ಬೆಂಗಳೂರು, (ಮೇ.04): ಹಂತ-ಹಂತವಾಗಿ ಕೊರೋನಾ ಲಾಕ್‌ಡೌನ್‌ ಅನ್ನು ಸಡಿಲ ಮಾಡಲಾಗಿದೆ. ಇದರ ಬೆನ್ನಲ್ಲೇ  ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲು ಅನುವಾಗುವಂತೆ ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯದ ಎಲ್ಲಾ 34 ಶೈಕ್ಷಣಿಕ ಜಿಲ್ಲೆಗಳ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಜೊತೆ ಸುರೇಶ್ ಕುಮಾರ್‌ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು (ಸೋಮವಾರ) ಸಭೆ ನಡೆಸಿದರು.

ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್

SSLC ಪರೀಕ್ಷೆ ಗಳ ಸಿದ್ದತೆ, ವ್ಯವಸ್ಥೆಯಲ್ಲಿ ಬೇಕಾಗುವ ಬದಲಾವಣೆ, ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ SSLC ಪುನರ್ಮನನ ತರಗತಿಗಳು, ಮಕ್ಕಳ ವಾಣಿ "ಯೂಟ್ಯೂಬ್" ಚಾನೆಲ್ ಸೇರಿದಂತೆ ಸುಮಾರು 12 ಅಂಶಗಳ ಕುರಿತು  ಈ ಸಭೆಯಲ್ಲಿ ಚರ್ಚೆಯಾಗಿದೆ.

ರಾಜ್ಯದ ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಸಿರು ಮತ್ತು ಕಂಟೇನ್ ಮೆಂಟ್ ಜಿಲ್ಲೆಗಳೆಂದು ಗುರುತಿಸಿರುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕೈಗೊಳ್ಳಬೇಕಿರುವ ಪರೀಕ್ಷಾ ಸಿದ್ಧತೆ ಕುರಿತು ಅಭಿಪ್ರಾಯ ಪಡೆದರು. ಅಲ್ಲದೇ ಕೆಲವು ಪ್ರಮುಖ ಸೂಚನೆಗಳನ್ನು ಸಹ ನೀಡಿದರು. 

ಸಭೆಯ ಮುಖ್ಯಾಮಶಗಳು ಇಲ್ಲಿವೆ
* ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಜರ್ ಗಳನ್ನು ಒದಗಿಸಿ ಥರ್ಮಲ್ ತಪಾಸಣೆಗೆ ಒಳಪಡಿಸಿ ಪರೀಕ್ಷೆಗೆ ಹಾಜರುಪಡಿಸಲು ಕ್ರಮ ಕೈಗೊಳ್ಳಬೇಕು. ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. 

* ಯಾವುದೇ ವಿದ್ಯಾರ್ಥಿಯೂ ನೆಲದ ಮೇಲಾಗಲೀ, ಬಯಲಿನಲ್ಲಾಗಲೀ ಪರೀಕ್ಷೆ ಬರೆಯದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದ ಸಚಿವರು, ಅಗತ್ಯವಾದ ಡೆಸ್ಕ್, ಬೆಂಚ್ ಗಳನ್ನು ಅಸುಪಾಸಿನ ಶಾಲೆಗಳಿಂದ ಸಂಗ್ರಹಿಸಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಪರೀಕ್ಷಾ ವಾತಾವರಣವನ್ನು ಕಲ್ಪಿಸಬೇಕೆಂದು ಸಲಹೆ ನೀಡಿದರು.

* ಕಂಟೈನ್ ಮೆಂಟ್ ವಲಯಗಳಲ್ಲಿರುವ ಪರೀಕ್ಷಾ ಕೇಂದ್ರಗಳ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸುವುದು, ಉಪಕೇಂದ್ರಗಳನ್ನು ಸ್ಥಾಪಿಸುವುದು. 

* ಪ್ರತಿ ಪರೀಕ್ಷಾ ಕೊಠಡಿಯಲ್ಲಿ ತಲಾ 24 ಮಕ್ಕಳ ಬದಲಿಗೆ ಕಡಿಮೆ ಸಂಖ್ಯೆಯ ಮಕ್ಕಳನ್ನು ಕೂಡಿಸುವುದರ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು.

* ಪ್ರತಿ ಕೇಂದ್ರದಲ್ಲಿ ಕಡ್ಡಾಯವಾಗಿ ಸಿಸಿಟಿವಿ, ವೈದ್ಯಕೀಯ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ಸಮಗ್ರವಾದ ಕ್ರಿಯಾಯೋಜನೆ ತಯಾರಿಸಬೇಕೆಂದು ಸಚಿವರು ಸೂಚನೆ ನೀಡಿದರು.