Asianet Suvarna News Asianet Suvarna News

ಎಸ್ಸೆಸ್ಸೆಲ್ಸಿ ಪರೀಕ್ಷೆ: ಗೃಹ ಇಲಾಖೆಯೊಂದಿಗಿನ ಮಹತ್ವದ ಸಭೆಯಲ್ಲಿ ಏನೇನಾಯ್ತು..?

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ ನಿರ್ವಹಣೆಗೆ ಗೃಹ ಇಲಾಖೆಯಿಂದ ಬೇಕಿರುವ ವಿವಿಧ ರೀತಿಯ ಸಹಕಾರ ಕುರಿತು ಚರ್ಚಿಸಲು ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅದರ ವಿವರ ಈ ಕೆಳಗಿನಂತಿದೆ.

govt is ready to conduct sslc exam smoothly In COVID-19 panic says suresh kumar
Author
Bengaluru, First Published Jun 1, 2020, 4:41 PM IST

ಬೆಂಗಳೂರು, (ಜೂನ್.01): ಇದೇ ಮೊದಲ ಬಾರಿ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತಡವಾಗಿ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ಮತ್ತು ಸಮರ್ಪಕ ನಿರ್ವಹಣೆಗೆ ವಿಶೇಷವಾಗಿ ಗೃಹ ಮತ್ತು ಆರೋಗ್ಯ ಇಲಾಖೆಗಳ ಹೆಚ್ಚಿನ ಸಹಾಯ-ಸಹಕಾರಗಳೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಜೂ. 25ರಿಂದ ನಡೆಯುತ್ತಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಸುಗಮ ನಿರ್ವಹಣೆ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳ ಕುರಿತು ಇಂದು (ಸೋಮವಾರ) ವಿಧಾನಸೌಧದಲ್ಲಿ ಗೃಹ ಸಚಿವ ಬೊಮ್ಮಾಯಿಯವ ನೇತೃತ್ವದಲ್ಲಿ ಗೃಹ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರ ಸಭೆಯಲ್ಲಿ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇಡೀ ನಾಡಿನ ಮಕ್ಕಳಿಗೆ ಬೇಕಾಗಿದ್ದು, ಅವರ ಹಿತದೃಷ್ಟಿಯಿಂದ ಪರೀಕ್ಷೆ ನಡೆಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

SSLC ಪರೀಕ್ಷೆ: ವಿದ್ಯಾರ್ಥಿಗಳು, ಪೋಷಕರು ಗಮನಿಸಬೇಕಾದ ಸಂಗತಿ

ನಾಡಿನ ಮಕ್ಕಳ ಹಿತದೃಷ್ಟಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಬೇಕೆನ್ನುವುದನ್ನು ರಾಜ್ಯದ ಘನ ಉಚ್ಛ ನ್ಯಾಯಾಲಯವೂ ಪುರಸ್ಕರಿಸಿದೆ. ಆದರೆ ಈ ಬಾರಿಯ ಪರೀಕ್ಷೆ ಬೇಕು-ಬೇಡ ಎಂಬ ಕೆಲ ಮನಸ್ಥಿತಿಗಳ ಮಧ್ಯೆ ನ್ಯಾಯಾಲಯವೂ ಈ ಕುರಿತು ಕಣ್ಗಾವಲು ನಡೆಸುತ್ತಿದ್ದು, ಅದಕ್ಕಾಗಿ ಗೃಹ ಇಲಾಖೆಯ ಹೆಚ್ಚಿನ ಸಹಾಯ ಸಹಕಾರದ ಅಗತ್ಯವಿದೆ ಎಂದು ಗೃಹ ಸಚಿವರಲ್ಲಿ ಮನವಿ ಮಾಡಿದರು.

ಕೋವಿಡ್-19 ನಂತಹ ಸಾಂಕ್ರಾಮಿಕ ರೋಗದಿಂದಾಗಿ ತಡವಾಗಿ ನಡೆಯುತ್ತಿರುವ ಈ ಬಾರಿಯ ಪರೀಕ್ಷೆಯ ಸುಗಮ ನಿರ್ವಹಣೆ ಮತ್ತು ಪರೀಕ್ಷೆಯ ಪಾವಿತ್ರ್ಯ ಕಾಪಾಡುವ ಹಿನ್ನೆಲೆಯಲ್ಲಿ ಗೃಹ ಇಲಾಖೆಯ ಸಹಕಾರ ಈ ಬಾರಿ ಎಂದಿಗಿಂತ ಹೆಚ್ಚಾಗಿದೆ ಎಂದ ಸುರೇಶ್‍ಕುಮಾರ್, ಕೋವಿಡ್ ಹಿನ್ನೆಲೆಯಲ್ಲಿ ವಿಶೇಷವಾಗಿ ಇಲಾಖೆ ಕೈಗೊಂಡ ಕ್ರಮಗಳು ಮತ್ತು ಗೃಹ ಇಲಾಖೆ ಯಾವ ಯಾವ ಹಂತದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ವಿವರಿಸಿದರು.

