Asianet Suvarna News Asianet Suvarna News

ಐಬಿಎಮ್-ಎನ್‌ಎಸ್‌ಡಿಸಿ ಯೋಜನೆ: ವಿನೂತನ ಕಂಪ್ಯೂಟರ್ ತಂತ್ರಜ್ಞಾನ ಉಚಿತವಾಗಿ ಕಲಿಯಿರಿ!

ಉಚಿತ ಡಿಜಿಟಲ್ ಕೌಶಲಗಳ ತರಬೇತಿ ನೀಡಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದೊಂದಿಗೆ ಐಬಿಎಮ್  ಸಹಯೋಗ  ವಿನೂತನ ತಂತ್ರಜ್ಞಾನಗಳು ಹಾಗು ಕಾರ್ಯಸ್ಥಳ ಕೌಶಲಗಳಲ್ಲಿ ಡಿಜಿಟಲ್ ಕಲಿಕೆಗೆ ಭಾರತೀಯ ಯುವಕರಿಗೆ ಪ್ರವೇಶಾವಕಾಶ ಒದಗಿಸಲು ಐಬಿಎಮ್‍ನ ಮುಕ್ತ ಪಿ-ಟೆಕ್ ವೇದಿಕೆ.

IBM NSDC Offer Online Courses For Digital Skill Development
Author
Bengaluru, First Published Aug 23, 2020, 5:27 PM IST

ಬೆಂಗಳೂರು (ಆಗಸ್ಟ್ 23): ವಿನೂತನ ತಂತ್ರಜ್ಞಾನಗಳು ಹಾಗು ವೃತ್ತಿಪರ ಅಭಿವೃದ್ಧಿ ಕೌಶಲ್ಯಗಳ ಮೇಲೆ ಕೇಂದ್ರೀಕೃತವಾದ ಉಚಿತ ಡಿಜಿಟಲ್ ಶಿಕ್ಷಣ ವೇದಿಕೆಯಾದ ಮುಕ್ತ ಪಿ-ಟೆಕ್ ವೇದಿಕೆಯನ್ನು ಒದಗಿಸಲು ಐಬಿಎಮ್(NYSE: IBM) ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದೊಂದಿಗೆ ಸಹಯೋಗ ಏರ್ಪಡಿಸಿಕೊಂಡಿರುವುದಾಗಿ  ಘೋಷಿಸಿದೆ. 

ಈ ಸಹಯೋಗದ ಭಾಗವಾಗಿ ಐಬಿಎಮ್ ಮುಕ್ತ ಪಿ-ಟೆಕ್ ವೇದಿಕೆಯಿಂದ ಆನ್‍ಲೈನ್ ಕೋರ್ಸ್‍ಗಳನ್ನು ರೂಪಿಸಿ, ಭಾರತೀಯ ಯುವಸಮುದಾಯ ಭವಿಷ್ಯತ್ತಿನ ವೃತ್ತಿಗಳಲ್ಲಿ ಯಶಸ್ವಿಯಾಗುವುದಕ್ಕೆ ಅಗತ್ಯವಾದ ವಿವಿಧ ಕೌಶಲ್ಯಗಳನ್ನು ಕಲಿಸುವ ಗುರಿಯನ್ನು ಎನ್‍ಎಸ್‍ಡಿಸಿ ಇಕೌಶಲ ಭಾರತ ಪೋರ್ಟಲ್ (NSDC’s eSkill India portal) ಹೊಂದಿದೆ. 

ಈ ಸಹಭಾಗಿತ್ವದಡಿ, ಐಬಿಎಮ್ ತನ್ನ 30+ ಮುಕ್ತ ಪಿ-ಟೆಕ್ ಕೋರ್ಸ್‍ಗಳನ್ನು ಇಕೌಶಲ ಭಾರತ ಪೋರ್ಟಲ್‍ನಲ್ಲಿ ಪರಿಚಯಿಸಲಿದ್ದು, 60+ ಘಂಟೆಗಳ ಕಲಿಕೆಯನ್ನು ಒದಗಿಸಲಿದೆ. 

