ಬೆಂಗಳೂರು, (ಜುಲೈ.13): ರಾಜ್ಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ರದ್ದು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು 15-07-2020ರಿಂದ 27-07-2020ರ ಒಳಗಾಗಿ ಮುಗಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ಸೂಚಿಸಿತ್ತು. ಆದ್ರೇ ಇದೀಗ ಈ ಪೂರಕ ಪರೀಕ್ಷೆಯನ್ನು ಕೈಬಿಟ್ಟಿರುವ ಶಿಕ್ಷಣ ಇಲಾಖೆ, ರಾಜ್ಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಪೂರಕ ಪರೀಕ್ಷೆ ಇಲ್ಲದಂತೆ ಮುಂದಿನ ತರಗತಿಗೆ ಪಾಸ್ ಮಾಡುವಂತ ನಿರ್ಧಾರವನ್ನು ಕೈಗೊಂಡಿದೆ. 

ಕೊರೋನಾ ಮಧ್ಯೆ SSLCಯಲ್ಲಿ ಪಾಸಾದ ಶಿಕ್ಷಣ ಇಲಾಖೆಯಿಂದ ಮತ್ತೊಂದು ಪರೀಕ್ಷೆಗೆ ಡೇಟ್ ಫಿಕ್ಸ್

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ರಾಜ್ಯದ ಅನುತ್ತೀರ್ಣರಾದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ದಿನಾಂಕ 15-07-2020ರಿಂದ ದಿನಾಂಕ 27-07-2020ರ ಒಳಗಾಗಿ ಮುಕ್ತಾಯಗೊಳಿಸುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯಲ್ಲಿ ಸೂಚಿಸಿದ್ದರು. ಆದ್ರೆ, ಕೋವಿಡ್-19 ಸಂದರ್ಭದಲ್ಲಿ ಪೂರಕ ಪರೀಕ್ಷೆ ನಡೆಸುವುದು ಸೂಕ್ತವಲ್ಲವೆಂಬ ಅಭಿಪ್ರಾಯಕ್ಕೆ ಬರಲಾಗಿದೆ. ಹೀಗಾಗಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಪೂರಕ ಪರೀಕ್ಷೆ ಇಲ್ಲದೇ ಪಾಸ್ ಮಾಡುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇನ್ನೂ ಪ್ರಥಮ ಪಿಯುಸಿಯ ಒಂದೂ ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ, ಹಾಜರಾತಿಯ ಕೊರತೆ ಇರುವ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಯ ವೇಳೆಯಲ್ಲಿ ಒಂದು ಪರೀಕ್ಷೆ ನೀಡಲಾಗುತ್ತದೆ. ಅದರ ಆಧಾರದ ಮೇಲೆ ಪಾಸ್ ಮಾಡಲಾಗುತ್ತದೆ. ಈ ಮೂಲಕ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೇ ಮುಂದಿನ ತರಗತಿಗೆ ತೇರ್ಗಡೆ ಮಾಡುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.