ಬೆಂಗಳೂರು(ಜು.28): ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುವವರೆಗೂ ಶಾಲೆ ಆರಂಭಿಸುವ ಬಗ್ಗೆ ಯಾವುದೇ ಚಿಂತನೆ ನಡೆಸುವುದಿಲ್ಲ. ಸದ್ಯದ ಮಟ್ಟಿಗೆ ಶಾಲೆ ಯಾವಾಗ ಆರಂಭವಾಗುತ್ತದೆ ಎಂಬ ಮಾಹಿತಿ ಸ್ವತಃ ನಮಗೆ ಇಲ್ಲ.

ಹೀಗಂತ ಸ್ಪಷ್ಟವಾಗಿ ಹೇಳಿದ್ದಾರೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌.

ಪಂಜಾಬ್‌ ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ಎಡ್ಮಿಷನ್, ರೀ ಎಡ್ಮಿಷನ್, ಟ್ಯೂಶನ್ ಫೀಸ್ ಇಲ್ಲ

ಶಾಲೆ ಆರಂಭ ಕುರಿತು ಹಲವು ವ್ಯಾಖ್ಯಾನ ಕೇಳಿ ಬರುತ್ತಿರುವ ಬೆನ್ನಲ್ಲೇ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಯಾವಾಗಿನಿಂದ ಶಾಲೆ ಆರಂಭಿಸಬೇಕು ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಚರ್ಚೆಯಾಗಲಿ, ಚಿಂತನೆಯಾಗಲಿ ನಡೆದಿಲ್ಲ. ಈ ಬಗ್ಗೆ ವದಂತಿಗಳು ಮಾತ್ರ ಹಬ್ಬಿವೆ. ವಾಸ್ತವವಾಗಿ ಶಾಲೆ ಯಾವಾಗ ಆರಂಭವಾಗಬಹುದು ಎಂಬುದು ನಮಗೂ ಗೊತ್ತಿಲ್ಲ ಎಂದರು.

ಮೊದಲು ಕರೋನಾ ನಿಯಂತ್ರಣಕ್ಕೆ ಬರಬೇಕು. ಅನಂತರವೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ನಾವು ಚರ್ಚಿಸಲು ಸಾಧ್ಯ. ಅಲ್ಲದೆ, ದೇಶಾದ್ಯಂತ ಕೊರೋನಾ ನಿಯಂತ್ರಣವಾಗುವುದರ ಮೇಲೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಮಾರ್ಗಸೂಚಿ ಪ್ರಕಟಿಸಲಿದೆ. ಆ ಆಧಾರದಲ್ಲಿ ರಾಜ್ಯದಲ್ಲಿಯೂ ಶಿಕ್ಷಣ ಇಲಾಖೆ ಅಧಿಕಾರಿಗಳು, ತಜ್ಞರು, ಶಿಕ್ಷಕರ ಸಂಘಟನೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಂತೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡಲಿದ್ದಾರೆ ಎಂದು ವಿವರಿಸಿದರು.

1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ..!

ಕರ್ನಾಟಕ ಪಠ್ಯಪುಸ್ತಕ ಸಂಘವು ಸದ್ಯ ಶೇ.30ರಷ್ಟುಪಠ್ಯ ಕಡಿತಗೊಳಿಸಿ 120 ದಿನಗಳಿಗೆ ಅನುಗುಣವಾಗಿ ಪಠ್ಯವಸ್ತು ನಿಗದಿ ಮಾಡಿದೆ. ಮಕ್ಕಳ ಕಲಿಕೆ ಸ್ಥಗಿತಗೊಳ್ಳಬಾರದು ಎಂಬ ಉದ್ದೇಶದಿಂದ ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಪೂರಕವಾಗಿ ಪಠ್ಯ ಕಡಿತಗೊಳಿಸಲಾಗಿದೆ. ಆದರೆ, ಶಾಲೆಗಳನ್ನು ಆರಂಭಿಸುವುದು ಮಾತ್ರ ಕೊರೋನಾ ನಿಯಂತ್ರಣಕ್ಕೆ ಬರುವುದರ ಮೇಲೆ ನಿರ್ಣಯವಾಗಲಿದೆ. ಸದ್ಯಕ್ಕೆ ಯಾವ ತಿಂಗಳಿನಿಂದ ಶಾಲೆಗಳನ್ನು ಆರಂಭಿಸುವ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಪುನರುಚ್ಚಿಸಿದರು.