ರಾಜ್ಯದ 300 ಪ್ರಿ ಸ್ಕೂಲ್‌ಗಳಿಗೆ ಮುಚ್ಚುವ ಭೀತಿ| ಮಕ್ಕಳ ಸೇರಿಸಲು ಪೋಷಕರ ಹಿಂದೇಟು, ಶಾಲೆಗಳಿಗೆ ಆರ್ಥಿಕ ಸಂಕಷ್ಟ| ಶಾಲೆ ಮಾರಾಟಕ್ಕೆ ಮುಂದಾದ ಆಡಳಿತ ಮಂಡಳಿಗಳು

ಬೆಂಗಳೂರು(ಮೇ.28): ಕೊರೋನಾ ಸೋಂಕಿನ ಭೀತಿಯಿಂದ ಪುಟ್ಟಮಕ್ಕಳನ್ನು ಪೂರ್ವ ಪ್ರಾಥಮಿಕ ಶಾಲೆಗೆ (ಪ್ರಿ ಸ್ಕೂಲ್‌) ಸೇರ್ಪಡೆ ಮಾಡಲು ಪೋಷಕರು ಹಿಂಜರಿಯುತ್ತಿರುವ ಪರಿಣಾಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ 300ಕ್ಕೂ ಹೆಚ್ಚಿನ ಶಾಲೆಗಳನ್ನು ಮಾರಾಟ ಮಾಡುವ ಸ್ಥಿತಿಗೆ ಆಡಳಿತ ಮಂಡಳಿಗಳು ಬಂದಿದೆ.

ಡೇ-ಕೇರ್‌, ಪ್ಲೇ ಹೋಂ ನಡೆಸುತ್ತಿರುವ ಸಾವಿರಾರು ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರ್ಪಡೆ ಮಾಡಲು ಮೇ ಮುಗಿಯುತ್ತಾ ಬಂದರೂ ಪಾಲಕರು ಮುಂದೆ ಬರುತ್ತಿಲ್ಲ, ಒಂದು ವೇಳೆ ಮಕ್ಕಳನ್ನು ಸೇರ್ಪಡೆ ಮಾಡಿದರೂ ಪುಟ್ಟಮಕ್ಕಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಹಾಕುವುದು ಸೇರಿದಂತೆ ಮುಂತಾದ ಸುರಕ್ಷತಾ ಕ್ರಮ ಕೈಗೊಳ್ಳುವುದು ಸುಲಭದ ವಿಷಯವಾಗಿಲ್ಲ. ಇದರ ಜೊತೆಗೆ ಸರ್ಕಾರ ಪೂರ್ವ ಪ್ರಾಥಮಿಕ ಶಾಲೆಗಳನ್ನು ನಡೆಸಲು ಯಾವಾಗ ಅನುಮತಿ ನೀಡಲಿದೆ ಎಂಬುದೇ ತಿಳಿದಿಲ್ಲ. ಅಲ್ಲಿಯವರೆಗೂ ಶಾಲಾ ಕಟ್ಟಡದ ಬಾಡಿಗೆ, ಸಿಬ್ಬಂದಿ ವೇತನ, ನಿರ್ವಹಣೆ, ಬ್ಯಾಂಕ್‌ ಸಾಲ, ಬಡ್ಡಿ ಪಾವತಿಸುವುದು ಕಷ್ಟವಾಗುವ ಕಾರಣ ಆಡಳಿತ ಮಂಡಳಿಗಳು ಶಾಲೆಗಳನ್ನು ಮಾರಾಟ ಮಾಡಲು ಮುಂದಾಗಿವೆ.

ನಿಮಲ್ಲಿ ಎಮೋಷನಲ್ ಇಂಟಿಲೆಜೆಂಟ್ ಇದ್ಯಾ? ಬೆಳೆಯಿಸಿಕೊಳ್ಳಲು ಹೀಗ್ ಮಾಡಿ

ಬೆಂಗಳೂರು ನಗರದಲ್ಲಿಯೇ ಅಂದಾಜು 35 ಸಾವಿರಕ್ಕೂ ಹೆಚ್ಚಿನ ನರ್ಸರಿ, ಡೇ- ಕೇರ್‌, ಪ್ಲೇ ಹೋಮ್‌ಗಳಲ್ಲಿ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳಿವೆ. ಬಹುತೇಕ ಶಾಲೆಗಳು ಕೊರೋನಾ ಸೋಂಕು ಹರಡುತ್ತಿರುವ ಪರಿಣಾಮ ಬಂದ್‌ ಮಾಡಿರುವುದರಿಂದ ನಷ್ಟಅನುಭವಿಸಿವೆ. ಕಳೆದ ಮಾಚ್‌ರ್‍ನಿಂದ ಬೇಸಿಗೆ ಶಿಬಿರಗಳು, ಡೇ ಕೇರ್‌ ತರಗತಿ ಸೇರಿದಂತೆ ಯಾವುದೇ ರೀತಿಯಲ್ಲಿ ಶಾಲೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ.

