ಹತ್ತು ವರ್ಷಗಳ ಹಿಂದೆ ಬಂದ ತ್ರೀ ಈಡಿಯೆಟ್ಸ್‌ ಸಿನಿಮಾ ನಮ್ಮಲ್ಲಿ ಹೆಚ್ಚಿನವರು ನೋಡಿದ್ದಾರೆ. ಆ ಸಿನಿಮಾ ನೆನಪಿನಲ್ಲಿ ಉಳಿಯೋದರ ಜೊತೆಗೆ ಅದರಲ್ಲಿ ಬಂದ ಒಂದು ಅಂಶ ಹೆಚ್ಚಿನ ಜನರ ಗಮನ ಸೆಳೆಯಿತು. ಅದು ನಮ್ಮೆಲ್ಲರಲ್ಲೂ ಕಾಮನ್‌ ಆಗಿರುವ ವಿಷಯ. ನಾನು ಫೇಲ್‌ ಆಗಿ ನನ್ನ ಫ್ರೆಂಡ್‌ ಪಾಸ್‌ ಆದ್ರೆ ಆಗುವ ಸಂಕಟದ ಬಗ್ಗೆ ಆ ಸಿನಿಮಾದಲ್ಲಿ ಹೇಳಿದ್ದರು. ‘ನಾನು ಫೇಲ್‌ ಆದದ್ದಕ್ಕಿಂತ ಹೆಚ್ಚು ಬೇಜಾರು ಗೆಳೆಯ ಪಾಸ್‌ ಆಗಿರೋದಕ್ಕೆ ಆಗುತ್ತೆ’ ಅನ್ನೋ ಆ ಮಾತು ಬಹಳ ಕ್ಲಿಕ್‌ ಆಯ್ತು.

ಆದರೆ ಹೆಚ್ಚಿನ ಸಲ ನಮಗಿಂತ ಫ್ರೆಂಡ್‌ಗೆ ಜಾಸ್ತಿ ಮಾರ್ಕ್ಸ್‌ ಬಂದಾಗ ನಾವು ಆತನನ್ನು ಅಭಿನಂದಿಸುತ್ತೇವೆ. ಆದರೆ ಹೊಟ್ಟೆಯೊಳಗೆ ಬೆಂಕಿ ಹಾಕಿದ ಹಾಗಾಗುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಒಂದು ಜನಪ್ರಿಯ ಜೆನ್‌ ಕತೆ ಇದೆ. ನಗರದ ಹೊರ ವಲಯದಲ್ಲಿ ಒಂದು ಬುದ್ಧ ಮಂದಿರ. ಅದರೊಳಗೆ ಒಬ್ಬ ಗುರು, ಆ ಮಂದಿರದ ಹೊರಗೆ ಒಬ್ಬ ಕಣ್ಣು ಕಾಣದ ಭಿಕ್ಷುಕಿ. ಆ ಮಂದಿರಕ್ಕೆ ಬರುವ ಜನ ಕಡಿಮೆ. ಗುರು ಏಕಾಂತಪ್ರಿಯ. ಹಾಗಾಗಿ ಅಲ್ಲಿ ಯಾವತ್ತೂ ಮೌನದ ವಾತಾವರಣ ಇರುತ್ತಿತ್ತು.

ಮಂಡೆಬಿಸಿ ಮಾಡುವ Monday ಬ್ಲೂಸ್‍ಗೆ ಮದ್ದೇನು?

