ಬೆಂಗಳೂರು, (ಜುಲೈ .27) : ಬೆಂಗಳೂರು: ಎಂಜಿನಿಯರಿಂಗ್‌ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಉಳಿದ ವಿದ್ಯಾರ್ಥಿಗಳ ತೇರ್ಗಡೆ ಕುರಿತಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಆ. 1ರಿಂದ 14ರ ವರೆಗೆ ತರಗತಿಗಳು ನಡೆಯಲಿವೆ. ಆದರೆ ಇದು ಕಡ್ಡಾಯವಲ್ಲ. ಅಂತಿಮ ಸೆಮಿಸ್ಟರ್‌ನ ಯಾವ ವಿದ್ಯಾರ್ಥಿಯೂ ಭಾಗವಹಿಸಬಹುದು. 

ಆ. 17ರಿಂದ 21ರವರೆಗೆ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ವೈವಾ ಹಾಗೂ 24ರಿಂದ 30ರವರೆಗೆ ಪರೀಕ್ಷೆಯನ್ನು ಆಫ್ಲೈನ್‌ ನಲ್ಲೇ (ಸಾಂಪ್ರದಾಯಿಕ ಪದ್ಧತಿ) ನಡೆಸಲಾಗುವುದು. ಸೆ. 15ರಂದು ಫ‌ಲಿತಾಂಶ ಪ್ರಕಟಿಸಲಾಗುತ್ತದೆ. ಸೆ. 1ರಿಂದ 2020-21ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಲಿವೆ ಎಂದು ವಿಟಿಯು ತಿಳಿಸಿದೆ.

SSLC ರಿಸಲ್ಟ್‌ಗಾಗಿ ಕಾಯುತ್ತಿರೋ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್

ಅಂತಿಮ ಸೆಮಿಸ್ಟರ್‌ನ ಸ್ನಾತಕ ಮತ್ತು ಸ್ನಾತಕೋತ್ತರ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ವೈವಾ ಹಾಗೂ ಪರೀಕ್ಷೆ ಸಾಂಪ್ರದಾಯಿಕ ಪದ್ಧತಿಯಂತೆ ನಡೆಯಲಿದೆ. 

ಪ್ರಾಜೆಕ್ಟ್ ವರ್ಕ್‌ಗೆ ಸಂಬಂಧಿಸಿ ವೈವಾಗಳನ್ನು ಆನ್‌ಲೈನ್‌ ಮೂಲಕ ಕಾಲೇಜು ಹಂತದಲ್ಲಿ ನಡೆಸಲಾಗುವುದು. ಅಂತಿಮ ವರ್ಷದ ಬ್ಯಾಕ್‌ಲಾಗ್‌ ವಿದ್ಯಾರ್ಥಿಗಳಿಗೂ ಸಾಂಪ್ರದಾಯಿಕ ಪದ್ಧತಿಯಲ್ಲೇ ಪರೀಕ್ಷೆ ನಡೆಯಲಿದೆ. ಬರೆಯಲಾಗದವರಿಗೆ ಮುಂದಿನ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು ಎಂದು ವಿಟಿಯು ಹೇಳಿದೆ.

ಆದ್ರೆ, ಮತ್ತೊಂದೆಡೆ ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಯಲ್ಲಿ ವಿದ್ಯಾರ್ಥಿಗಳು ಕೊರೋನಾ ಆತಂಕದಲ್ಲಿದ್ದಾರೆ. ಇದರ ಮಧ್ಯೆ ಇಟಿಯು ಪರೀಕ್ಷೆ ದಿನಾಂಕ ಪ್ರಕಟಿಸಿರುವುದು ವಿದ್ಯಾರ್ಥಿಗಳನ್ನ ಮತ್ತಷ್ಟು ಚಿಂತೆಗೀಡುಮಾಡಿದೆ.