ಆನ್‌ಲೈನ್ ಶಿಕ್ಷಣ ಜೊತೆಗೆ ಆಫ್‌ಲೈನ್ ಪಾಠಕ್ಕೆ ಸಲಹೆ: ಸರ್ಕಾರಕ್ಕೆ ತಜ್ಞರ ಸಮಿತಿ 10 ಶಿಫಾರಸು!
ಆನ್‌ಲೈನ್ ಶಿಕ್ಷಣ ಜೊತೆಗೆ ಆಫ್‌ಲೈನ್ ಪಾಠಕ್ಕೆ ಸಲಹೆ| ಆನ್‌ಲೈನ್ ಇಡೀ ದಿನ ಬೇಡ, ಸೀಮಿತವಾಗಿರಲಿ| ಎಲ್‌ಕೆಜಿಯಿಂದ 10ನೇ ಕ್ಲಾಸ್‌ವರೆಗೆ ಅನ್ವಯ| ಶಾಲೆಗಳು ಆರಂಭವಾಗುವವರೆಗೂ ಆನ್‌ಲೈನ್, ಆಫ್‌ಲೈನ್ ಪಾಠ| ಆ ನಂತರ ಮಾಡುವಂತಿಲ್ಲ| ತಜ್ಞರ ಸಮಿತಿ 10 ಶಿಫಾರಸು| ವರದಿ ಅಧ್ಯಯನ ಮಾಡಿ ಅಂತಿಮ ನಿರ್ಧಾರ: ರಾಜ್ಯ ಸರ್ಕಾರ
ಬೆಂಗಳೂರು(ಜು.08): ವಿದ್ಯಾರ್ಥಿಗಳಿಗೆ ಜ್ಞಾನ ನೀಡಲು ಆನ್‌ಲೈನ್ ಶಿಕ್ಷಣ ಪರಿಪೂರ್ಣ ಮಾದರಿಯಲ್ಲ. ವಯಸ್ಸು ಹಾಗೂ ತರಗತಿಗೆ ಅನುಗುಣವಾಗಿ ಮಕ್ಕಳಿಗೆ ಆನ್‌ಲೈನ್ ಜತೆಗೆ ಆಫ್‌ಲೈನ್ ಮೂಲಕವೂ ಶಿಕ್ಷಣ ನೀಡಬೇಕು. ಆನ್‌ಲೈನ್ ಮಿತಿಯಲ್ಲಿರಬೇಕು. ದಿನ ಪೂರ್ತಿ ಆನ್‌ಲೈನ್ ಶಿಕ್ಷಣ ಸಲ್ಲದು.
ಹೀಗೆ ಸೀಮಿತ ಮಟ್ಟದಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಅವಕಾಶ ನೀಡುವುದರ ಜತೆಗೆ ಆಫ್‌ಲೈನ್ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂಬ ಪ್ರಮುಖ ಶಿಫಾರಸು ಸೇರಿದಂತೆ 10 ಶಿಫಾರಸುಗಳನ್ನು ಒಳಗೊಂಡ ತಂತ್ರಜ್ಞಾನಾಧಾರಿತ ಶಿಕ್ಷಣದ ವರದಿಯನ್ನು ಡಾ. ಎಂ.ಕೆ. ಶ್ರೀಧರ್ ನೇತೃತ್ವದ ತಜ್ಞರ ಸಮಿತಿ ಮಂಗಳವಾರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ಅವರಿಗೆ ಸಲ್ಲಿಸಿತು.
