ನವದೆಹಲಿ(ಜು.14): ಸಿಬಿಎಸ್‌ಇ 12ನೇ ತರಗತಿಯಲ್ಲಿ ಉತ್ತರ ಪ್ರದೇಶದ ಲಖನೌ ಮೂಲದ ದಿವ್ಯಾಂಶಿ ಜೈನ್‌ 600ಕ್ಕೆ 600 ಅಂಕದ ಮೂಲಕ 2020ರ ಟಾಪರ್‌ ಆಗಿದ್ದಾರೆ.

ಕೊರೋನಾದಿಂದಾಗಿ ಪರೀಕ್ಷೆಯೇ ರದ್ದಾದ ಭೂಗೋಳ ಹೊರತುಪಡಿಸಿ ಉಳಿದ ಎಲ್ಲ ವಿಷಯಗಳಲ್ಲಿ ದಿವ್ಯಾಂಶಿ 100ಕ್ಕೆ 100 ಅಂಕ ಗಳಿಸಿದ್ದರು. ಈ ಪ್ರಕಾರ ಆಕೆ ಎಲ್ಲ ವಿಷಯಗಳಲ್ಲಿ ಪಡೆದ ಸರಾಸರಿ ಲೆಕ್ಕ ಹಾಕಿ ಆಕೆ 600ಕ್ಕೆ 600 ಅಂಕಗಳನ್ನು ಪಡೆದಿದ್ದಾಗಿ ಘೋಷಿಸಲಾಗಿದೆ. ಲಖನೌನ ನವಯುಗ ರೇಡಿಯನ್ಸ್‌ ಸೀನಿಯರ್‌ ಸೆಕೆಂಡರಿ ಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದ ದಿವ್ಯಾಂಶಿ ಅವರ ತಂದೆ ಉದ್ಯಮಿಯಾಗಿದ್ದು, ಅವರ ತಾಯಿ ಮನೆಯನ್ನು ನಿರ್ವಹಿಸುತ್ತಿದ್ದಾರೆ.

ತಂದೆ-ತಾಯಿ ಪ್ರೋತ್ಸಾಹ ಹಾಗೂ ಶಿಕ್ಷಕರು ನೀಡಿದ ಮಾರ್ಗದರ್ಶನದ ಪ್ರತಿಫಲವಾಗಿಯೇ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ವಿದ್ಯಾಂಶು ತಿಳಿಸಿದ್ದಾರೆ. ಅಲ್ಲದೆ, ಇತಿಹಾಸದಲ್ಲಿ ತನಗೆ ವಿಶೇಷ ಆಸಕ್ತಿಯಿದ್ದು, ಇತಿಹಾಸದಲ್ಲೇ ಸಾಧನೆ ಮಾಡುವ ಇಂಗಿತ ವ್ಯಕ್ತಪಡಿಸಿರುವ ಆಕೆ ದೆಹಲಿಯ ವಿವಿಯಲ್ಲಿ ಬಿಎ(ಇತಿಹಾಸ)ಗೆ ಸೇರಲು ಅರ್ಜಿ ಹಾಕಿದ್ದಾಗಿ ತಿಳಿಸಿದ್ದಾರೆ.