ಗೃಹ ಇಲಾಖೆಯಿಂದ ವಿಶೇಷ ಕಟ್ಟುನಿಟ್ಟಿನ ಕ್ರಮ
govt is ready to conduct sslc exam smoothly In COVID-19 panic says suresh kumar

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವುದು ಶಿಕ್ಷಣ ಇಲಾಖೆ ಜವಾಬ್ದಾರಿಯಾಗಿದ್ದರೂ ಈ ಬಾರಿಯ ಪರೀಕ್ಷೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಗೃಹ ಇಲಾಖೆ ಎಲ್ಲ ರೀತಿಯ ವಿಶೇಷ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ತಡವಾಗಿ ನಡೆಯುತ್ತಿರಬಹುದು. ಆದರೆ ರಾಜ್ಯದ 8.5 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಯಾವುದೇ ರೀತಿಯಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಮಾಡುವ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದಲೂ ಶಾಲಾ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೇತೃತ್ವದಲ್ಲಿ ಇಡೀ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳನ್ನು ಗಮನಿಸದ್ದೇನೆ. ಇದು ನಿಜಕ್ಕೂ ಅತ್ಯಂತ ಶ್ಲಾಘನೀಯ ಕಾರ್ಯವಾಗಿದ್ದು, ಈ ಬಾರಿಯ ಪರೀಕ್ಷೆಗೆ ಮತ್ತು ಯಾವೊಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ಅಗತ್ಯ ಗಮನ ಹರಿಸಲಾಗುವುದು ಎಂದು ಸಚಿವ ಬೊಮ್ಮಾಯಿ ತಿಳಿಸಿದರು.

ಇಡೀ ನಾಡಿನ ಮಕ್ಕಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಉತ್ಸುಕರಾಗಿದ್ದಾರೆ. ಪರೀಕ್ಷೆ ಬೇಡ ಎಂದು ಯಾವೊಬ್ಬ ಮಗುವೂ ಹೇಳಿಲ್ಲ. ಇದು ಮಕ್ಕಳು ಮತ್ತು ಪರೀಕ್ಷಾ ಮಂಡಳಿಯ ಮಧ್ಯದ ವಿಷಯ ಮಾತ್ರ. ಈ ಬಾರಿ ಕೆಲ ಮನಸ್ಸುಗಳು ಪರೀಕ್ಷೆಯನ್ನು ಈ ಪರೀಕ್ಷೆ ನಡೆಸುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಘನ ಉಚ್ಛ ನ್ಯಾಯಾಲಯದ ಆದೇಶ ಪಾಲನೆ ಈ ಬಾರಿಯ ಪರೀಕ್ಷೆಯ ಸುಗಮ ನಿರ್ವಹಣೆಗೆ ಎಲ್ಲ ರೀತಿಯ ಕ್ರಮಗಳನ್ನು ಗೃಹ ಇಲಾಖೆ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗಡಿ ರಾಜ್ಯದಿಂದ ಬರುವ ಮಕ್ಕಳು ಪರೀಕ್ಷೆಗೆ ಹಾಜರಾಗುವಂತೆ ಮಾಡುವುದರಿಂದ ಹಿಡಿದು ಪರೀಕ್ಷಾ ಕೇಂದ್ರಗಳು, ಪ್ರಶ್ನೆ ಪತ್ರಿಕೆ ಸಂಗ್ರಹಿಸಿಡಲಾದ ತಾಲೂಕು, ಜಿಲ್ಲಾ ಖಜಾನೆಗಳು, ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ರವಾನೆ, ಮತ್ತು ಪರೀಕ್ಷಾ ಕೇಂದ್ರದ ಬಳಿಯ ಆರೋಗ್ಯ ತಪಾಸಣಾ ಕೇಂದ್ರ, ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಸಾಗಿಸುವ ವಾಹನ ಸೇರಿದಂತೆ ಅಗತ್ಯವಿದ್ದೆಡೆಯಲ್ಲೆಲ್ಲಾ ನಮ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದು ಪರೀಕ್ಷಾ ಕಾರ್ಯದ ಸುಗಮ ನಿರ್ವಹಣೆಗೆ ಶ್ರಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್ನೂ ಸಮಯವಿರುವುದರಿಂದ ಪರೀಕ್ಷೆಗಿಂತ ಒಂದು ವಾರದ ಮೊದಲೇ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ಮಕ್ಕಳನ್ನು ಆಯಾ ಮಟ್ಟದಲ್ಲೇ ಆರೋಗ್ಯ ತಪಾಸಣೆ ಮಾಡುವುದರಿಂದ ಮಕ್ಕಳಲ್ಲಿ ತಮ್ಮ ಸುರಕ್ಷತೆ ಕುರಿತು ಸರ್ಕಾರ ಕೈಗೊಳ್ಳುತ್ತಿರುವ ಉಪಕ್ರಮಗಳ ಹಿನ್ನೆಲೆಯಲ್ಲಿ ಆತ್ಮವಿಶ್ವಾಸ ಮೂಡಿಸಲಿರುವುದರಿಂದ ಈ ಕುರಿತಂತೆ ಗಮನ ಹರಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು

Follow Us:
Download App:
  • android
  • ios