18ರಿಂದ 22 ವರ್ಷ ವಯಸ್ಸಿನ ಕಲಿಕಾದಾರರಿಗೆ ಡಿಸೈನ್ ಥಿಂಕಿಂಗ್‌ನಂತಹ ವೃತ್ತಿಪರ ಕೌಶಲಗಳ ಜೊತೆಗೆ ಐಬಿಎಮ್, ಸೈಬರ್ ಸುರಕ್ಷತೆ, ಬ್ಲಾಕ್‍ಚೈನ್, ಎಐ ಮತ್ತು ಮಶೀನ್ ಲರ್ನಿಂಗ್‌, ಕ್ಲೌಡ್, ಇಂಟರ್‍ನೆಟ್ ಆಫ್ ಥಿಂಗ್ಸ್(ಐಒಟಿ) ಮುಂತಾದ ವಿನೂತನ ತಂತ್ರಜ್ಞಾನಗಳಲ್ಲಿ ಆನ್ಲ್‍ಲೈನ್ ಕೋರ್ಸ್‍ಗಳನ್ನು ಉಚಿತವಾಗಿ ಒದಗಿಸಲಿದೆ. 

ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಎಮ್‍ಡಿ ಹಾಗು ಸಿಇಒ ಡಾ. ಮನೀಶ್ ಕುಮಾರ್ ಮಾತನಾಡಿ, "ಪ್ರಮಾಣ ಮತ್ತು ಗುಣಮಟ್ಟದಲ್ಲಿ ಯುವಕರನ್ನು ತಲುಪುವುದಕ್ಕೆ ತಂತ್ರಜ್ಞಾನದ ಶಕ್ತಿಯನ್ನು ವರ್ಧಿಸುವ ಅಗತ್ಯವಿದೆ. ಭೌಗೋಳಿಕ ಹಾಗು ಸಾಮಾಜಿಕ-ಆರ್ಥಿಕ ಅಂತರಗಳ ಸಮಸ್ಯೆಯನ್ನು ನಿವಾರಿಸಲು, ಮುಕ್ತ ಪಿ-ಟೆಕ್ ಹಾಗು ಎಕೌಶಲ ಭಾರತದಂತಹ ಡಿಜಿಟಲ್ ವೇದಿಕೆಗಳ ಮೂಲಕ ನಡೆಸಲಾಗುವ ಆನ್‍ಲೈನ್ ತರಬೇತಿಗಳನ್ನು ವರ್ಧಿಸುವುದು ಅಗತ್ಯವಾಗಿದೆ. ಡಿಜಿಟಲ್ ಕಲಿಕೆಯು, ಸಮರ್ಥ ಉದ್ಯೋಗಾವಕಾಶವು ಹೆಚ್ಚಾಗುವುದರಿಂದ ಕಾರ್ಮಿಕ ಕಾರ್ಯಪಡೆಯಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆ, ಡಿಜಿಟಲ್ ಕಲಿಕೆಯು ಯುವಕರಿಗೆ ಜೀವನೋಪಾಯ ಹಾಗು ಉದ್ಯೋಗದ ಅವಕಾಶವನ್ನು ಹೆಚ್ಚಿಸುತ್ತದೆ” ಎಂದರು. 

ಇಕೌಶಲ ಭಾರತ, ಎನ್‍ಎಸ್‍ಡಿಸಿದ ಡಿಜಿಟಲ್ ಕೌಶಲದ ಉಪಕ್ರಮವಾಗಿದ್ದು, ಹಲವು ಭಾರತೀಯ ಹಾಗು ಜಾಗತಿಕ ಜ್ಞಾನ ಸಹಭಾಗಿತ್ವಗಳ ಮೂಲಕ ಡಿಜಿಟಲ್ ಕಲಿಕೆಯ ಸಂಪನ್ಮೂಲಗಳನ್ನು ವರ್ಧಿಸಿ, ಭಾರತೀಯ ಯುವಜನತೆಗೆ ಅತ್ಯುತ್ತಮವಾದ ಕಲಿಕಾ ಸಂಪನ್ಮೂಲಗಳಿಗೆ ಪ್ರವೇಶಾವಕಾಶ ಒದಗಿಸಲು ನೆರವಾಗುತ್ತದೆ. 