ಕಾರಣವೇನು?:
ಶಾಲೆ ನಷ್ಟಅನುಭವಿಸುತ್ತಿರುವ ಬಗ್ಗೆ ಮಾತನಾಡಿದ ನಗರದ ಸೇಫ್‌ ಪ್ಲೇ ಹೋಮ್‌ ಶಾಲೆಯ ಪ್ರಶಾಂತ್‌, ‘ಸಾಮಾನ್ಯವಾಗಿ ಮಾಚ್‌ರ್‍-ಏಪ್ರಿಲ್‌ ತಿಂಗಳಿನಲ್ಲಿ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಈ ಬಾರಿ ಕೊರೋನಾದಿಂದ ಶಾಲೆಗಳು ಯಾವಾಗ ಆರಂಭವಾಗಲಿವೆ ಎಂಬುದೇ ತಿಳಿದಿಲ್ಲ. ಒಂದು ವೇಳೆ ಶಾಲೆ ಆರಂಭವಾದರೂ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಎಂಬ ನಂಬಿಕೆ ಇಲ್ಲ. ಅಲ್ಲಿಯವರೆಗೂ ಸಿಬ್ಬಂದಿಗೆ ವೇತನ ನೀಡಲು ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಇದರ ಬದಲಾಗಿ ಶಾಲೆಯನ್ನು ಮಾರಾಟವೇ ಸೂಕ್ತ ಎಂದು ನಿರ್ಧರಿಸುವುದಾಗಿ’ ಪ್ರತಿಕ್ರಿಯಿಸಿದರು.

‘ಬೆಂಗಳೂರು ನಗರದಲ್ಲಿಯೇ 300ಕ್ಕೂ ಹೆಚ್ಚಿನ ಶಾಲೆಗಳು ಈಗಾಗಲೇ ಮಾರಾಟಕ್ಕೆ ಮುಂದಾಗಿವೆ’ ಎಂದರು.

ಈ ಕೌಶಲ್ಯ ಕಲಿತರೆ ಉದ್ಯೋಗ ಗ್ಯಾರಂಟಿ

‘ಶಾಲೆಗಳು ಆರಂಭವಾದರೂ ಕೂಡ ಹೆಚ್ಚಿನ ಜನರು ವರ್ಕ್ ಫ್ರಂ ಹೋಮ್‌ ಮಾಡುತ್ತಿರುವುದರಿಂದ ತಮ್ಮ ಮಕ್ಕಳನ್ನು ಸುರಕ್ಷತೆ ದೃಷ್ಟಿಯಿಂದ ಮನೆಯಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಸರ್ಕಾರದ ನಿಯಮಗಳನ್ನು ಪಾಲಿಸಿ ಶಾಲೆಗಳನ್ನು ನಡೆಸುವುದು ಕೂಡ ಕಷ್ಟವಾಗಿರುವುದರಿಂದ ಶಾಲೆಗಳನ್ನು ಮುಚ್ಚುವ ಹಂತ ತಲುಪಿವೆ’ ಎಂದು ತಿಳಿಸಿದರು.

‘ಹೆಸರಾಂತ ಶಾಲೆಗಳು ಆನ್‌ಲೈನ್‌ ಶಿಕ್ಷಣ ಮೂಲಕ ತರಗತಿಗಳನ್ನು ನಡೆಸುತ್ತಿವೆ. ಆರ್ಥಿಕವಾಗಿ ಸಬಲರಾಗಿರುವವರು ಇಂತಹ ಶಾಲೆಗಳಿಗೆ ಕಳುಹಿಸುತ್ತಾರೆ. ಆದರೆ, ಮಧ್ಯಮ ವರ್ಗದ ಜನರನ್ನೇ ನಂಬಿಕೊಂಡು ಸಾವಿರಾರು ಶಾಲೆಗಳು ಪೂರ್ವ ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿವೆ. ಇಂತಹ ಎಲ್ಲಾ ಶಾಲೆಗಳು ಇಂದು ನಷ್ಟದಲ್ಲಿವೆ. ನಷ್ಟಅನುಭವಿಸುವ ಬದಲು ಮಾರಾಟ ಮಾಡುವುದಕ್ಕೆ ಮುಂದಾಗಿವೆ’ ಎಂದು ಹೇಳಿದರು.