ಬೆಂಗಳೂರು[ಫೆ.28]: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸುತ್ತಿರುವ ನಗರದ ಪಿಇಎಸ್‌ ವಿಶ್ವವಿದ್ಯಾಲಯ ಈ ಬಾರಿ ಬರೋಬ್ಬರಿ 4362 ವಿದ್ಯಾರ್ಥಿಗಳಿಗೆ ಒಟ್ಟು 5.70 ಕೋಟಿ ರು. ವಿದ್ಯಾರ್ಥಿ ವೇತನ ನೀಡಲಿದ್ದು, ಫೆ.29ರಂದು ವಿದ್ಯಾರ್ಥಿ ವೇತನ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಪ್ರತಿ ಸೆಮಿಸ್ಟರ್‌ಗೆ (ವರ್ಷದಲ್ಲಿ ಎರಡು ಬಾರಿ) ಪಿಇಎಸ್‌ ವಿಶ್ವವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಈ ಬಾರಿ ನೀಡುತ್ತಿರುವ 5.70 ಕೋಟಿ ರು. ವಿದ್ಯಾರ್ಥಿ ವೇತನ ಒಂದು ಅವಧಿಗೆ ನೀಡುತ್ತಿರುವ ಅತಿ ದೊಡ್ಡ ಮೊತ್ತವಾಗಿದೆ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್‌. ದೊರೆಸ್ವಾಮಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಇಎಸ್‌ ವಿವಿಯು ಕಳೆದ 2014ರಿಂದಲೂ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ. ಈ ವರ್ಷ ಶೇ.90ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ 1,464 ವಿದ್ಯಾರ್ಥಿಗಳಿಗೆ ಪ್ರೊ.ಎಂಆರ್‌ಡಿ ಹೆಸರಿನಲ್ಲಿ ವಿದ್ಯಾರ್ಥಿ ವೇತನ, ಶೇ.85ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ 196 ವಿದ್ಯಾರ್ಥಿಗಳಿಗೆ ಸಿಎನ್‌ಆರ್‌ ರಾವ್‌ ಹೆಸರಿನಲ್ಲಿ ಹಾಗೂ ಶೇ.80ಕ್ಕಿಂತ ಹೆಚ್ಚಿನ ಅಂಕ ಪಡೆದ 2702 ವಿದ್ಯಾರ್ಥಿಗಳು ಸೇರಿ ಒಟ್ಟು 4362 ವಿದ್ಯಾರ್ಥಿಗಳಿಗೆ 5.70 ಕೋಟಿ ರು. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ವರೆಗೆ 27.58 ಕೋಟಿ ರು.ಗಳನ್ನು ವಿದ್ಯಾರ್ಥಿ ವೇತನ ರೂಪದಲ್ಲಿ ನೀಡಿ ಪ್ರೋತ್ಸಾಹಿಸಲಾಗಿದೆ ಎಂದು ತಿಳಿಸಿದರು.

ಫೆ.29ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಹೊಸಕೆರೆಹಳ್ಳಿಯಲ್ಲಿರುವ ಕ್ಯಾಂಪಸ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಿಸ್ಕೋ ಕಂಪನಿಯ ಅಧ್ಯಕ್ಷ ಸಮೀರ್‌ ಗಾರಡೆ, ಆಕ್ಸೆಂಚರ್‌ ಕಂಪನಿ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಮೋಹನ್‌ ಶೇಖರ್‌ ಅವರು ವಿದ್ಯಾರ್ಥಿ ವೇತನ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.

‘ಆತ್ಮತೃಷ’ ಸಾಂಸ್ಕೃತಿಕ ಕಾರ್ಯಕ್ರಮ:

