ಬೆಂಗಳೂರು, (ಜುಲೈ.21): ಇದೇ ತಿಂಗಳ ಜುಲೈ 30-31 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಆದ್ರೆ, ಪಿಜಿಸಿಇಟಿ ಹಾಗೂ ಡಿಪ್ಲೊಮಾ ಸಿಇಟಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ, ಡಿಸಿಎಂ ಅಶ್ವತ್ಥ್ ನಾರಾಯಣ ತಿಳಿಸಿದರು.

ಇಂದು (ಮಂಗಳವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಜುಲೈ 30-31 ರಂದು ಸಿಇಟಿ ಸಿಇಟಿ ಪರೀಕ್ಷೆ ನಡೆಯಲಿದ್ದು, 127 ಸ್ಥಳದ 497 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 1,94,356 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 83 ಕೇಂದ್ರಗಳಿವೆ. ಇಲ್ಲಿ 40,200 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಬದಲಾಯ್ತು ರಾಮ ಮಂದಿರ ವಿನ್ಯಾಸ, ಬ್ಯಾಂಕ್ ಖಾಸಗೀಕರಣಕ್ಕೆ ಸಾಹಸ; ಜು.21ರ ಟಾಪ್ 10 ಸುದ್ದಿ! 

ಈಗಾಗಲೇ ಎಸ್‌ಒಪಿ ತಂಡಗಳನ್ನು ರಚಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಎರಡು ದಿನಗಳ ಮುಂಚೆಯೇ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಹೊರಗಡೆ ರಾಜ್ಯದಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಪೋಷಕರಿಗೆ ವಿನಾಯತಿ ನೀಡಲಾಗುತ್ತದೆ ಎಂದರು.

ಸಿಇಟಿ ಪರೀಕ್ಷೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್, ಮೆಡಿಕಲ್, ದಂತವೈದ್ಯ ಕೋರ್ಸುಗಳ ಅಡ್ಮಿಷನ್ ದಿನಾಂಕವನ್ನೂ ಮುಂದೂಡಲಾಗುತ್ತದೆ. ಯಾವ ವಿದ್ಯಾರ್ಥಿಗಳಿಗೂ ತೊಂದರೆ ಆಗದಂತೆ ಕ್ರಮವಹಿಸುತ್ತೇವೆ . ಎಲ್ಲ ವಿವಿಗಳಲ್ಲಿ ಪದವಿಗೆ ದಾಖಲಾತಿ ಆರಂಭವಾಗಿದೆ. ಹೀಗಾಗಿ ಸಿಇಟಿ ಪರೀಕ್ಷೆ ಮುಗಿಸಿದ ಬಳಿಕ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ದಾಖಲಾತಿಗೆ ಕಾಲವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ಹೊರರಾಜ್ಯಗಳಿಂದ 1891 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುತ್ತಾರೆ. ಅವರಿಗೆ ಗಡಿ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಹೊರ ದೇಶದಿಂದ 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಒಂದು ತಿಂಗಳ ಹಿಂದೆಯೇ ಅವರಿಗೆ ನೋಟಿಸ್ ಕೊಡಲಾಗಿತ್ತು ಎಂದು ತಿಳಿಸಿದರು.