ಪ್ರಸ್ತುತ, ಅನೇಕ ಭಾಷೆಗಳಲ್ಲಿ ಹಲವಾರು ಕ್ಷೇತ್ರಗಳಾದ್ಯಂತ 16 ಲಕ್ಷ ನಿಮಿಷಗಳ ಡಿಜಿಟಲ್ ಕೋರ್ಸ್‍ಗಳು ಮತ್ತು ಕಂಟೆಂಟ್‍ಗಳು ಲಭ್ಯವಿದ್ದು,  ಕಲಿಕಾದಾರರಿಗೆ, ವೇಗವಾಗಿ ಪರಿವರ್ತನೆಗೊಳ್ಳುತ್ತಿರುವ ಡಿಜಿಟಲ್ ವಿಶ್ವದಲ್ಲಿ ಬೆಳೆಯಲು ಅಗತ್ಯವಾದ ತಂತ್ರಜ್ಞಾನ ಹಾಗು ಕೌಶಲವನ್ನು ಒದಗಿಸುತ್ತದೆ. 

ಐಬಿಎಮ್ ಭಾರತ/ದಕ್ಷಿಣ ಏಶ್ಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್ “ ಎನ್‍ಎಸ್‍ಡಿಸಿಯೊಂದಿಗಿನ ನಮ್ಮ ಸಹಯೋಗವು ಮುಂದಿನ ಪೀಳಿಗೆಯನ್ನು ಡಿಜಿಟಲ್ ಕೌಶಲಗಳೊಂದಿಗೆ ಸಜ್ಜುಗೊಳಿಸುವಲ್ಲಿ ಒಂದು ಮಹತ್ತರವಾದ ಮೈಲಿಗಲ್ಲಾಗಿದೆ. ಮುಕ್ತ ಪಿ-ಟೆಕ್, ವಿನೂತನ ತಂತ್ರಜ್ಞಾನಗಳು ಹಾಗು ವೃತ್ತಿಪರ ಕೌಶಲಗಳ ಆಧಾರ ಕಲಿಕೆಯು ಯುವಕರಿಗೆ ಹೆಚ್ಚು ಸುಲಭವಾಗಿ ಸಿಗುವಂತೆ ಮಾಡುತ್ತದೆ ಎಂದು ಹೇಳಿದರು.

ಪ್ರಸ್ತುತ ಅತ್ಯಂತ ಬೇಡಿಕೆಯಿರುವ ಮತ್ತು ಕಾಲೇಜು ಪಠ್ಯಕ್ರಮದಲ್ಲಿ ಲಭ್ಯವಿಲ್ಲದ 11 ಪ್ರಮುಖ ಕೌಶಲಗಳ ಸೆಟ್ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ. ಶೀಘ್ರವಾಗಿ, ಹಿಂದಿಯಿಂದ ಆರಂಭಿಸಿ, ಕನ್ನಡ, ತೆಲುಗು, ತಮಿಳು, ಪಂಜಾಬಿ, ಗುಜರಾತಿ, ಸಿಂಧಿ, ಉರ್ದು ಹಾಗು ಬಂಗಾಳಿ ಒಳಗೊಂಡಂತೆ 10 ಭಾರತೀಯ ಭಾಷೆಗಳಲ್ಲಿ ಲಭ್ಯವಾಗಲಿದೆ.
  
ಮುಕ್ತ ಪಿ-ಟೆಕ್ ಈಗ ವಿಶ್ವವ್ಯಾಪಿಯಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಲಭ್ಯವಿದೆ. ಅದಕ್ಕಾಗಿ ಇಲ್ಲಿ  https://open.ptech.org ನೋಂದಣಿ ಮಾಡಿಕೊಳ್ಳಬಹುದು

Follow Us:
Download App:
  • android
  • ios