ಕಾಲೇಜಿನಲ್ಲಿ ಪರೀಕ್ಷೆ ನಡೆಸುವುದು ಹಾಗೂ ಉದ್ಯೋಗ ಕಲ್ಪಿಸುವುದಷ್ಟೇ ಅಲ್ಲ. ಕಲೆ ಮತ್ತು ಸಂಸ್ಕೃತಿಗೆ ಪ್ರಾಧ್ಯಾನ್ಯತೆ ನೀಡುವ ಉದ್ದೇಶದಿಂದ ಪಿಇಎಸ್‌ ನಡೆಸಿಕೊಂಡು ಬರುತ್ತಿರುವ ‘ಆತ್ಮತೃಷ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಮಾ.5ರಿಂದ 7ರ ವರೆಗೆ ನಡೆಯಲಿದೆ. ನೃತ್ಯ, ಗಾಯನ, ಯಕ್ಷಗಾನ ಸೇರಿದಂತೆ 50 ಬಗೆಯ ಕಾರ್ಯಕ್ರಮಗಳು ನಡೆಯಲಿದೆ. ದೇಶಾದ್ಯಂತ 80 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಫೆ.28ರಿಂದಲೇ ಕಾರ್ಯಕ್ರಮಗಳು ಆರಂಭವಾಗಲಿವೆ. ಅಂದು ಆಕಾಶ್‌ ಗುಪ್ತರಿಂದ ಕಾಮಿಡಿ ನೈಟ್‌, ಮಾ.1ರಂದು ಬೆಳಗ್ಗೆ 9 ಗಂಟೆಯ ನಂತರ ‘ಹ್ಯಾಕಥಾನ್‌’, ಮಾ.4 ಮಧ್ಯಾಹ್ನ 2ಗಂಟೆ ನಂತರ ಚಿದಂಬರ ಕಾಳಮಂಜಿ ಅವರು ‘ಸಂಗೀತ ದರ್ಪಣ’ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ. ಮಾ.5ರಂದು ಅಧಿಕೃತವಾಗಿ ಡಾ. ಎಂ.ಆರ್‌.ದೊರೆಸ್ವಾಮಿ ಅವರು ‘ಅತ್ಮ ತೃಷ’ಕ್ಕೆ ಚಾಲನೆ ನೀಡಲಿದ್ದಾರೆ. ಅಂದು ಸಂಜೆ ಯಕ್ಷಗಾನ ಕಲಾವಿದ ಡಾ.ಕೆರೆಮನೆ ಶಿವಾನಂದ ಹೆಗಡೆ ಅವರಿಂದ ಯಕ್ಷಗಾನ ಪ್ರದರ್ಶಿಸಲಿದ್ದಾರೆ. ಮಾ.6 ಸಂಜೆ 5.30ರ ನಂತರ ‘ಕಲ್‌ ನೈಟ್‌’ ಕಾರ್ಯಕ್ರಮ ಇರಲಿದೆ. ಮಾ.7ರಂದು ಬಿನ್ನಿ ದಯಾಳ್‌ ಮತ್ತು ತಾಯಿಕುಡಂ ಬ್ರಿಗೇಡ್‌ ಅವರಿಂದ ‘ಪ್ರೊ ನೈಟ್‌’ ಕಾರ್ಯಕ್ರಮ ಇರಲಿದೆ ಎಂದು ಪಿಇಎಸ್‌ ವಿವಿ ಸ್ಟೂಡೆಂಟ್‌ ಅಫೇ​ರ್‍ಸ್ನ ಡೀನ್‌ ಡಾ.ವಿ.ಕೃಷ್ಣ ಹೇಳಿದರು.

ಹುತಾತ್ಮ ಯೋಧರಿಗೆ ಸಮರ್ಪಣ:

ಹುತಾತ್ಮ ಸೈನಿಕರ ಕುಟುಂಬದವರಿಗೆ ಧನ ಸಹಾಯ ಮಾಡುವ ಉದ್ದೇಶದಿಂದ ಮಾ.22ರಂದು ಸಮರ್ಪಣ ಎಂಬ ಮ್ಯಾರಥಾನ್‌ ಆಯೋಜನೆ ಮಾಡುತ್ತಿದ್ದೇವೆ. 5ಕೆ, 10ಕೆ ಮತ್ತು 21ಕೆ ಅರ್ಧ ಮ್ಯಾರಥಾನ್‌ ಇರಲಿದೆ. ಇದರಿಂದ ಸಂಗ್ರಹವಾದ ದೇಣಿಗೆಯನ್ನು ಏ.7ರಿಂದ 9ರ ವರೆಗೆ ಕಾರ್ಯಕ್ರಮ ಆಯೋಜನೆ ಮಾಡಿ ಹುತಾತ್ಮರ ಕುಟುಂಬದವರಿಗೆ ತಲುಪಿಸಲಿದ್ದೇವೆ ಪಿಇಎಸ್‌ ವಿವಿ ಕುಲಪತಿ ಡಾ.ಶ್ರೀಧರ್‌ ತಿಳಿಸಿದರು