ಡಿಡಿಯಲ್ಲಿ ಮಕ್ಕಳಿಗೆ ಬೋಧನೆ: ಸುಳ್ಳು ಸುದ್ದಿಯಿಂದ ಪೋಷಕರು ಬೇಸ್ತು
ಈ ವರದಿಯಲ್ಲಿ ಪೂರ್ವ ಪ್ರಾಥಮಿಕದಿಂದ ಆರನೇ ತರಗತಿವರೆಗಿನ ಮಕ್ಕಳಿಗೆ ಅರ್ಧ ಗಂಟೆ ಅವಧಿಗಳು, 6-10ನೇ ತರಗತಿ ಮಕ್ಕಳಿಗೆ 45 ನಿಮಿಷ ಮಾತ್ರ ಆನ್‌ಲೈನ್‌ನಲ್ಲಿ ಶಿಕ್ಷಣ, ಪೂರ್ವ ಪ್ರಾಥಮಿಕದಿಂದ ಎರಡನೇ ತರಗತಿವರೆಗಿನ ಮಕ್ಕಳಿಗೆ ಪೋಷಕರ ಕಡ್ಡಾಯ ಉಪಸ್ಥಿತಿಯಲ್ಲಿ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಲಾಗಿದೆ. ಶಾಲೆ ಆರಂಭವಾಗುವವರೆಗೂ ಆನ್‌ಲೈನ್ ಶಿಕ್ಷಣ ನೀಡಬಹುದು ಎಂದು ತಿಳಿಸಲಾಗಿದೆ.
ವರದಿಯಲ್ಲೇನಿದೆ?:
ವರದಿಯನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು, 3ರಿಂದ 6 ವರ್ಷದ ಪೂರ್ವ ಪ್ರಾಥಮಿಕ (ಪ್ರಿಕೆಜಿ/ಎಲ್‌ಕೆಜಿ/ಯುಕೆಜಿ) ವಿದ್ಯಾರ್ಥಿಗಳಿಗೆ ಆಟ, ಕಥೆ, ಪ್ರಾಸ ಸೇರಿದ ನವೀನ ಚಟುವಟಿಕೆಗಳನ್ನು ಮಾತ್ರ ಪಾಲಕರ ಕಡ್ಡಾಯ ಉಪಸ್ಥಿತಿಯಲ್ಲಿ ನೇರ ಅಥವಾ ಮುದ್ರಿತ ಬೋಧನಾ ವಿಧಾನಗಳ ಕಲಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಈ ರೀತಿಯ ಶಿಕ್ಷಣವನ್ನು ವಾರಕ್ಕೆ 3 ದಿನ, ಪ್ರತಿದಿನ ಒಂದು ಅವಧಿಯಂತೆ ಕಲಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದರು.
ಆನ್‌ಲೈನ್ ಶಿಕ್ಷಣ ಕುರಿತು ಇಂದು ಹೈಕೋರ್ಟ್ ತೀರ್ಪು
1 ರಿಂದ 2ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಆಟ, ಕಥೆಯ ರೂಪದ ನವೀನ ಚಟುವಟಿಕೆಗಳನ್ನು ವಾರಕ್ಕೆ 3 ದಿನ, ಪ್ರತಿದಿನ 2 ಅವಧಿಯ ಕಲಿಕೆಗೆ ಅವಕಾಶ ನೀಡಬಹುದು ಎಂದು ಶಿಫಾರಸು ಮಾಡಲಾಗಿದೆ.
3ರಿಂದ 5ನೇ ತರಗತಿಗಳಿಗೆ ವಾರಕ್ಕೆ 5 ದಿನ, ಪ್ರತಿದಿನ 30 ನಿಮಿಷದ 2 ಅವಧಿಗಳನ್ನು ಆನ್ ಲೈನ್ ಬೋಧನೆ, ಪಠ್ಯಕ್ಕೆ ಪೂರಕ ಬೋಧನೆಯನ್ನು ಅಳವಡಿಸಿಕೊಳ್ಳಬಹುದು.
6ರಿಂದ 8ನೇ ತರಗತಿಗೆ 30ರಿಂದ 45 ನಿಮಿಷಗಳ ಗರಿಷ್ಠ 3 ಅವಧಿ ಹಾಗೂ 9-10ನೇ ತರಗತಿಗೆ 30-45 ನಿಮಿಷಗಳ ಪ್ರತಿದಿನದ ಗರಿಷ್ಠ 4 ಅವಧಿ ಪರ್ಯಾಯ ಕಲಿಕೆಯನ್ನು ಶಿಫಾರಸು ಮಾಡಿದೆ ಎಂದು ಸಚಿವರು ಹೇಳಿದರು.
