ಶಾಲೆಗಳಲ್ಲಿ ಅಲೆಕ್ಸಾ ಟೀಚರ್: ಮಕ್ಕಳಿಗೆ ಬೈಯಲ್ಲಾ, ಹೊಡಿಯಲ್ಲ!
ತಂತ್ರಜ್ಞಾನಕ್ಕೂ ಅಭಿವೃದ್ಧಿಗೂ ಅವಿನಾಭಾವ ಸಂಬಂಧ| ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿರುವ ತಂತ್ರಜ್ಞಾನ| ಸರ್ಕಾರಿ ಶಾಲೆಗಳಲ್ಲಿ ಅಲೆಕ್ಸಾ ವಾಯ್ಸ್ ಅಸಿಸ್ಟಂಟ್ ತಂತ್ರಜ್ಞಾನ| ಅಲೆಕ್ಸಾ ವಾಯ್ಸ್ ಅಸಿಸ್ಟಂಟ್ ಮೂಲಕ ಮಕ್ಕಳಿಗೆ ಬೋಧನೆ| ಸ್ಥಳೀಯ ಭಾಷೆಯಲ್ಲೂ ಶಿಕ್ಷಣ ನೀಡುವ ಅಲೆಕ್ಸಾ ವಾಯ್ಸ್ ಅಸಿಸ್ಟಂಟ್|
ಬೆಂಗಳೂರು(ಜು.10): ನಿಜ ತಂತ್ರಜ್ಞಾನಕ್ಕೂ ಅಭಿವೃದ್ಧಿಗೂ ಅವಿನಾಭಾವ ಸಂಬಂಧವಿದೆ. ಮಾನವ ಜಗತ್ತಿನ ಪ್ರತಿಯೊಂದೂ ಕ್ಷೇತ್ರವೂ ಅಭಿವೃದ್ಧಿ ಹೊಂದಲು ಇಂದು ತಂತ್ರಜ್ಞಾನದ ಸಹಾಯ ಅತ್ಯಗತ್ಯ.
ಅದರಂತೆ ಅತ್ಯಂತ ವೇಗವಾಗಿ ಬದಲಾವಣೆ ಕಾಣುತ್ತಿರುವ ಭಾರತೀಯ ಶಿಕ್ಷಣ ಕ್ಷೇತ್ರದಲ್ಲೂ ತಂತ್ರಜ್ಞಾನ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಕೇವಲ ಖಾಸಗಿ ಶಾಲೆಗಳಷ್ಟೇ ಅಲ್ಲದೇ, ಸರ್ಕಾರಿ ಶಾಲೆಗಳೂ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿವೆ.
ಅದರಂತೆ ದೇಶದ ಕೆಲವು ಸರ್ಕಾರಿ ಶಾಲೆಗಳು ಅಮೆಜಾನ್‌ನ ವಾಯ್ಸ್ ಅಸಿಸ್ಟಂಟ್ ಅಲೆಕ್ಸಾವನ್ನು ಬಳಸಿಕೊಳ್ಳುತ್ತಿವೆ. ಅಮರಾವತಿ ಮಹಾನಗರ ಪಾಲಿಕೆಯ ಶಾಲೆಯೊಂದರಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಅಲೆಕ್ಸಾ ವಾಯ್ಸ್ ಅಸಿಸ್ಟಂಟ್ ತಂತ್ರಜ್ಞಾನ ಬಳಸಲಾಗುತ್ತಿದೆ.
ಅಲ್ಲದೇ ಶಾಲಾ ಕೊಠಡಿಯಲ್ಲ ಶಿಕ್ಷಕಿಯ ಮೂರ್ತಿಯನ್ನು ಇಡಲಾಗಿದ್ದು, ಇದರ ಮೂಲಕ ಅಮೆಜಾನ್ ಅಲೆಕ್ಸಾ ವಾಯ್ಸ್ ಅಸಿಸ್ಟಂಟ್ ತಂತ್ರಜ್ಞಾನದಿಂದ ಬೋಧನೆ ನೀಡಲಾಗುತ್ತಿದೆ.
ಅದರಂತೆ ಮುಂಬೈನ ರಾಮಕೃಷ್ಣ ಅರ್ಮೆನ್ಸ್ ಮಾರ್ಗ್ ಮುನ್ಸಿಪಲ್ ಮರಾಠಿ ಶಾಲೆಯಲ್ಲೂ ಅಲೆಕ್ಸಾ ವಾಯ್ಸ್ ಅಸಿಸ್ಟಂಟ್ ತಂತ್ರಜ್ಞಾನವನ್ನು ಬಳಸಿ ಬೋಧನೆ ಮಾಡಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಶಾಲೆಯ ಶಿಕ್ಷಕಿ ಪೂಜಾ, ಬಹುತೇಕ ಬಡ ಕುಟುಂಬದಿಂದ ಬಂದಿರುವ ಮಕ್ಕಳಿಗೆ ತಂತ್ರಜ್ಞಾನದ ಮೂಲಕ ಬೋಧನೆ ನೀಡಲಾಗುತ್ತಿದ್ದು, ಮಕ್ಕಳು ಕೂಡ ಅತ್ಯಂತ ಆಸಕ್ತಿಯಿಂದ ಪಾಠ ಕೆಳುತ್ತಾರೆ ಎನ್ನುತ್ತಾರೆ.