ಶಿಕ್ಷಣ ನೀತಿ ರೂಲ್ಸ್: ಕೇಂದ್ರ ಸರ್ಕಾರದಿಂದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್
ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದು, ಪಠ್ಯಕ್ರಮದಲ್ಲಿ ಮಹತ್ತರ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಹೊಸ ಶಿಕ್ಷಣ ನೀತಿಯ ಅನ್ವಯ ಮಕ್ಕಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ನವದೆಹಲಿ, (ಆ.02): ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಜೊತೆಗೆ ಬೆಳಗಿನ ಉಪಾಹಾರವನ್ನು ಕೂಡ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಈಗಾಗಲೇ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಮಕ್ಕಳಿಗೆ ಬೆಳಗಿನ ಹೊತ್ತು ಪೌಷ್ಟಿಕಯುಕ್ತ ಉಪಾಹಾರ ಸೇವನೆಗೆ ಸಿಕ್ಕಿದರೆ ನಂತರ ಇಡೀ ದಿನ ಮಕ್ಕಳು ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಲು, ಹೆಚ್ಚು ಚಟುವಟಿಕೆಯಿಂದ ಇರಲು ಸಹಕಾರಿಯಾಗುತ್ತದೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ತಿಂಡಿಯನ್ನು ಕೂಡ ಸೇರಿಸಲು ಚಿಂತನೆ ನಡೆಸಿದೆ.
ನೂತನ ಶಿಕ್ಷಣ ನೀತಿಯಿಂದ ಉದ್ಯೋಗದಾತರ ಸೃಷ್ಟಿ: ಮೋದಿ
ಪೌಷ್ಠಿಕಾಂಶವಿರುವ ಆಹಾರ ಸೇವಿಸದಿದ್ದರೆ ಮಕ್ಕಳಲ್ಲಿ ಗರಿಷ್ಠ ಕಲಿಕೆಯ ಕೊರತೆ ಕಂಡು ಬರಬಹುದೆಂಬ ಕಾರಣಕ್ಕೆ ಮಕ್ಕಳ ಪೋಷಣೆ ಮತ್ತು ಆರೋಗ್ಯಕ್ಕೆ ಒತ್ತು ನೀಡಲು ಮುಂದಾಗಿದ್ದು ಬೆಳಗಿನ ಉಪಾಹಾರದಿಂದ ಮಕ್ಕಳ ಅರಿವು ಮತ್ತು ಕಲಿಕೆ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.
ಶಾಲಾ ಶಿಕ್ಷಣ ವ್ಯವಸ್ಥೆಯೊಳಗೆ ಆರೋಗ್ಯಯುತ ಆಹಾರ, ಉತ್ತಮ ತರಬೇತಿ ಪಡೆದ ಸಾಮಾಜಿಕ ಕಾರ್ಯಕರ್ತರು, ಮಾನಸಿಕ ಸಲಹೆ ತಜ್ಞರು ಮತ್ತು ಸಮುದಾಯಗಳ ಪಾಲ್ಗೊಳ್ಳುವಿಕೆ ಮುಖ್ಯವಾಗುತ್ತದೆ ಎಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೇಳುತ್ತದೆ.
ಹೊಸ ಶಿಕ್ಷಣ ನೀತಿಗೆ ಕೇಂದ್ರದ ಅನುಮೋದನೆ, ಮಾತೃಭಾಷೆಯಲ್ಲಿ ಪಾಠ!
ಮಧ್ಯಾಹ್ನದ ಬಿಸಿಯೂಟ ಮಾಡಲು ಸಾಧ್ಯವಿಲ್ಲದ ಕಡೆಯಲ್ಲಿ ಮಕ್ಕಳಿಗೆ ಅಲ್ಲಿಯೇ ಪ್ರಕೃತಿಯಲ್ಲಿ ಬೆಳೆದ ಹಣ್ಣುಗಳ ಜೊತೆಗೆ ಕಡಲೆಬೀಜ ಮತ್ತು ನೆಲಗಡಲೆಯನ್ನು ಬೇಯಿಸಿ ಬೆಲ್ಲದ ಜೊತೆ ಮಕ್ಕಳಿಗೆ ನೀಡಬಹುದು, ಇದರಿಂದ ಪೌಷ್ಟಿಕಾಂಶ ಸಿಗುತ್ತದೆ. ಮಕ್ಕಳಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿ ಆರೋಗ್ಯ ಕಾರ್ಡು ನೀಡಬೇಕು, ಮಕ್ಕಳ ಆರೋಗ್ಯವನ್ನು ವೃದ್ಧಿಸುವ ಕೆಲಸಗಳು ಶಾಲೆಯಲ್ಲಿ ಆಗಬೇಕು ಎನ್ನುವುದು ಶಿಕ್ಷಣ ನೀತಿಯಲ್ಲಿದೆ.