ಮಕ್ಕಳ ಹಿತ ಮುಖ್ಯ:
ವರದಿ ಸಲ್ಲಿಸಿ ಮಾತನಾಡಿದ ಪ್ರೊ. ಎಂ.ಕೆ.ಶ್ರೀಧರ್, ಕೊರೋನಾ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಮಕ್ಕಳ ಶಿಕ್ಷಣ ಕಲಿಕೆಯ ಮುಂದುವರಿಕೆಗೆ ತೊಂದರೆಯಾಗಬಾರದು. ಮುಂದುವರಿಕೆ ಕ್ರಮಗಳಿಂದ ಮಕ್ಕಳ ಮಾನಸಿಕ ಆರೋಗ್ಯದಲ್ಲಿ ವ್ಯತ್ಯಯವಾಗದಂತೆ ಯಾವ ರೀತಿ ಮುಂದುವರೆಸಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು ಸಮಿತಿ ವರದಿ ಸಲ್ಲಿಸಿದೆ ಎಂದು ಹೇಳಿದರು.
ಸಮಿತಿ ಸದಸ್ಯರಾದ ಡಾ.ವಿ.ಪಿ. ನಿರಂಜನಾರಾಧ್ಯ,ಬಿ.ಎಸ್. ಹೃಷಿಕೇಶ್, ಡಿ. ಶಶಿಕುಮಾರ್, ಪ್ರೀತಿ ವಿಕ್ರಂ, ಎಚ್.ಎನ್.ಗೋಪಾಲಕೃಷ್ಣ, ಎಂ.ಆರ್. ಮಾರುತಿ, ಸತ್ಯಮೂರ್ತಿ, ಕೃಷ್ಣಾಜಿ, ಮಮತಾ, ಸಮಿತಿ ಸದಸ್ಯ ಕಾರ್ಯದರ್ಶಿ ಡಾ. ಎಂ.ಟಿ. ರೇಜು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಇದ್ದರು.
'ಅಪ್ಪಾ ಆನ್ ಲೈನ್ ಕ್ಲಾಸ್‌ಗೆ ಮೊಬೈಲ್ ಬೇಕು' ತಂದುಕೊಡಲಾಗದ ರೈತ ಸುಸೈಡ್
ಯಾರಿಗೆ ಹೇಗೆ?
- ಪ್ರಿಕೆಜಿ/ಎಲ್‌ಕೆಜಿ/ಯುಕೆಜಿ: ಪಾಲಕರ ಕಡ್ಡಾಯ ಉಪಸ್ಥಿತಿಯಲ್ಲಿ ವಾರಕ್ಕೆ 3 ದಿನ; 30 ನಿಮಿಷದ ತಲಾ 1 ಅವಧಿ
- 1 ರಿಂದ 2ನೇ ತರಗತಿ: ಪಾಲಕರ ಕಡ್ಡಾಯ ಉಪಸ್ಥಿತಿಯಲ್ಲಿ ವಾರಕ್ಕೆ 3 ದಿನ, ತಲಾ 30 ನಿಮಿಷದ 2 ಅವಧಿ
- 3ರಿಂದ 5ನೇ ತರಗತಿ: ವಾರಕ್ಕೆ 5 ದಿನ, ಪ್ರತಿದಿನ 30 ನಿಮಿಷದ 2 ಅವಧಿ
- 6ರಿಂದ 8ನೇ ತರಗತಿ: ಪ್ರತಿದಿನ 30ರಿಂದ 45 ನಿಮಿಷಗಳ ಗರಿಷ್ಠ 3 ಅವಧಿ
- 9-10ನೇ ತರಗತಿ: ಪ್ರತಿದಿನ 30-45 ನಿಮಿಷಗಳ ಗರಿಷ್ಠ 4 ಅವಧಿ
ಬೋಧನೆ ಹೇಗಿರಬೇಕು?
