ಬೆಂಗಳೂರು, (ಮೇ. 25): ರಾಜ್ಯದಲ್ಲಿ ಸದ್ಯ ಕೋವಿಡ್-19 ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಇಂಥಹ ಪರಿಸ್ಥಿತಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸುವುದು ಸುರಕ್ಷಿತವಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಪತ್ರ ಬರೆದಿರುವ ಅವರು, ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಕೋವಿಡ್-19 ಸೋಂಕು ನಿಯಂತ್ರಣದಲ್ಲಿತ್ತು. ಮುಂಬೈನಿಂದ, ವಿದೇಶಗಳಿಂದ ಜನರು ವಾಪಾಸ್ಸು ಬಂದಿರಲಿಲ್ಲ. ಆಗ ಪರಿಸ್ಥಿತಿ ಹತೋಟಿಯಲ್ಲಿತ್ತು. ಹಾಗಾಗಿ ಸೂಕ್ತ ಪೂರ್ವಸಿದ್ದತೆಯೊಂದಿಗೆ ಪರೀಕ್ಷೆ ನಡೆಸಬಹುದು ಎಂದು ನಾವು ಸಲಹೆ ನೀಡಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಯಾವ ಕಾರಣಕ್ಕೂ ಪರೀಕ್ಷೆ ನಡೆಸುವುದು ಬೇಡ ಎಂದಿದ್ದಾರೆ.

ಕರ್ನಾಟಕ SSLC ಪರೀಕ್ಷೆ ವೇಳಾಪಟ್ಟಿ ಪ್ರಕಟ

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸದ್ಯ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಹೀಗಾಗಿ ಪರೀಕ್ಷೆ ತೀರ್ಮಾನವನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.

ಕೋವಿಡ್-19 ಕಾರಣದಿಂದ ಮುಂದೂಡಲಾಗಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಜೂನ್ 25ರಿಂದ ನಡೆಸಲು ಸರಕಾರ ನಿರ್ಧರಿಸಿದ್ದು, ಈಗಾಗಲೇ ಹೊಸ ವೇಳಾಪಟ್ಟಿಯನ್ನೂ ಸಹ ಪ್ರಕಟಿಸಿದೆ.