ನವದೆಹಲಿ[ಡಿ.03]: ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶಾತಿ ಪರೀಕ್ಷೆ (ನೀಟ್‌)ಗೆ ಹಾಜರಾಗುವ ಅಭ್ಯರ್ಥಿಗಳು ಹಿಜಾಬ್‌, ಬುರ್ಖಾ, ಕರಾ ಹಾಗೂ ಕೃಪಾಣ ಧರಿಸಲು ಅನುಮತಿ ನೀಡಲಾಗಿದೆ. ಆದರೆ ಇಂಥ ವಸ್ತ್ರಗಳು ಅಥವಾ ಲೋಹದ ವಸ್ತುಗಳನ್ನು ಧರಿಸಿಕೊಂಡು ಹೋಗುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಗೇಟು ಹಾಕುವ ಒಂದು ಗಂಟೆ ಮುಂಚಿತವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಅಲ್ಲದೇ ವೈದ್ಯಕೀಯ ಕಾರಣಗಳಿಂದಾಗಿ ಡ್ರೆಸ್‌ ಕೋಡ್‌ ಪಾಲಿಸಲಾಗದ ಅಭ್ಯರ್ಥಿಗಳು, ಪ್ರವೇಶ ಪತ್ರ ವಿತರಿಸುವುದಕ್ಕಿಂತ ಮುನ್ನವೇ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಲಾಗಿದೆ. ನಕಲು ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪಾಸ್‌ಪೋರ್ಟ್‌ ಅಳತೆಯ ಫೋಟೋ ಜತೆಗೆ ಪೋಸ್ಟ್‌ ಕಾರ್ಡ್‌ ಅಳತೆಯ ಫೋಟೋವನ್ನೂ ಅಪ್‌ಲೋಡ್‌ ಮಾಡುವಂತೆ ಸೂಚನೆ ನೀಡಲಾಗಿದೆ. 2020ರ ಮೇ 3ರಂದು ನೀಟ್‌ ನಡೆಯಲಿದೆ.

ಈ ಫೋಟೋಗಳು ಪರೀಕ್ಷಾ ಕೇಂದ್ರದಲ್ಲಿ ಲಭ್ಯವಿರಲಿದ್ದು, ಪ್ರವೇಶ ಪತ್ರದೊಂದಿಗೆ ನೀಡಲಾಗುವ ಅರ್ಜಿಯಲ್ಲಿ ಲಗ್ಗತಿಸಬೇಕು. ಜತೆಗೆ 10ನೇ ಹಾಗೂ 12ನೇ ತರಗತಿಯ ಅಂಕ ಪಟ್ಟಿಯ ಪ್ರತಿ ಹಾಗೂ ನೋಂದಣಿ ಸಂಖ್ಯೆಯನ್ನೂ ನಮೂದಿಸಬೇಕು ಎಂದು ಸೂಚಿಸಲಾಗಿದೆ.