- ಪಠ್ಯವಸ್ತುವನ್ನು ಹೇಗಿದೆಯೋ ಹಾಗೆಯೇ ಬೋಧಿಸಬಾರದು
- ಪ್ರತಿ ಶಾಲೆ ಪರ್ಯಾಯ ಶೈಕ್ಷಣಿಕ ಪಠ್ಯಕ್ರಮ ಕ್ಯಾಲೆಂಡರ್ ಮತ್ತು ವೇಳಾಪಟ್ಟಿರಚಿಸಬೇಕು.
- ವಿಭಿನ್ನ ವಿಧಾನಗಳ ಜೊತೆ ಸಂಯೋಜಿತ ವಿಧಾನ ಅನುಸರಿಸಬೇಕು.
- ಶಿಕ್ಷಣ ವಿಧಾನವು ಸಂವಾದಾತ್ಮವಾಗಿರಬೇಕು.
- ಆಫ್‌ಲೈನ್ ಶಿಕ್ಷಣದಲ್ಲಿ ಮಕ್ಕಳಿಗೆ ಸಂವಾದನಾತ್ಮಕ ಚಟುವಟಿಕೆ ಒದಗಿಸಬೇಕು
- ವರ್ಕ್ಶೀಟ್ ಚಟುವಟಿಕೆ, ಹಾಳೆಗಳು, ಶಾಲೆಯಿಂದ ಪೋಷಕರಿಗೆ ಹ್ಯಾಂಡ್-ಔಟ್ ನೀಡಬೇಕು
ಆನ್‌ಲೈನ್ ಶಿಕ್ಷಣಕ್ಕೆ ಸ್ಮಾರ್ಟ್ ಫೋನ್ ಸಮೀಕ್ಷೆ!
ಶಿಕ್ಷಣ ಇಲಾಖೆ ಏನು ಮಾಡಬೇಕು?
- ಶಿಕ್ಷಣದ ಮುಂದುವರಿಕೆಗೆ ವಿವಿಧ ವೇದಿಕೆ ಸ್ಥಾಪಿಸಬೇಕು.
- ದೂರದರ್ಶನ ಮತ್ತು ರೇಡಿಯೋ ಪ್ರಸಾರವನ್ನು ಮರು ಆರಂಭಿಸಬೇಕು.
- ಗ್ರಾಮೀಣ/ನಗರ, ಜನದಟ್ಟಣೆ/ವಿರಳ ಜನದಟ್ಟಣೆ ಶಾಲೆ ಮತ್ತು ಸೋಂಕಿನ ಪ್ರಕರಣಗಳ ಸಂಖ್ಯೆ ಆಧಾರದ ಮೇಲೆ ಶಾಲೆಗಳು ಕಾರ್ಯನಿರ್ವಹಿಸಬೇಕು
- ಶಾಲಾ ದಿನಗಳ ಸಂಖ್ಯೆ, ಸುರಕ್ಷತಾ, ಹಣ ಮತ್ತು ಮಕ್ಕಳ ಮನೆಗೆ ಕಲಿಕಾ ಸಾಮಗ್ರಿ ತಲುಪಿಸುವ ಬಗ್ಗೆ ಎಸ್‌ಒಪಿಯಲ್ಲಿ ತಿಳಿಸಬೇಕು.
- ಮಾರ್ಗಸೂಚಿ ಉಲ್ಲಂಘನೆ ಸಂಬಂಧ ಪೋಷಕರು ನೀಡುವ ದೂರಿನಂತೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕು.
ವರದಿ ಅಧ್ಯಯನ ಮಾಡಿ, ಅದು ಸೂಚಿಸಿರುವ ಮಾರ್ಗಸೂಚಿ ಹಾಗೂ ಹೈಕೋರ್ಟ್‌ನ ತೀರ್ಪಿಗೆ ಅನುಗುಣವಾಗಿ, ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಯಮ ಸಿದ್ಧಪಡಿಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ದೂರದರ್ಶನ ಅಥವಾ ಆಕಾಶವಾಣಿ ಮೂಲಕ ಸೇತುಬಂಧ ಕಾರ್ಯಕ್ರಮ ಆರಂಭಿಸಲಾಗುವುದು.
- ಎಸ್.ಸುರೇಶ್ ಕುಮಾರ್, ಶಿಕ್ಷಣ ಸಚಿವ