ಒಮ್ಮೆ ಆ ಗುರುಗಳು ಕಾಲವಾದರು. ಹೊರಗಿದ್ದ ಭಿಕ್ಷುಕಿ ಒಬ್ಬ ಶಿಷ್ಯನಲ್ಲಿ ವಿಚಾರಿಸಿದಳು, ‘ಮಾಸ್ಟರ್‌ ಹೋಗಿಬಿಟ್ಟರಾ’ ಅಂತ. ಆತ, ‘ಹೌದು, ನಿನ್ನೆಯೇ ಕಾಲವಾದರಲ್ಲಾ. ನಿನಗ್ಯಾರೂ ಹೇಳಿಲ್ವಾ ’ ಅಂತ ಕೇಳಿದ. ಭಿಕ್ಷುಕಿ- ‘ಇವತ್ತು ಬೆಳಗ್ಗೆ ಗಂಟೆಯ ಸದ್ದು ಕೇಳಿದಾಗಲೇ ಗೊತ್ತಾಯ್ತು ಬಿಡು’ ಅಂದಳು. ಮುಂದುವರಿಯುತ್ತಾ, ‘ನಾನು ಕುರುಡಿ ಇರಬಹುದು, ಹೊರಗಣ್ಣು ಕಾಣದೇ ಇರಬಹುದು. ಆದರೆ ಒಳಗಣ್ಣು ಚುರುಕಾಗಿದೆ. ಎಲ್ಲ ಕಡೆ ವ್ಯಕ್ತಿ ಏನು ಮಾತನಾಡುತ್ತಾನೋ ಅವನ ಮನಸ್ಸಿನೊಳಗೆ ಅದರ ವಿರುದ್ಧ ಭಾವನೆ ಇರುತ್ತೆ. ನಗು ನಗುತ್ತಾ ಮಾತಾಡುವವನು ಒಳಗೊಳಗೇ ಅಳುತ್ತಿರುತ್ತಾನೆ. ಇನ್ನೊಬ್ಬನ ಸಂಕಟ ಕಂಡು ಅಳುವವನು ಒಳಗೊಳಗೇ ಖುಷಿಯಾಗಿರುತ್ತಾನೆ. ಗೆಳೆಯ ಉನ್ನತಿ ಹೊಂದಿದರೆ ಬಹಳ ಸಂತೋಷ ಆದಂತೆ ಮಾತಾಡುತ್ತಾರೆ. ಆದರೆ ಒಳಗೆ ಮಾತ್ಸರ‍್ಯ ಭುಗಿಲೆದ್ದಿರುತ್ತೆ. ಆದರೆ ಈ ಮಂದಿರದ ಗುರುಗಳಿದ್ದರಲ್ಲಾ, ಅವರೊಬ್ಬರು ಒಳಗೂ ಹೊರಗೂ ಒಂದೇ ಥರ ಇರುತ್ತಿದ್ದರು. ಅವರು ನಕ್ಕರೆ ಮನಸ್ಸಿನೊಳಗೂ ನಗುವೇ ತುಂಬಿರುತ್ತಿತ್ತು. ಪ್ರೀತಿ ತೋರಿದರೆ ಒಳಗೂ ಅದೇ ಅಮೃತದಂಥಾ ಪ್ರೀತಿ ಇರುತ್ತಿತ್ತು. ಅವರು ಯಾರ 

ಬಳಿಯೂ ದ್ವೇಷದಿಂದ ಮಾತನಾಡಲಿಲ್ಲ. ಅವರೊಳಗೂ ದ್ವೇಷ ಇರಲಿಲ್ಲ’ ಅಂದಳು.

ಡಿಫರೆಂಟ್‌ ಆಗಿದ್ದ ಆ ಗುರುವೂ ಕಾಲವಾದ.

