ್ತು ಡಾ.ಕೆ. ಸುಧಾಕರ್‌ ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಭಿನಂದನೆಗಳನ್ನ ತಿಳಿಸಿದ್ದಾರೆ.

ಕೊರೋನಾ ಆತಂಕ ಮಧ್ಯೆಯೂ ರಾಜ್ಯದಲ್ಲಿ ಯಶಸ್ವಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದಿದ್ದರಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವಿಟ್ಟರ್‌ನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ಅಂತೂ ವಿರೋಧದ ನಡುವೆ ಯಶಸ್ವಿಯಾಗಿ SSLC ಪರೀಕ್ಷೆ ಮುಗಿಸಿದ ಸರ್ಕಾರ: ಸುರೇಶ್ ಕುಮಾರ್ ಸರ್ದಾರ

ಕೊರೋನಾ ಸವಾಲುಗಳ ನಡುವೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯಾಗಬಾರದು ಎಂದು ರಾಜ್ಯ ಸರ್ಕಾರ ಯಶಸ್ವಿಯಾಗಿ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಆತಂಕಗಳನ್ನು ಮೀರಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಪೋಷಕರ ಮತ್ತು ಶಿಕ್ಷಕ ವೃಂದದವರ ಪರಿಶ್ರಮಕ್ಕಾಗಿ ಮತ್ತು ರಾಜ್ಯ ಸರ್ಕಾರದ ಮೇಲಿನ ನಿಮ್ಮೆಲ್ಲರ ವಿಶ್ವಾಸಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಫಲಿತಾಂಶದಲ್ಲಿ ಹಿನ್ನಡೆ ಕಂಡ ಮಕ್ಕಳು ಧೈರ್ಯ ಕಳೆದುಕೊಳ್ಳದೆ, ಹೆಚ್ಚಿನ ಪ್ರಯತ್ನ, ಆತ್ಮವಿಶ್ವಾಸಗಳಿಂದ ಸಿದ್ದತೆ ನಡೆಸಿ, ಪೂರಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಸುರಕ್ಷಿತವಾಗಿ, ಯಶಸ್ವಿಯಾಗಿ ಮತ್ತು ಜನ ಮೆಚ್ಚುವಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲು ಕಾರಣರಾದ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್, ಆರೋಗ್ಯ ಸಚಿವ ಬಿ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಎಲ್ಲ ಸಚಿವರಿಗೆ, ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ, ಇಡೀ ಆಡಳಿತ ಯಂತ್ರಕ್ಕೆ ನನ್ನ ಅಭಿನಂದನೆಗಳು ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.