ಪುಣೆ[ಜೂ.20]: ಸಾಮಾಜಿಕ ರಚನೆಯಲ್ಲಿ ಬದಲಾವಣೆಗಳು ಬಂದು ಬಹಳ ಸಮಯವೇ ಆದರೂ, ಶಾಲಾ ಪಠ್ಯ ಗಳಲ್ಲಿ ಇಂದಿಗೂ ಮಹಿಳೆಯನ್ನು ಅಡುಗೆ ಮನೆಗೆ ಸೀಮಿತ ಮಾಡುವ, ಪುರುಷನನ್ನು ಕಚೇರಿಗೆ ಕೆಲಸಕ್ಕೆ ಹೋಗುವವ ಎಂಬಂತೇ ಬಿಂಬಿಸುವ ಚಿತ್ರಗಳು ಸಾಮಾನ್ಯ.

ಆದರೆ ಮಹಾರಾಷ್ಟ್ರ ಸರ್ಕಾರ ಇಂಥ ಲಿಂಗತಾರತಮ್ಯ ನಿವಾರಿಸುವ ನೂತನ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದೆ. ಲಿಂಗ ಸಮಾನತೆ ಸಾಧಿಸುವ ನಿಟ್ಟಿನಲ್ಲಿ, 2ನೇ ತರಗತಿಯ ಪಠ್ಯದಲ್ಲಿ ತರಕಾರಿ ಹೆಚ್ಚುತ್ತಿರುವ ತಾಯಿ ಮತ್ತು ಪೇಪರ್ ಓದುತ್ತ ಸೋಫಾ ಮೇಲೆ ಕುಳಿತ ತಂದೆಯ ಚಿತ್ರಕ್ಕೆ ಕೊಕ್ ನೀಡಿ, ತಂದೆ-ತಾಯಿ ಇಬ್ಬರೂ ಅಡುಗೆ ಮನೆಯಲ್ಲಿ ತರಕಾರಿ ತೊಳೆಯುತ್ತಿರುವ ಚಿತ್ರ ಬಳಕೆ ಮಾಡಲಾಗಿದ್ದು, ವೃತ್ತಿ ಯಲ್ಲಿ ತಾಯಿ ವೈದ್ಯೆ ಮತ್ತು ತಂದೆ, ಟ್ರಾಫಿಕ್ ಪೊಲೀಸ್ ಎಂಬುದು ಅವರ ಮೈಮೇಲಿನ ಸಮವಸ್ತ್ರಗಳಿಂದ ತಿಳಿದುಬರುತ್ತದೆ.

ಈ ಮೂಲಕ ಪರಿಷ್ಕೃತ ಪಠ್ಯಕ್ರಮದಲ್ಲಿ ಲಿಂಗ ಸಮಾನತೆಗೆ ಒತ್ತು ನೀಡಿದ್ದು, ಇದಕ್ಕೆ ಶಿಕ್ಷಕರ ವಲಯದಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.