ಇನ್ನೊಂದು ಕತೆ ಇದೆ. ಇದು ಪಾವ್ಲೋ ಕೊಯಿಲೋ ಟ್ವೀಟಿಸಿದ ಕತೆ. ಒಬ್ಬ ಹೋಲಿ ಮ್ಯಾನ್‌ ಅಂದರೆ ನಮ್ಮ ಕಡೆಯ ಋುಷಿಗಳ ಹಾಗಿದ್ದ ವ್ಯಕ್ತಿ. ಆತನ ಮನಸ್ಸು ಕೆಡಿಸಲು ಸೈತಾನ್‌ಗಳು ಪ್ರಯತ್ನ ಮಾಡುತ್ತವೆ. ಆದರೆ ಆತ ಯಾವುದಕ್ಕೂ ಜಗ್ಗುವುದಿಲ್ಲ. ಸೈತಾನ್‌ಗಳು ಚೆಂದದ ಹುಡುಗಿಯರನ್ನು ಕಳಿಸುತ್ತಾರೆ. ಆತ ಕತ್ತೆತ್ತಿಯೂ ನೋಡಲ್ಲ. ಹಣ, ಬೆಲೆಬಾಳುವ ರತ್ನಗಳನ್ನೆಲ್ಲ ಕಳಿಸುತ್ತಾರೆ. ಆತ ಅವುಗಳನ್ನು ಮಣ್ಣಿನಂತೇ ನೋಡುತ್ತಾನೆ. ಕೊನೆಗೆ ಸೈತಾನ್‌ಗಳು ಆತನನ್ನು ಮಹಾನ್‌ ವ್ಯಕ್ತಿ ಅಂತ ತೀರ್ಮಾನಿಸಿ ತಮ್ಮ ಲೀಡರ್‌ ಇರುವಲ್ಲಿಗೆ ಬರುತ್ತಾರೆ. ಆ ನಾಯಕ ಮಹಾ ಚಾಣಾಕ್ಷ. ಇಂಥ ನೂರಾರು ಜನರನ್ನು ಕ್ಷಣ ಮಾತ್ರದಲ್ಲಿ ಮನ ಕೆಡಿಸಿದವ. ತನ್ನ ಶಿಷ್ಯರ ಮಾತು ಕೇಳಿ ಆತ ಗಹಗಹಿಸಿ ನಗುತ್ತಾನೆ. ‘ನೀವೆಲ್ಲ ಜಾಣರಿದ್ದೀರಿ, ಆದರೆ ಸೂಕ್ಷ್ಮ ಕಡಿಮೆ. ಈಗ ನಾನೇನು ಮಾಡ್ತೀನಿ ನೋಡಿ’ ಅಂದು ನೇರ ಆ ವ್ಯಕ್ತಿಯಿದ್ದ ಕಡೆ ಹೋದ. ಅವನ ಕಿವಿಯಲ್ಲಿ ‘ನಿನ್ನಿಂದ ಕಲಿತ ಆ ಪೂಜಾರಿ ಈಗ ಚಚ್‌ರ್‍ನ ಬಿಷಪ್‌ ಆಗಿದ್ದೇನೆ. ಹ್ಹೆ ಹ್ಹೆ.. ನೀನು? ಅವತ್ತೆಲ್ಲಿದ್ದೀಯೋ ಅಲ್ಲೇ ಇದ್ದೀಯಾ’ ಅಂದುಬಿಟ್ಟ. ’

ಬಾಸ್ ಮೇಲಿನ ಕೀಳು ಜೋಕನ್ನು ಅವರಿಗೂ ಶೇರ್ ಮಾಡಿಕೊಂಡರೆ...!

ಮರುಕ್ಷಣದಲ್ಲಿ ಆ ಹೋಲಿ ಮ್ಯಾನ್‌ ಮನಸ್ಸು ರಾಡಿಯಾಯ್ತು. ನಾನೇ ಪಾಠ ಹೇಳಿದ ಆ ಪೂಜಾರಿ ಬಿಷಪ್‌ ಆದನಾ, ಛೇ, ದೇವರು ನನಗೆ ಅನ್ಯಾಯ ಮಾಡಿಬಿಟ್ಟ, ನನಗೇ ನಾನೇ ಈ ಪರಿಸ್ಥಿತಿ ತಂದುಕೊಂಡೆ.. ಅಂತೆಲ್ಲ ಹಲುಬತೊಡಗಿದ. ಸೈತಾನ್‌ ಕಾರ್ಯ ಸಾಧಿಸಿದ ಖುಷಿಯಲ್ಲಿ ಕೇಕೆ ಹಾಕುತ್ತಾ ಶಿಷ್ಯಂದಿರ ಕಡೆ ಹೊರಟ.

ಮಾತ್ಸರ್ಯ ಅನ್ನೋದು ಎಲ್ಲರೊಳಗಿರುವ ಭಾವ. ಬೇಡ ಅಂದರೂ ಬರುತ್ತೆ. ಗೆಳೆಯರ ನಡುವೆ ಕಂದಕ ಸೃಷ್ಟಿಸುತ್ತೆ. ಫ್ರೆಂಡ್‌ ಆಗಿದ್ದವರು ಹಿತ ಶತ್ರುಗಳಾಗುವ ಹಾಗೆ ಮಾಡುತ್ತೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಅದು ನಮ್ಮೊಳಗೆ ಸೇರಿ ಹೋಗಿದೆ. ಆ ಗುಣವನ್ನು ಆದಷ್ಟುಹೊರಬರದ ಹಾಗೆ ನೋಡಿಕೊಳ್ಳೋದು ನಮ್ಮ ಕೆಲಸ. ಆ ಗುಣಕ್ಕೆ ಹೆಚ್ಚು ಮಹತ್ವ ಕೊಡದೇ ಮೂಲೆಗುಂಪು ಮಾಡುತ್ತ ಬಂದರೆ ಸ್ವಲ್ಪ ಆ ಮಾತ್ಸರ್ಯದ ದಾಳಿಯಿಂದ ತಪ್ಪಿಸಿಕೊಳ್ಳಬಹುದೇನೋ..