Asianet Suvarna News Asianet Suvarna News

ಧಾರ​ವಾಡ: ಪ್ರವಾ​ಸೋ​ದ್ಯಮ ನೀತಿ ರೂಪಿ​ಸಲು ಚಿಂತನೆ

ಡಿಸಿ ಕಚೇ​ರಿ​ಯಲ್ಲಿ ನಡೆದ ಪ್ರಗತಿ ಪರಿ​ಶೀ​ಲ​ನೆ​ಯಲ್ಲಿ ಪ್ರವಾ​ಸೋ​ದ್ಯಮ ಸಚಿವ ಸಿ.ಟಿ. ರವಿ| ಧಾರ​ವಾ​ಡ​ದಲ್ಲಿ ಪ್ರವಾ​ಸೋ​ದ್ಯ​ಮದ ಅಭಿ​ವೃದ್ಧಿ ದೃಷ್ಟಿ​ಯಿಂದ ಪ್ರಸ್ತಾ​ವನೆ ಕಳು​ಹಿ​ಸಲು ಪ್ರವಾ​ಸೋ​ದ್ಯಮ ಇಲಾಖೆಗೆ ಸೂಚನೆ ನೀಡಿದ ಸಚಿವ ಸಿ.ಟಿ. ರವಿ| ಜಿಲ್ಲೆಯ ಜನಪ್ರತಿನಿಧಿಗಳು, ತಜ್ಞರು, ಸಾರ್ವಜನಿಕರನ್ನೊಳಗೊಂಡ ಜಿಲ್ಲಾ ಪ್ರವಾಸೋದ್ಯಮ ಸಲ​ಹಾ ಸಮಿತಿಯನ್ನು ಪುನರ್‌ ರಚಿಸಬೇಕು|

Thinking Tourism Policy in Dharwad District
Author
Bengaluru, First Published Oct 24, 2019, 7:31 AM IST

ಧಾರ​ವಾಡ[ಅ. 24]: ಸಾಂಸ್ಕೃ​ತಿ​ಕ​ವಾಗಿ ಐತಿ​ಹಾ​ಸಿಕ ಹಿನ್ನೆ​ಲೆ​ಯುಳ್ಳ ಧಾರ​ವಾ​ಡ​ದಲ್ಲಿ ಸಾಕಷ್ಟು ಅವ​ಕಾ​ಶ​ವಿದ್ದು ಪ್ರವಾ​ಸೋ​ದ್ಯ​ಮದ ಅಭಿ​ವೃದ್ಧಿ ದೃಷ್ಟಿ​ಯಿಂದ ಪ್ರಸ್ತಾ​ವನೆ ಕಳು​ಹಿ​ಸಲು ಪ್ರವಾ​ಸೋ​ದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಜಿಲ್ಲಾ​ಧಿ​ಕಾ​ರಿ​ಗ​ಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾ​ಧಿ​ಕಾರಿ ಕಚೇ​ರಿ​ಯಲ್ಲಿ ಬುಧ​ವಾರ ನಡೆದ ಇಲಾಖೆ ಪ್ರಗತಿ ಪರಿ​ಶೀ​ಲನೆಯಲ್ಲಿ ಮಾತ​ನಾ​ಡಿದ ಅವರು, ಈಗಾ​ಗಲೇ ರಾಜ್ಯದ 19 ಜಿಲ್ಲೆ​ಗಳ ಪ್ರವಾಸ ನಡೆ​ಸಿದ್ದು ಮಾಹಿತಿ ಸಂಗ್ರ​ಹಿಸಿ ಸುಸ್ಥಿರ ಪ್ರವಾ​ಸೋ​ದ್ಯಮ ನೀತಿ ರೂಪಿ​ಸಲು ಚಿಂತಿ​ಸ​ಲಾ​ಗು​ತ್ತಿದೆ ಎಂದ​ರು. ರಾಜ್ಯ ಪ್ರವಾಸೋದ್ಯಮ ಪಟ್ಟಿಯಲ್ಲಿ ಧಾರ​ವಾ​ಡ ಜಿಲ್ಲೆಯ 4 ಪ್ರವಾಸಿ ಸ್ಥಳಗಳಿದ್ದು, 2 ಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರೊಂದಿಗೆ ಚರ್ಚಿಸಿ, ಜಿಲ್ಲೆಯ ಜನಪ್ರತಿನಿಧಿಗಳ, ಅನುಭವಿಗಳ ಸಭೆ ಜರುಗಿಸಿ ಹೆಚ್ಚಿನ ಸ್ಥಳಗಳನ್ನು ರಾಜ್ಯ ಪ್ರವಾಸೋದ್ಯಮ ಪಟ್ಟಿಗೆ ಸೇರಿಸಲು ಕ್ರಮವಹಿಸಬೇಕು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯ ಜನಪ್ರತಿನಿಧಿಗಳು, ತಜ್ಞರು, ಸಾರ್ವಜನಿಕರನ್ನೊಳಗೊಂಡ ಜಿಲ್ಲಾ ಪ್ರವಾಸೋದ್ಯಮ ಸಲ​ಹಾ ಸಮಿತಿಯನ್ನು ಪುನರ್‌ ರಚಿಸಬೇಕು. ಜಿಲ್ಲೆಯ ಸಾಂಸ್ಕೃತಿಕ ಹಿನ್ನೆಲೆ ಬಿಂಬಿಸುವ 2020ರ ಕ್ಯಾಲೆಂಡರ್‌ನ್ನು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ರೂಪಿಸಲು ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್‌ ಮಾತನಾಡಿ, ಪ್ರವಾಸೋದ್ಯಮ ಪ್ರೋತ್ಸಾಹಿಸುವ ದೃಷ್ಟಿಯಿಂದ ಜಿಲ್ಲೆಯ 62 ಪ್ರಮುಖ ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳನ್ನು ಗುರುತಿಸಲಾಗಿದೆ. ಜಿಲ್ಲೆಯ ಪ್ರವಾಸ ತಾಣ, ಕಲೆ, ಸಾಹಿತ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವ ಕಾಪಿಟೇಬಲ್‌ ಪುಸ್ತಕವನ್ನು ಬರುವ ನವೆಂಬರ್‌ನಲ್ಲಿ ಪ್ರಕಟಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ನೀಡಿ​ದರು.

ಆಗ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಜಿಲ್ಲೆಯ ಅನೇಕ ಪ್ರವಾಸಿ ತಾಣಗಳಿಗೆ ಹೆಚ್ಚಿನ ಮೂಲಸೌಕರ್ಯಗಳ ಅಗತ್ಯವಿದೆ. ಥ್ಯಾಕರೆ ಸಮಾಧಿ, ಕೆಲಗೇರಿ ಕೆರೆ, ಧಾರವಾಡ ಕೋಟೆ, ಶಾಲ್ಮಲಾ ನದಿ ಉಗಮ ಸ್ಥಾನ ಸೇರಿದಂತೆ ಪ್ರಮುಖ ಸ್ಥಳಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯಾಗಬೇಕಿದೆ. ಅಲ್ಲದೇ, ಶಾಸ್ತ್ರೀಯ ಸಂಗೀ​ತ​ದಾ​ರರ ತವ​ರೂ​ರಾ​ಗಿದ್ದು ರಾಷ್ಟ್ರೀಯಮಟ್ಟದ ಹಿಂದೂ​ಸ್ತಾನಿ ಶಾಸ್ತ್ರೀಯ ಸಂಗೀ​ತೋ​ತ್ಸವ ನಡೆ​ಯ​ಬೇ​ಕೆಂದು ಸಚಿ​ವ​ರಲ್ಲಿ ಮನವಿ ಮಾಡಿ​ದರು. ಜಿಲ್ಲಾ ಉತ್ಸ​ವದ ಸಂದ​ರ್ಭ​ದ​ಲ್ಲಿಯೇ ಈ ಸಂಗೀ​ತೋ​ತ್ಸವ ಮಾಡ​ಬ​ಹುದು ಎಂದು ಸಚಿವ ಸಿ.ಟಿ. ರವಿ ಈ ಸಂದ​ರ್ಭ​ದಲ್ಲಿ ಪ್ರತಿ​ಕ್ರಿಯಿ​ಸಿ​ದರು.

ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌. ಚನ್ನೂರ, ರಾಜ್ಯ ಪತ್ರಗಾರ ಇಲಾಖೆಯ ನಿರ್ದೇಶಕ ಸಿ. ಗಂಗಾಧರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರಿ ಸಹಾ​ಯಕ ನಿರ್ದೇಶಕಿ ಮಂಜುಳಾ ಯಲಿ​ಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿ​ಕಾ​ರಿ​ಗಳು ಇದ್ದರು.
 

Follow Us:
Download App:
  • android
  • ios