ಬೆಂಗಳೂರು, (ಮೇ.07): ಕೊರೋನಾ ಅಟ್ಟಹಾಸದಿಂದ ಅದೆಷ್ಟೊ ಪರೀಕ್ಷೆಗಳು ಬಾಕಿ ಉಳಿದಿವೆ, ಮೌಲ್ಯಮಾಪನ, ಫಲಿತಾಂಶಗಳ ಬಗ್ಗೆ ಯಾವುದೇ ಸುಳಿವಿಲ್ಲ. ಕೊರೋನಾ ವೈರಸ್‌ ವಿರುದ್ಧ  ಲಾಕ್‌ಡೌನ್ ಹೋರಾಟ ಮತ್ತೆ ವಿಸ್ತರಣೆಯಾಗಿದೆ.ಇನ್ನು ನಿಗದಿತ ಸಮಯಕ್ಕೆ ಶೈಕ್ಷಣಿಕ ವರ್ಷ ಆರಂಭವಾಗುವ ಸಾಧ್ಯತೆಗಳು ಕಡಿಮೆ. 

ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್,  ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ  ಶೈಕ್ಷಣಿಕ ಅವಧಿ ಕುರಿತು ಚರ್ಚೆ ನಡೆಸಿದರು.

ದೇಶದಾದ್ಯಂತ CBSE 10ನೇ ತರಗತಿ ಪರೀಕ್ಷೆ ರದ್ದು...! 

ಬಳಿಕ ಪೇಸ್‌ಬುಕ್ ಲೈವ್‌ಗೆ ಬಂದು ಮಾತನಾಡಿರುವ ಸುರೇಶ್ ಕುಮಾರ್, ನಿಗದಿತ ಅವಧಿಯಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುವ ಸಾಧ್ಯತೆಗಳು ಕ್ಷೀಣಿಸಿರುವುದರಿಂದ ಪಠ್ಯಗಳ ಸಂಖ್ಯೆಯನ್ನು ಕಡಿತ ಮಾಡಬೇಕು ಎಂದು ಸುರೇಶ್ ಕುಮಾರ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಸಕ್ತ ಶೈಕ್ಷಣಿಕ ಸಾಲು ಆರಂಭವಾಗುವ ಬಗ್ಗೆ ಈಗಲೇ ನಿರ್ಣಯ ಮಾಡುವುದು ಅಸಾಧ್ಯ. ಹೀಗಾಗಿ 1ರಿಂದ 10ನೇ ತರಗತಿ ಹಾಗೂ ಪದವಿ ಪೂರ್ವ ಶಿಕ್ಷಣದ ಪಠ್ಯಕ್ರಮದಲ್ಲಿ ಹೆಚ್ಚುವರಿಯಾಗಿರುವ ಪಠ್ಯಗಳನ್ನು ಗುರುತಿಸುವ ಕೆಲಸವನ್ನು ಆರಂಭಿಸಬೇಕು. ಎಷ್ಟು ದಿನ ತರಗತಿಗಳು ನಡೆಯುತ್ತವೆ ಎಂಬುದನ್ನು ಲೆಕ್ಕ ಹಾಕಿ ಅದಕ್ಕೆ ತಕ್ಕಂತೆ ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿಯಲ್ಲಿ ಪಠ್ಯಗಳನ್ನು ರೂಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದರು.

ಈ ಬಾರಿ ಶೈಕ್ಷಣಿಕ ವರ್ಷ ವಿಳಂಬ; ಯಾವಾಗ ಶಾಲಾ-ಕಾಲೇಜು ಪುನಾರಂಭ?

ಅನಗತ್ಯ ಹಾಗೂ ಪುನಾರಾವರ್ತಿತ ಪಠ್ಯಗಳನ್ನು ಕೈಬಿಟ್ಟು ಅಗತ್ಯ ಪಠ್ಯಗಳನ್ನು ಮಾತ್ರ ಉಳಿಸಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದರು.